ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಂಡಿಯಾ’, ’ಭಾರತ್’ ಆಗಿ ಬದಲಾಗಲಿದೆಯೇ?: ಕೇಂದ್ರದ ವಿರುದ್ಧ ಕಾಂಗ್ರೆಸ್ ಕಿಡಿ

Published 5 ಸೆಪ್ಟೆಂಬರ್ 2023, 13:25 IST
Last Updated 5 ಸೆಪ್ಟೆಂಬರ್ 2023, 13:25 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಹೆಸರು ‘ಇಂಡಿಯಾ’ ಬದಲು ’ಭಾರತ್’ ಎಂದು ಬದಲಾಗಲಿದೆಯೇ?. ಜಿ20 ಔತಣಕೂಟಕ್ಕೆ ರಾಷ್ಟ್ರಪತಿ ಭವನ ಕಳುಹಿಸಿರುವ ಆಹ್ವಾನ ಪತ್ರಿಕೆಯಲ್ಲಿ ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲು ’ಪ್ರೆಸಿಡೆಂಟ್ ಆಫ್ ಭಾರತ್’ ಎಂದು ಉಲ್ಲೇಖಿಸಿರುವುದು ವಿರೋಧ ಪಕ್ಷಗಳ ಈ ಪ್ರಶ್ನೆಗೆ ಕಾರಣವಾಗಿದೆ.

ಹೊಸದಾಗಿ ರಚನೆಯಾಗಿರುವ ‘ಇಂಡಿಯಾ’ ಒಕ್ಕೂಟಕ್ಕೆ ಹೆದರಿ ಕೇಂದ್ರ ಸರ್ಕಾರವು ದೇಶದ ಇತಿಹಾಸವನ್ನೇ ಬದಲಿಸಲು ಮುಂದಾಗಿದೆ ಎಂದು ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ.

ಜೈರಾಮ್ ರಮೇಶ್, ಕೆ.ಸಿ. ವೇಣುಗೋಪಾಲ್ ಮತ್ತು ಶಶಿ ತರೂರ್ ಸೇರಿದಂತೆ ಕಾಂಗ್ರೆಸ್‌ನ ಹಲವು ನಾಯಕರು ದೇಶದ ಹೆಸರು ಬದಲಾವಣೆಯ ವದಂತಿ ಬಗ್ಗೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಸಂಸತ್ತಿನ ವಿಶೇಷ ಅಧಿವೇಶನಕ್ಕೂ ಮುಂಚಿತವಾಗಿ ಈ ವಿವಾದ ತಲೆ ಎತ್ತಿದೆ.

'ಜಿ20 ಗಣ್ಯರಿಗೆ ಔತಣಕೂಟಕ್ಕೆ ರಾಷ್ಟ್ರಪತಿ ಭವನವು ಸೆಪ್ಟೆಂಬರ್ 9ರಂದು ಕಳುಹಿಸಿರುವ ಆಹ್ವಾನದಲ್ಲಿ ‘ಪ್ರೆಸಿಡೆಂಟ್ ಆಫ್ ಇಂಡಿಯಾ’ಬದಲು ‘ಪ್ರೆಸಿಡೆಂಟ್ ಆಫ್ ಭಾರತ್’ ಎಂದು ಉಲ್ಲೇಖಿಸಿರುವುದು ನಿಜವೆಂದು ಈಗ ಸಾಬೀತಾಗಿದೆ. ಸಂವಿಧಾನದ 1ನೇ ವಿಧಿಯ ಪ್ರಕಾರ, ‘ಭಾರತ ಎಂದರೆ ಇಂಡಿಯಾ, ಅದು ರಾಜ್ಯಗಳ ಒಕ್ಕೂಟವಾಗಿರುತ್ತದೆ. ಆದರೆ. ಈಗ ಈ ‘ಯೂನಿಯನ್ ಆಫ್ ಸ್ಟೇಟ್ಸ್’ ಕೂಡ ಆಕ್ರಮಣಕ್ಕೆ ಒಳಗಾಗಿದೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಬಿಜೆಪಿಯ ವಿನಾಶಕಾರಿ ಮನಸ್ಸು ಮಾತ್ರ ಜನರನ್ನು ಹೇಗೆ ಇಬ್ಭಾಗಿಸಬಹುದು ಎಂಬುದನ್ನು ಯೋಚಿಸಲು ಸಾಧ್ಯ. ಮತ್ತೊಮ್ಮೆ ಅವರು, ಇಂಡಿಯನ್ಸ್ ಮತ್ತು ಭಾರತೀಯರ ನಡುವೆ ಬಿರುಕು ಮೂಡಿಸುತ್ತಿದ್ದಾರೆ. ಸಂವಿಧಾನದ 1ನೇ ವಿಧಿಯಲ್ಲಿ ‘ಭಾರತ ಎಂದರೆ ಇಂಡಿಯಾ, ಅದು ರಾಜ್ಯಗಳ ಒಕ್ಕೂಟವಾಗಿರುತ್ತದೆ ಎಂದು ಹೇಳಲಾಗಿದೆ. ಇಂಡಿಯಾ ಬಣಕ್ಕೆ ಹೆದರಿ ಅವರು ಈ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ. ನೀವು ಏನು ಬೇಕಾದರೂ ಮಾಡಿ ಮೋದಿ ಜೀ. ಆದರೆ, ಭಾರತ ಒಗ್ಗೂಡುತ್ತದೆ. ಇಂಡಿಯಾ ಗೆಲ್ಲುತ್ತದೆ’‌ ಎಂದು ಕೆ.ಸಿ. ವೇಣುಗೋಪಾಲ್ ಎಕ್ಸ್‌ನಲ್ಲಿ ಬರೆದಿದ್ದಾರೆ.

‘ಇಂಡಿಯಾವನ್ನು ಭಾರತ ಎಂದು ಕರೆಯುವುದರಲ್ಲಿ ಸಾಂವಿಧಾನಿಕವಾಗಿ ಯಾವುದೇ ಆಕ್ಷೇಪವಿಲ್ಲ. ದೇಶದ ಎರಡು ಅಧಿಕೃತ ಹೆಸರುಗಳಲ್ಲಿ ಭಾರತವೂ ಒಂದಾಗಿದೆ. ಆದರೆ, ಅಸಂಖ್ಯ ಬ್ರ್ಯಾಂಡ್ ಮೌಲ್ಯ ಹೊಂದಿರುವ ಇಂಡಿಯಾವನ್ನು ಸಂಪೂರ್ಣ ಕೈಬಿಡುವ ಮೂರ್ಖತನವನ್ನು ಸರ್ಕಾರ ಪ್ರದರ್ಶಿಸುವುದಿಲ್ಲ ಎಂದುಕೊಂಡಿದ್ದೇನೆ. ನಮ್ಮ ಇತಿಹಾಸದಲ್ಲಿ ಬಳಸಲಾಗಿರುವ, ಪ್ರಪಂಚದಾದ್ಯಂತ ಗುರುತಿಸಲ್ಪಟ್ಟಿರುವ ಹೆಸರುಗಳನ್ನು ಬಿಟ್ಟುಬಿಡುವ ಬದಲು ಎರಡನ್ನೂ ಬಳಸುವುದನ್ನು ಮುಂದುವರಿಸಬೇಕು’ ಎಂದು ಸಂಸದ ಶಶಿ ತರೂರ್ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT