ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ದೇಶದ್ರೋಹ ಕಾನೂನು’ ಮರುವಿಮರ್ಶೆ

ಐಪಿಸಿ 124ಎ ಸೆಕ್ಷನ್‌ ಕುರಿತು ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ ಕೇಂದ್ರ ಸರ್ಕಾರ
ಫಾಲೋ ಮಾಡಿ
Comments

ನವದೆಹಲಿ : ಭಾರತೀಯ ದಂಡ ಸಂಹಿತೆಯ (ಐಪಿಸಿ) 124ಎ ಸೆಕ್ಷನ್‌ (‘ದೇಶದ್ರೋಹ ಕಾನೂನು’) ಅನ್ನು ‘ಅರ್ಹ ವೇದಿಕೆ’ಯಿಂದ ಮರುಪರಿಶೀಲನೆಗೆ ಒಳಪಡಿಸಲು ನಿರ್ಧರಿಸಲಾಗಿದೆ. ಹಾಗಾಗಿ, ಈ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಪರಿಶೀಲನೆಗೆ ಒಳಪಡಿಸಲು ಸಮಯ ವ್ಯಯಿಸಬೇಡಿ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರವು ಸೋಮವಾರ ಮನವಿ ಮಾಡಿದೆ.

ಈ ಕಾನೂನಿಗೆ ಸಂಬಂಧಿಸಿದಂತೆ ವ್ಯಕ್ತವಾಗಿರುವ ವಿವಿಧ ಅಭಿಪ್ರಾಯಗಳು ಗಮನದಲ್ಲಿ ಇವೆ. ನಾಗರಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಕಳಕಳಿಯ ಅರಿವೂ ಇದೆ. ಅದೇ ಹೊತ್ತಿಗೆ, ‘ಈ ಮಹಾನ್‌ ದೇಶದ ಸಾರ್ವಭೌಮತೆ ಮತ್ತು ಏಕತೆಯನ್ನು ರಕ್ಷಿಸುವ ಬದ್ಧತೆಯೂ ಇದೆ’ ಎಂದು ಕೇಂದ್ರ ಗೃಹ ಸಚಿವಾಲಯವು ಕೋರ್ಟ್‌ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ವಿವರಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ‘ವಸಾಹತುಶಾಹಿ ಹೊರೆ’ಯನ್ನು ಕಳಚಿಕೊಳ್ಳುವ ನಿಲುವು ಹೊಂದಿದ್ದಾರೆ. ಮಾನವ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯದ ರಕ್ಷಣೆಯ ಪರವಾಗಿ ಪ್ರಧಾನಿ ಇದ್ದಾರೆ. ಹಾಗಾಗಿಯೇ ಅಪ್ರಸ್ತುತ ಎನಿಸಿದ್ದ 1,500ಕ್ಕೂ ಹೆಚ್ಚು ಕಾನೂನುಗಳು ಮತ್ತು 25 ಸಾವಿರಕ್ಕೂ ಹೆಚ್ಚು ನಿಯಮಗಳನ್ನು ರದ್ದುಪಡಿಸಲಾಗಿದೆ. ಉಪಯುಕ್ತತೆ ಕಳೆದುಕೊಂಡಿರುವ ಕಾನೂನುಗಳು ಮತ್ತು ಪದ್ಧತಿಗಳನ್ನು ರದ್ದುಪಡಿಸುವ ಮೂಲಕ ವಸಾಹತುಶಾಹಿ ಹೊರೆ ಕಳಚಿಕೊಳ್ಳಲು ಒಂದು ದೇಶವಾಗಿ ಭಾರತವು ಶ್ರಮವಹಿಸಿ ಕೆಲಸ ಮಾಡಬೇಕಿದೆ ಎಂದು ಪ್ರಧಾನಿ ಹೇಳಿದ್ದಾಗಿ ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ.

ಕಾನೂನು ತಜ್ಞರು, ವಿದ್ವಾಂಸರು, ಚಿಂತಕರು ಮತ್ತು ಜನರು ಈ ಕಾಯ್ದೆಯ ಬಗ್ಗೆ ವ್ಯಕ್ತಪಡಿಸಿದ ವಿವಿಧ ನಿಲುವುಗಳನ್ನು ಗಮನಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮೃತ್ಯುಂಜಯ ಕುಮಾರ್‌ ನಾರಾಯಣ್‌ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಹೇಳಿದ್ದಾರೆ.

ಹಲವು ಸರ್ಕಾರಗಳು ರಾಜಕೀಯ ವೈರತ್ವ ಸಾಧನೆಗಾಗಿ ‘ದೇಶದ್ರೋಹ’ ಕಾನೂನನ್ನು ದುರ್ಬಳಕೆ ಮಾಡಿಕೊಂಡಿವೆ ಎಂಬ ವಿಚಾರವು ಹಲವು ವರ್ಷಗಳಿಂದ ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ. ಹಾಗಾಗಿಯೇ, ಈ ಕಾನೂನನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಹಲವು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರನ್ನು ಶಿಕ್ಷಿಸುವುದಕ್ಕಾಗಿ ವಸಾಹತುಶಾಹಿ ಯುಗದಲ್ಲಿ ಈ ಕಾನೂನು ಬಳಕೆಯಾಗಿತ್ತು. ಸ್ವಾತಂತ್ರ್ಯ ಬಂದು 75 ವರ್ಷದ ನಂತರವೂ ಈ ಕಾನೂನಿನ ಅಗತ್ಯ ಇದೆಯೇ ಎಂಬ ಪ್ರಶ್ನೆಯೂ ಇದೆ.

ಎರಡು ದಿನ ಹಿಂದೆ ಸಮರ್ಥನೆ:

ಸುಪ್ರೀಂ ಕೋರ್ಟ್‌ಗೆ ಶನಿವಾರಸಲ್ಲಿಸಲಾಗಿದ್ದ ಪ್ರಮಾಣಪತ್ರವೊಂದರಲ್ಲಿ ಈ ಕಾನೂನನ್ನು ಕೇಂದ್ರವು ಸಮರ್ಥಿಸಿಕೊಂಡಿತ್ತು. ಸುಪ್ರೀಂ ಕೋರ್ಟ್‌ 1962ರಲ್ಲಿ ನೀಡಿದ್ದ ತೀರ್ಪೊಂದು (ಕೇದಾರನಾಥ ಮತ್ತು ಬಿಹಾರ ಸರ್ಕಾರದ ಪ್ರಕರಣ) ಈ ಕಾನೂನನ್ನು ಎತ್ತಿ ಹಿಡಿದಿತ್ತು. ನಂತರದ ಸುಮಾರು ಆರು ದಶಕಗಳಲ್ಲಿ ಕಾಲದ ಪರೀಕ್ಷೆಯಲ್ಲಿ ಈ ಕಾನೂನು ಗೆದ್ದಿದೆ. ದುರ್ಬಳಕೆ ಆಗುತ್ತಿದೆ ಎಂಬುದು ಕಾನೂನಿನ ಮರುಪರಿಶೀಲನೆಗೆ ಸಮರ್ಥನೆ ಆಗದು ಎಂದು ಈ ಪ್ರಮಾಣಪತ್ರದಲ್ಲಿ ಹೇಳಲಾಗಿತ್ತು.

‘ಕಾನೂನು ದುರ್ಬಳಕೆ ಆಗುತ್ತಿದೆ ಎಂಬ ಕಾರಣ ಕೊಟ್ಟು ಸಾಂವಿಧಾನಿಕ ಪೀಠದ ತೀರ್ಪನ್ನು ಮರುಪರಿಶೀಲನೆ ನಡೆಸಲಾಗದು. ಆಯಾಯ ಪ್ರಕರಣದಲ್ಲಿ ಹೇಗೆ ದುರ್ಬಳಕೆ ಆಗಿದೆ ಎಂಬುದನ್ನು ಕಂಡುಕೊಂಡು ಅದನ್ನು ತಡೆಯುವುದೇ ನಿಜವಾದ ಪರಿಹಾರ’ ಎಂದೂ ಈ ಪ್ರಮಾಣಪತ್ರದಲ್ಲಿ ಹೇಳಲಾಗಿತ್ತು.

ಕಾನೂನಿನಲ್ಲಿ ಸೂಚಿತ ಉದ್ದೇಶಗಳಿಗಲ್ಲದೆ ಬೇರೆ ಉದ್ದೇಶಗಳಿಗಾಗಿ ‘ದೇಶದ್ರೋಹ’ ಕಾನೂನಿನ ಬಳಕೆ ಮತ್ತು ದುರ್ಬಳಕೆಯ ಬಗ್ಗೆ ಕಳವಳ ವ್ಯಕ್ತವಾಗಿದೆ ಎಂದು ಸೋಮವಾರ ಸಲ್ಲಿಕೆಯಾದ ಪ್ರಮಾಣಪತ್ರದಲ್ಲಿ ಹೇಳಲಾಗಿದೆ.

124ಎ ಸೆಕ್ಷನ್‌ ಏನು ಹೇಳುತ್ತದೆ?

ಕಾನೂನುಬದ್ಧವಾಗಿ ಸ್ಥಾಪಿತವಾದ ಸರ್ಕಾರದ ವಿರುದ್ಧ ಮೌಖಿಕ ಅಥವಾ ಲಿಖಿತ, ಅಥವಾ ಸಂಕೇತಗಳು, ಅಥವಾ ದೃಶ್ಯಾಭಿವ್ಯಕ್ತಿ, ಅಥವಾ ಬೇರೆ ರೀತಿಯಲ್ಲಿ ದ್ವೇಷ ಹುಟ್ಟಿಸಲು ಯತ್ನಿಸಿದರೆ ಅಥವಾ ನಿಂದಿಸಿದರೆ, ಅಥವಾ ಸರ್ಕಾರದ ಬಗ್ಗೆ ಅಸಮಾಧಾನ ಮೂಡಿಸಲು ಯತ್ನಿಸಿದರೆ ಅಥವಾ ಕುಮ್ಮಕ್ಕು ನೀಡಿದರೆ ಜೀವಾವಧಿ ಶಿಕ್ಷೆ ವಿಧಿಸಬಹುದು. ಅದಕ್ಕೆ ದಂಡವನ್ನೂ ಸೇರಿಸಬಹುದು. ಅಥವಾ ಮೂರು ವರ್ಷವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು ಎಂದು 124ಎ ಸೆಕ್ಷನ್‌ ಹೇಳುತ್ತದೆ.

ರದ್ದತಿಯ ಸಲಹೆ ಕೊಟ್ಟಿದ್ದ ಕಾನೂನು ಆಯೋಗ

ಭಾರತೀಯ ದಂಡ ಸಂಹಿತೆಯ 124ಎ ಸೆಕ್ಷನ್‌ ಬಗ್ಗೆ ಮರುಚಿಂತನೆ ನಡೆಯಬೇಕು ಅಥವಾ ಅದನ್ನು ರದ್ದುಪಡಿಸಬೇಕು ಎಂದು ಕಾನೂನು ಆಯೋಗವು 2018ರಲ್ಲಿ ಹೇಳಿತ್ತು. ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತಿಯೊಂದೂ ಬೇಜವಾಬ್ದಾರಿ ಬಳಕೆಯನ್ನು ದೇಶದ್ರೋಹ ಎಂದು ಪರಿಗಣಿಸಲಾಗದು ಎಂದು ಆಯೋಗವು ಹೇಳಿತ್ತು.

‘ಸಕಾರಾತ್ಮಕ ಟೀಕೆಗೆ ದೇಶವು ಸಿದ್ಧವಿಲ್ಲ ಎಂದಾದರೆ ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯಾನಂತರದ ದಿನಗಳಿಗೆ ಯಾವ ವ್ಯತ್ಯಾಸವೂ ಇಲ್ಲದಂತಾಗುತ್ತದೆ’. ಸರ್ಕಾರದ ನಡವಳಿಕೆಯ ಬಗ್ಗೆ ಮೂಡುವ ಹತಾಶೆಯ ಅಭಿವ್ಯಕ್ತಿಯನ್ನು ದೇಶದ್ರೋಹ ಎನ್ನಲಾಗದು ಎಂದೂ ಆಯೋಗವು ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT