ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿರ್ಭಯಾ ಪ್ರಕರಣದ ನಂತರವೂ ದೇಶದಲ್ಲಿ ನಿಲ್ಲದ ಅತ್ಯಾಚಾರ: ನಟಿ ಶಬಾನಾ ಆಜ್ಮಿ ಕಳವಳ

Published 29 ಆಗಸ್ಟ್ 2024, 11:39 IST
Last Updated 29 ಆಗಸ್ಟ್ 2024, 11:39 IST
ಅಕ್ಷರ ಗಾತ್ರ

ಪುಣೆ: ‘ದೇಶವನ್ನೇ ಬೆಚ್ಚಿಬೀಳಿಸಿದ್ದ 2012ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ನಂತರವೂ ದೇಶದಲ್ಲಿ ಲೈಂಗಿಕ ದೌರ್ಜನ್ಯಗಳನ್ನು ನಡೆಸುವ ಹೀನ ಜನರ ಮನಸ್ಥಿತಿ ಬದಲಾಗದಿರುವುದು ಅತ್ಯಂತ ಅವಮಾನಕರ’ ಎಂದು ಬಾಲಿವುಡ್‌ನ ಹಿರಿಯ ನಟಿ ಶಬಾನಾ ಆಜ್ಮಿ ಕಳವಳ ವ್ಯಕ್ತಪಡಿಸಿದ್ದಾರೆ.

‘ಮಕ್ಕಳಿಗೆ ಸುರಕ್ಷಿತ ಜಗತ್ತು ಸೃಷ್ಟಿ’ ಎಂಬ ವಿಷಯ ಕುರಿತು ಗ್ರಾವಿಟಾಸ್‌ ಪ್ರತಿಷ್ಠಾನವು ಯುನಿಸೆಫ್ ಜತೆಗೂಡಿ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ‘ಇಂಥ ಪೈಶಾಚಿಕ ಕೃತ್ಯವನ್ನು ಬೇರು ಸಹಿತ ಕಿತ್ತೊಗೆಯಲು ಸಮಾಜ ಕಾರ್ಯಗತವಾಗಬೇಕು’ ಎಂದಿದ್ದಾರೆ.

ಕೋಲ್ಕತ್ತದಲ್ಲಿ ನಡೆದ ಟ್ರೈನಿ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ, ಮಹಾರಾಷ್ಟ್ರದ ಬದ್ಲಾಪುರದಲ್ಲಿ 2 ಹಾಗೂ 4 ವರ್ಷಗಳ ಮಕ್ಕಳ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ಕುರಿತು ಅವರು ಮಾತನಾಡಿದರು.

‘ಈ ಎಲ್ಲಾ ಪ್ರಕರಣಗಳು ಅತ್ಯಂತ ಅಪಾಯಕಾರಿ. ಇಂಥ ಯಾವುದೇ ಘಟನೆ ನಡೆದಾಗ ಸಮಾಜದಲ್ಲಿ ಆಕ್ರೋಶ ವ್ಯಕ್ತವಾಗಬೇಕು. ಆದರೆ ಅದು ಕೆಲವೊಂದು ಪ್ರಕರಣಗಳಿಗಷ್ಟೇ ಸೀಮಿತವಾಗಬಾರದು ಮತ್ತು ರಾಜಕೀಯಗೊಳಿಸಬಾರದು. ಹೀಗಾದಲ್ಲಿ ಸಮಸ್ಯೆಯ ಬೇರು ಮಟ್ಟಕ್ಕೆ ಇಳಿಯುವುದು ಅಸಾಧ್ಯ’ ಎಂದಿದ್ದಾರೆ.

ದೆಹಲಿಯಲ್ಲಿ 2012ರಲ್ಲಿ ಇಂಟರ್ನಿ ವೈದ್ಯೆ ಮೇಲೆ ನಡೆದ ಅತ್ಯಂತ ಕ್ರೂರ ಸಾಮೂಹಿಕ ಅತ್ಯಾಚಾರದ ನಂತರ ಇಡೀ ದೇಶವೇ ಒಂದಾಗಿ ಹೋರಾಡಿದ ಪರಿಣಾಮ ನ್ಯಾ. ವರ್ಮಾ ಸಮಿತಿ ರಚನೆಯಾಯಿತು. ಅದು ಕೆಲವೊಂದು ಶಿಫಾರಸುಗಳನ್ನು ಮಾಡಿತು. ಆದರೆ ಈಗಲೂ ಅಂಥ ಕೃತ್ಯಗಳು ನಡೆಯುತ್ತಲೇ ಇವೆ.

‘ಮಹಿಳೆಯರನ್ನು ಭೋಗದ ವಸ್ತು ಎಂದು ನೋಡುವ ಮನಸ್ಥಿತಿಯನ್ನು ಸಮಾಜದಿಂದ ಕಿತ್ತೊಗೆಯಬೇಕು. ಮಹಿಳೆಯರಿಗೂ ಬದುಕಲು ಸಮಾನ ಹಕ್ಕು ಇದೆ ಎಂಬ ವಾತಾವರಣವನ್ನು ಸಮಾಜದಲ್ಲಿ ಸ್ಥಾಪಿಸಬೇಕು. ಅತ್ಯಾಚಾರದಂತ ಪ್ರಕರಣಗಳಲ್ಲಿ ಅಪರಾಧಿಗೆ ಮರಣದಂಡನೆ ಸಹಿತ ಕಠಿಣ ಶಿಕ್ಷೆ ವಿಧಿಸಲು ಅವಕಾಶ ಇದ್ದರೂ, ಪ್ರಕರಣಗಳ ಸಂಖ್ಯೆ ಮಾತ್ರ ಕ್ಷೀಣಿಸುತ್ತಿಲ್ಲ. ಹೀಗಾಗಿ ಇದನ್ನು ಬೇರುಮಟ್ಟಕ್ಕಿಳಿದು ಕೆಲಸ ಮಾಡಬೇಕಿದೆ. ವರ್ಮಾ ಸಮಿತಿಯು ನೀಡಿರುವ ಕೆಲವೊಂದು ಮಾನದಂಡಗಳ ಮೇಲೆ ಕೆಲಸ ಮಾಡಬೇಕಿದೆ’ ಎಂದು ಶಬಾನಾ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT