ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಂಡಿಯಾ’ ವಿರೋಧಿಸಿದ್ದ ಜಿನ್ನಾ ನಿಲುವನ್ನೇ ಬಿಜೆಪಿ ಅನುಸರಿಸುತ್ತಿದೆ: ಶಶಿ ತರೂರ್

Published 6 ಸೆಪ್ಟೆಂಬರ್ 2023, 7:18 IST
Last Updated 6 ಸೆಪ್ಟೆಂಬರ್ 2023, 7:18 IST
ಅಕ್ಷರ ಗಾತ್ರ

ನವದೆಹಲಿ: ‘ಜಾಗತಿಕ ಮಟ್ಟದಲ್ಲಿ ‘ಇಂಡಿಯಾ’ ಎಂದೇ ಕರೆಯಲಾಗುತ್ತಿರುವ ದೇಶದ ಹೆಸರನ್ನು ‘ಭಾರತ್’ ಎಂದು ಬದಲಿಸಲು ಹೊರಟಿರುವ ಕೇಂದ್ರ ಸರ್ಕಾರವು, ಇಂಡಿಯಾ ಹೆಸರಿಗಿರುವ ಅಪರಿಮಿತ ಬ್ರಾಂಡ್‌ ಮೌಲ್ಯವನ್ನು ಕಳೆದುಕೊಳ್ಳುವಷ್ಟು ಮೂರ್ಖತನ ಪ್ರದರ್ಶಿಸಲಾರದು ಎಂಬ ಭರವಸೆ ಇದೆ’ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಹೇಳಿದ್ದಾರೆ.

ಜಿ20 ಶೃಂಗದಲ್ಲಿ ಪಾಲ್ಗೊಳ್ಳುತ್ತಿರುವ ವಿಶ್ವದ ವಿವಿಧ ರಾಷ್ಟ್ರಗಳ ಮುಖಂಡರನ್ನು ಸ್ವಾಗತಿಸಿರುವ ರಾಷ್ಟ್ರಪತಿ ಭವನದ ಆಹ್ವಾನ ಪತ್ರಿಕೆಯಲ್ಲಿ ‘ಪ್ರೆಸಿಡೆಂಟ್ ಆಫ್ ಭಾರತ್‌’ ಎಂದು ನಮೂದಿಸಿರುವುದರ ವಿಷಯವಾಗಿ ಅವರು ಪ್ರತಿಕ್ರಿಯಿಸಿದ್ದಾರೆ.

‘ಪಾಕಿಸ್ತಾನ ರಾಷ್ಟ್ರದ ಸಂಸ್ಥಾಪಕ ಮಹಮ್ಮದ್ ಅಲಿ ಜಿನ್ನಾ ಅವರು ‘ಇಂಡಿಯಾ’ ಎಂಬ ಹೆಸರಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ನಮ್ಮ ದೇಶವು ಬ್ರಿಟಿಷ್ ರಾಜ್‌ನ ಉತ್ತರಾಧಿಕಾರಿ ರಾಷ್ಟ್ರವಾಗಲಿದೆ. ಮತ್ತು ಪಾಕಿಸ್ತಾನವು ಅದರ ಪ್ರತ್ಯೇಕ ರಾಜ್ಯವಾಗಲಿದೆ ಎಂಬುದು ಅವರ ಆಕ್ಷೇಪಣೆಗೆ ವಿವರಣೆಯಾಗಿತ್ತು. ಜಿನ್ನಾ ಅವರ ನಿಲುವನ್ನೇ ಬಿಜೆಪಿ ಹೊಂದಿದೆ’ ಎಂದು ಆರೋಪಿಸಿದ್ದಾರೆ.

ಜಿ20 ಶೃಂಗದಲ್ಲಿ ಪಾಲ್ಗೊಳ್ಳುವವರಿಗೆ ಆಯೋಜಿಸಲಾಗಿರುವ ಭೋಜನಕ್ಕೆ ಆಹ್ವಾನಿಸಲು ಮುದ್ರಿಸಲಾಗಿರುವ ಪತ್ರಿಕೆಯಲ್ಲಿ ‘ಪ್ರೆಸಿಡೆಂಟ್ ಆಫ್ ಭಾರತ್‌’ ಎಂದು ಮುದ್ರಿಸಿರುವುದು ಈಗ ರಾಜಕೀಯ ವಲಯದಲ್ಲಿ ಪರಸ್ಪರ ಆರೋಪ–ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಮೋದಿ ಸರ್ಕಾರವು ಇಂಡಿಯಾ ಎಂಬುದರಿಂದ ದೂರವಿರಲು ಯೋಜನೆ ಹೊಂದಿದ್ದು, ದೇಶದ ಹೆಸರನ್ನು ಬರೀ ಭಾರತ್ ಎಂದು ಕರೆದರೆ ಸಾಕು ಎಂದುಕೊಂಡಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ದೇಶಕ್ಕಿರುವ ಎರಡು ಅಧಿಕೃತ ಹೆಸರುಗಳಲ್ಲಿ ‘ಭಾರತ್‌’ ಕೂಡಾ ಒಂದು ಎಂದು ಶಶಿ ತರೂರ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘ಇಂಡಿಯಾವನ್ನು ಭಾರತ್ ಎಂದು ಕರೆಯಲು ಸಂವಿಧಾನದಲ್ಲಿ ಯಾವುದೇ ಆಕ್ಷೇಪಣೆಗಳಿಲ್ಲ. ಆದರೆ ಶತಮಾನಗಳಿಂದ ಸೃಷ್ಟಿಯಾಗಿರುವ ಇಂಡಿಯಾ ಎಂಬ ಹೆಸರಿನ ಬ್ರಾಂಡ್‌ ಮೌಲ್ಯವನ್ನು ಕಳೆದುಕೊಳ್ಳುವಷ್ಟು ಮೂರ್ಖತನದ ನಿರ್ಧಾರವನ್ನು ಕೇಂದ್ರ ಸರ್ಕಾರ ಹೊಂದಿರದು’ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಜಾಗತಿಕ ಮಟ್ಟದಲ್ಲಿರುವ ಹೆಸರು ಹಾಗೂ ದೇಶದ ಜನರು ಕರೆಯುವ ಹೆಸರು ಎರಡನ್ನೂ ಬಳಸುವ ನಮ್ಮ ಸಂಪ್ರದಾಯವನ್ನು ಮುಂದುವರಿಸಬೇಕು’ ಎಂದಿದ್ದಾರೆ.

ಜಿ20 ಶೃಂಗವು ದೇಶದ ರಾಜಧಾನಿಯಲ್ಲಿ ಸೆ. 9 ಹಾಗೂ 10ರಂದು ನಡೆಯಲಿದೆ. ಭಾರತದ ರಾಷ್ಟ್ರಪತಿ ಸಹಿತ ವಿವಿಧ ರಾಷ್ಟ್ರಗಳ ಮುಖ್ಯಸ್ಥರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT