ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಜೆಐಗೆ ‘ಕೆಲವು ವಿದ್ಯಮಾನಗಳ’ ಬಗ್ಗೆ ಹಿರಿಯ ವಕೀಲ ದುಶ್ಯಂತ್ ದವೆ ಪತ್ರ

Published 6 ಡಿಸೆಂಬರ್ 2023, 16:46 IST
Last Updated 6 ಡಿಸೆಂಬರ್ 2023, 16:46 IST
ಅಕ್ಷರ ಗಾತ್ರ

ನವದೆಹಲಿ: ಪ್ರಕರಣಗಳನ್ನು ವಿಚಾರಣೆಗೆ ಪಟ್ಟಿ ಮಾಡುವಲ್ಲಿ ಹಾಗೂ ಅವುಗಳನ್ನು ಬೇರೆ ನ್ಯಾಯಪೀಠಗಳಿಗೆ ಹಂಚಿಕೆ ಮಾಡುವಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ‘ಕೆಲವು ವಿದ್ಯಮಾನಗಳ’ ಬಗ್ಗೆ ಹಿರಿಯ ವಕೀಲ ದುಶ್ಯಂತ್ ದವೆ ಅವರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ಹೈಕೋರ್ಟ್‌ ನ್ಯಾಯಮೂರ್ತಿಗಳ ವರ್ಗಾವಣೆ ಹಾಗೂ ಅವರಿಗೆ ಸುಪ್ರೀಂ ಕೋರ್ಟ್‌ಗೆ ಬಡ್ತಿ ನೀಡುವ ವಿಚಾರದಲ್ಲಿ ಕೊಲಿಜಿಯಂ ರವಾನಿಸಿದ ಶಿಫಾರಸುಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ವಿಳಂಬ ನೀತಿ ಅನುಸರಿಸುತ್ತಿದೆ ಎಂಬ ಆರೋಪವಿರುವ ಅರ್ಜಿಗಳು, ವಿಚಾರಣೆಗೆ ಬರುವ ಅರ್ಜಿಗಳ ಪಟ್ಟಿಯಿಂದ ಇದ್ದಕ್ಕಿದ್ದಂತೆ ಕಣ್ಮರೆಯಾದುದರ ಬಗ್ಗೆ ನ್ಯಾಯಮೂರ್ತಿ ಎಸ್‌.ಕೆ. ಕೌಲ್ ಅವರು ಆಶ್ಚರ್ಯ ವ್ಯಕ್ತಪಡಿಸಿದ ನಂತರದಲ್ಲಿ ದವೆ ಅವರು ಈ ಪತ್ರ ಬರೆದಿದ್ದಾರೆ.

‘ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿ ಕೆಲವು ಪ್ರಕರಣಗಳನ್ನು ವಿಚಾರಣೆಗೆ ಪಟ್ಟಿ ಮಾಡುವಲ್ಲಿ ಆಗುತ್ತಿರುವ ಕೆಲವು ಸಂಗತಿಗಳ ವಿಚಾರವಾಗಿ ನನಗೆ ನೋವಾಗಿದೆ’ ಎಂದು ದವೆ ಹೇಳಿದ್ದಾರೆ. ಕೆಲವು ವಕೀಲರು ಸಿಜೆಐ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಯತ್ನಿಸಿದ್ದರೂ, ಅವರಿಗೆ ಯಶಸ್ಸು ಸಿಗದ ಕಾರಣಕ್ಕೆ ತಾವು ಪತ್ರ ಬರೆಯಬೇಕಾಯಿತು ಎಂದು ಹೇಳಿದ್ದಾರೆ.

‘ಕೋರ್ಟ್‌ ಕೊಠಡಿ ಸಂಖ್ಯೆ 2, 4, 6 ಮತ್ತು 7ರಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳುವ ಪಟ್ಟಿಯಲ್ಲಿದ್ದ ಪ್ರಕರಣಗಳು ಬೇರೆಡೆ ವರ್ಗಾವಣೆ ಆಗಿ, ಬೇರೆ ನ್ಯಾಯಮೂರ್ತಿಗಳ ಪೀಠದ ಎದುರು ಪಟ್ಟಿಯಾಗಿವೆ. ಇಲ್ಲಿ ನಿಯಮಗಳನ್ನು ಪಾಲಿಸಿಲ್ಲ’ ಎಂದು ದವೆ ಬರೆದಿದ್ದಾರೆ. ಇವು ಅತ್ಯಂತ ಗೌರವ ಹೊಂದಿರುವ ಸಂಸ್ಥೆಗೆ ಒಳ್ಳೆಯದಲ್ಲ ಎಂದು ಹೇಳಿದ್ದಾರೆ. ಸಿಜೆಐ ಅವರು ಈ ವಿಚಾರವಾಗಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT