ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರತ್ವ ನೋಂದಣಿ ಅನುಷ್ಠಾನಕ್ಕೆ ಧೈರ್ಯ ತೋರದ ಕಾಂಗ್ರೆಸ್: ಅಮಿತ್‌ ಶಾ

ಟಿಎಂಸಿ ಸದಸ್ಯರಿಂದ ಗದ್ದಲ, ಕಲಾಪ ಬುಧವಾರಕ್ಕೆ ಮುಂದೂಡಿಕೆ
Last Updated 31 ಜುಲೈ 2018, 10:51 IST
ಅಕ್ಷರ ಗಾತ್ರ

ನವದೆಹಲಿ: ಅಸ್ಸಾಂನಲ್ಲಿರುವ ಅಕ್ರಮ ವಲಸಿಗರನ್ನು ಗುರುತಿಸುವ ಧೈರ್ಯವನ್ನು ಕಾಂಗ್ರೆಸ್ ಸರ್ಕಾರ ತೋರಲಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಸಭೆಯಲ್ಲಿ ಆರೋಪಿಸಿದರು.

ರಾಷ್ಟ್ರೀಯ ಪೌರ ನೋಂದಣಿ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ‘ಎನ್‌ಆರ್‌ಸಿಯು 1985ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರು ಸಹಿ ಹಾಕಿದ್ದ ಅಸ್ಸಾಂ ಒಪ್ಪಂದದ ಮುಂದುವರಿದ ರೂಪ. ಸುಪ್ರೀಂ ಕೋರ್ಟ್‌ ಆದೇಶದಂತೆ ಎನ್‌ಆರ್‌ಸಿ ಪಟ್ಟಿ ಸಿದ್ಧಪಡಿಸಲಾಗಿದೆ. ಅದರಲ್ಲಿ 40 ಲಕ್ಷ ಜನರ ಹೆಸರು ಒಳಗೊಂಡಿಲ್ಲ. ನೀವು ಯಾರನ್ನು ರಕ್ಷಿಸಲು ಬಯಸುತ್ತೀರಿ? ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ರಕ್ಷಿಸಲು ಬಯಸುತ್ತೀರಾ’ ಎಂದು ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.

‘ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು 1985ರ ಆಗಸ್ಟ್‌ 14ರಂದು ಅಸ್ಸಾಂ ಒಪ್ಪಂದಕ್ಕೆ ಸಹಿ ಹಾಕಿದ್ದರು. ನಂತರ ರಾಜ್ಯದಲ್ಲಿ ನಡೆದ ಚಳವಳಿ ಹಿಂಸಾರೂಪ ತಾಳಿ ಪ್ರತಿಭಟನಾಕಾರರ ಸಾವಿಗೂ ಕಾರಣವಾಗಿತ್ತು. ಇದು ಕಾಂಗ್ರೆಸ್ ಪ್ರಧಾನಿ ಕೈಗೊಂಡ ಕ್ರಮ. ಅವರಿಗೆ ಧೈರ್ಯವಿರಲಿಲ್ಲ. ನಮಗೆ ಧೈರ್ಯವಿದೆ. ನಾವದನ್ನು ಮಾಡುತ್ತಿದ್ದೇವೆ’ ಎಂದು ಶಾ ಹೇಳಿದರು.

ಶಾ ಮಾತಿಗೆ ಪ್ರತಿಪಕ್ಷಗಳಾದ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್‌ ಸದಸ್ಯರಿಂದ ತೀವ್ರ ಪ್ರತಿಭಟನೆ ವ್ಯಕ್ತವಾಯಿತು. ಗದ್ದಲವೂ ಸೃಷ್ಟಿಯಾಗಿ ಕಲಾಪ ಮುಂದೂಡಬೇಕಾಯಿತು.

ಮಾನವೀಯ ನೆಲೆಯಲ್ಲಿ ವ್ಯವಹರಿಸಿ: ಕಾಂಗ್ರೆಸ್ ಮನವಿ
ಅಸ್ಸಾಂನ ಎನ್‌ಆರ್‌ಸಿಯನ್ನು (ರಾಷ್ಟ್ರೀಯ ಪೌರ ನೋಂದಣಿ) ಅನುಷ್ಠಾನಗೊಳಿಸುವಾಗ ಮಾನವೀಯ ನೆಲೆಯಲ್ಲಿ ವ್ಯವಹರಿಸಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್‌ ಹೇಳಿದೆ.

ರಾಜ್ಯಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್, ಎನ್‌ಆರ್‌ಸಿ ಸೂಕ್ಷ್ಮ ವಿಚಾರವಾಗಿದ್ದು ಯಾವೊಬ್ಬ ಭಾರತೀಯನೂ ಅದರಿಂದ ಹೊರಗುಳಿಯುವಂತಾಗಬಾರದು. ಸರ್ಕಾರ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದೆ.

ಎನ್ಆರ್‌ಸಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ ತೃಣಮೂಲ ಕಾಂಗ್ರೆಸ್‌ ಸದಸ್ಯರು ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದ್ದಾರೆ. ಇದರಿಂದಾಗಿ ಕಲಾಪವನ್ನು ಒಂದು ಗಂಟೆಯ ಮಟ್ಟಿಗೆ ಮುಂದೂಡಲಾಯಿತು. ಮತ್ತೆ ಕಲಾಪ ಆರಂಭವಾದಾಗಲೂ ಪ್ರತಿಭಟನೆ ಮುಂದುವರಿದಿದೆ. ಹೀಗಾಗಿ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

‘ಜಾತಿ, ಧರ್ಮಕ್ಕೆ ಸಂಬಂಧಿಸಿದ್ದಲ್ಲ’: ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್ ಮಾತನಾಡಿ, ‘ಎನ್‌ಆರ್‌ಸಿ ನಿರ್ದಿಷ್ಟ ಜಾತಿ, ಧರ್ಮ ಮತ್ತು ಪ್ರದೇಶಕ್ಕೆ ಸಂಬಂಧಿಸಿದ್ದಲ್ಲ. ಯಾವನೇ ಒಬ್ಬ ವ್ಯಕ್ತಿಯನ್ನು ದೇಶದಿಂದ ಹೊರಹಾಕುವುದು ನಮಗೆ ಬೇಕಿಲ್ಲ. ಇದು ಕೇವಲ 40 ಲಕ್ಷ ಜನರಿಗೆ ಸಂಬಂಧಿಸಿದ್ದಲ್ಲ. ಅವರ ಮಕ್ಕಳು, ಕುಟುಂಬದವರನ್ನು ಸೇರಿಸಿದರೆ 1ರಿಂದ 1.5 ಕೋಟಿಯಷ್ಟಾಗಲಿದೆ’ ಎಂದರು.

ಎನ್‌ಆರ್‌ಸಿ ಪಟ್ಟಿಯಲ್ಲಿ ಇಲ್ಲದವರಿಗೆ ಕಾನೂನಿನ ನೆರವು ಒದಗಿಸಬೇಕು. ಅಂತಹವರ ಮೇಲೆ ದೌರ್ಜನ್ಯ ನಡೆಸಬಾರದು. ಯಾವುದೇ ರಾಜಕೀಯ ಪಕ್ಷವೂ ಇದನ್ನು ರಾಜಕೀಯ ಮತ್ತು ಚುನಾವಣೆ ವಿಷಯವನ್ನಾಗಿ ಮಾಡಬಾರದು ಎಂದೂ ಅವರು ಹೇಳಿದರು.

1951ರ ಬಳಿಕ ಇದೇ ಮೊದಲ ಬಾರಿಗೆ ಅಸ್ಸಾಂನ ಎನ್‌ಆರ್‌ಸಿ ಪರಿಷ್ಕರಿಸಿ ಕರಡು ಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗಿತ್ತು. 40.07 ಲಕ್ಷ ಜನರ ಹೆಸರು ಪಟ್ಟಿಯಲ್ಲಿ ಸೇರಿಲ್ಲದಿರುವುದು ಚರ್ಚೆಗೆ ಗ್ರಾಸವಾಗಿದೆ.

**
ಎನ್‌ಆರ್‌ಸಿ ಪಟ್ಟಿಯಲ್ಲಿ ಹೆಸರಿಲ್ಲದವರ ಪೈಕಿ ಮುಸ್ಲಿಮರು ಮತ್ತು ಹಿಂದೂಗಳೂ ಇದ್ದಾರೆ. ಉತ್ತರ ಪ್ರದೇಶ, ಬಿಹಾರದವರೂ ಇದ್ದಾರೆ.
– ರಾಮ್ ಗೋಪಾಲ್ ಯಾದವ್, ಎಸ್‌ಪಿ ಸಂಸದ

ಇದೊಂದು ಸೂಕ್ಷ್ಮ ವಿಚಾರ. ಇದರಲ್ಲಿ ಯಾರೂ ರಾಜಕೀಯ ಮಾಡಬಾರದು.
– ಪ್ರಸನ್ನ ಆಚಾರ್ಯ, ಬಿಜೆಡಿ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT