ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿಷೇಧಿತ ಜಮಾತ್–ಇ– ಇಸ್ಲಾಮಿ ಸಂಘಟನೆಯ ಮೂವರು ಮಾಜಿ ಸದಸ್ಯರು ನಾಮಪತ್ರ ಸಲ್ಲಿಸಿದ್ದಾರೆ.
ಜೈಲಿನಲ್ಲಿರುವ ಪ್ರತ್ಯೇಕತಾವಾದಿ ಸರ್ಜನ್ ಬರ್ಕತಿ ಅವರ ಪುತ್ರಿ ಸುಗ್ರಾ ಬರ್ಕತಿ ಕೂಡ ತಮ್ಮ ತಂದೆಯ ಪರವಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಪುಲ್ವಾಮಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಜಮಾತ್ ಸಂಘಟನೆಯ ಮಾಜಿ ಮುಖ್ಯಸ್ಥ ತಲತ್ ಮಝೀದ್ ನಾಮ ಪತ್ರ ಸಲ್ಲಿಸಿದ್ದಾರೆ.
ಕುಲ್ಗಾಮ್ ವಿಧಾನಸಭಾ ಕ್ಷೇತ್ರದಿಂದ ಜಮಾತ್ ಸಂಘಟನೆಯ ಮತ್ತೊಬ್ಬ ಮಾಜಿ ಸದಸ್ಯ ಸಯಾರ್ ಅಹಮದ್ ರೇಶಿ ನಾಮಪತ್ರ ಸಲ್ಲಿಸಿದ್ದಾರೆ.
'ಈಗಿನ ರಾಜಕೀಯ ಸ್ಥಿತಿಗಳನ್ನು ನೋಡಿದರೆ ಜಮಾತ್ ಮತ್ತು ಹುರಿಯತ್ ನಂತಹ ಸಂಘಟನೆ ಅಗತ್ಯವಿದೆ’ ಎಂದು ಪುಲ್ವಾಮಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಮಝೀದ್ ಹೇಳಿದ್ದಾರೆ.
‘ಆಶೀರ್ವಾದ ಮಾಡುವುದು ಅಥವಾ ಅವಮಾನ ಮಾಡುವುದು ಅಲ್ಲಾಗೆ ಬಿಟ್ಟಿದ್ದು, ಆದರೆ ಜನರ ಬಳಿ ನನಗೆ ಮತ ನೀಡುವಂತೆ ಕೇಳಿಕೊಳ್ಳುತ್ತೇನೆ’ ಎಂದು ಸಯಾರ್ ಅಹಮದ್ ರೇಶಿ ಹೇಳಿಕೊಂಡಿದ್ದಾರೆ.
ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕೆ 2019ರ ಫೆಬ್ರುವರಿಯಲ್ಲಿ ಕೇಂದ್ರ ಸರ್ಕಾರ ಜಮಾತ್ ಸಂಘಟನೆಗೆ ನಿಷೇಧ ಹೇರಿತ್ತು. ಈ ವರ್ಷ ಫೆಬ್ರುವರಿಯಲ್ಲಿ ನಿಷೇಧದ ಅವಧಿಯನ್ನು ಮತ್ತೆ ಐದು ವರ್ಷಗಳ ಕಾಲ ಮುಂದುವರಿಕೆ ಮಾಡಿತ್ತು. ಹೀಗಾಗಿ ಈ ಸಂಘಟನೆ ಮೇಲಿನ ನಿಷೇಧ ಮುಂದುವರಿದಿದೆ.