ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಕ್ಕಿಂನಲ್ಲಿ ಆಗಿದ್ದೇನು?ಎಚ್ಚರಿಕೆ ನಿರ್ಲಕ್ಷಿಸಿದ್ದಕ್ಕೆ ಪ್ರಾಣಹಾನಿ ಹೆಚ್ಚಿತೇ?

Published 7 ಅಕ್ಟೋಬರ್ 2023, 3:25 IST
Last Updated 7 ಅಕ್ಟೋಬರ್ 2023, 3:25 IST
ಅಕ್ಷರ ಗಾತ್ರ

ಬೆಂಗಳೂರು: ದಕ್ಷಿಣ ಲೋನಕ್‌ ಸರೋವರದಲ್ಲಿ ಹಿಮನದಿ ಸ್ಫೋಟದ ಅಪಾಯದ ಬಗ್ಗೆ 10 ವರ್ಷಗಳಲ್ಲಿ ಹಲವು ಬಾರಿ ಎಚ್ಚರಿಕೆ ನೀಡಲಾಗಿತ್ತು. ಆದರೆ ಆ ಎಚ್ಚರಿಕೆಗಳನ್ನು ಕಡೆಗಣಿಸಿದ ಕಾರಣಕ್ಕೇ ಇಂದಿನ ದುರಂತ ಸಂಭವಿಸಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಲೋನಕ್‌ ಸಮುದ್ರಮಟ್ಟದಿಂದ 17,100 ಅಡಿ ಎತ್ತರದಲ್ಲಿ ಇರುವ ಒಂದು ಸರೋವರ. ಲೋನಕ್‌ ಹಿಮನದಿಯು ಕರಗಿ, ಪರ್ವತಗಳ ಕಣಿವೆ ಪ್ರದೇಶದಲ್ಲಿ ಸೃಷ್ಟಿಯಾಗಿರುವ ಈ ಸರೋವರ 50 ವರ್ಷಗಳ ಹಿಂದೆ ಇರಲೇ ಇಲ್ಲ. ಕಣಿವೆ ಪ್ರದೇಶದಲ್ಲಿ ಇದ್ದ ಸಣ್ಣ ಏರಿಯಂತಹ ರಚನೆಯ ಹಿಂಭಾಗದಲ್ಲಿ ನೀರು ನಿಂತು ಈ ಸರೋವರ ಸೃಷ್ಟಿಯಾಗಿದೆ. ಇಲ್ಲಿಂದ ಮುಂದಕ್ಕೆ ಹರಿವ ನೀರು ಲೋನಕ್‌ ನದಿಯಾಗುತ್ತದೆ. ಹಲವು ವರ್ಷಗಳ ಅವಧಿಯಲ್ಲಿ ಈ ಏರಿಯ ಹಿಂಭಾಗದಲ್ಲಿ ಕಲ್ಲು–ಮಣ್ಣು ತುಂಬಿ, ಅದೊಂದು ದೊಡ್ಡ ಅಣೆಕಟ್ಟೆಯಂತಾಗಿದೆ. ಈ ಸರೋವರದ ಬಗ್ಗೆ 1977ರಲ್ಲಿ ಅಧ್ಯಯನ ನಡೆಸಿದಾಗ ಅದರ ವಿಸ್ತೀರ್ಣ 17.5 ಹೆಕ್ಟೇರ್‌ಗಳಷ್ಟಿತ್ತು. ಆದರೆ 2008ರಲ್ಲಿ ಅದರ ವಿಸ್ತೀರ್ಣ 98 ಹೆಕ್ಟೇರ್‌ಗಳಿಗೆ ವ್ಯಾಪಿಸಿತ್ತು. ಜಾಗತಿಕ ತಾಪಮಾನದ ಕಾರಣ ಹಿಮನದಿ ಕರಗುವ ವೇಗ ಹೆಚ್ಚಾಗಿ, ಕೆರೆಯ ವಿಸ್ತೀರ್ಣ ಹೆಚ್ಚುತ್ತಾ ಹೋಗಿತ್ತು.

ಈ ಸರೋವರದ ಧಾರಣಾ ಸಾಮರ್ಥ್ಯದ ಬಗ್ಗೆ 2011ರಲ್ಲಿ ಅಧ್ಯಯನ ನಡೆಸಿದ್ದ ಕೇಂದ್ರ ಜಲ ಆಯೋಗವು, ‘ಈ ಅಣೆಕಟ್ಟೆ ದುರ್ಬಲವಾಗಿರುವ ಕಾರಣ ಅದು ಯಾವಾಗ ಬೇಕಾದರೂ ಒಡೆಯಬಹುದು’ ಎಂದು ಎಚ್ಚರಿಕೆ ನೀಡಿತ್ತು. 2013ರಲ್ಲಿ ಈ ಸಂಬಂಧ ವರದಿಯನ್ನು ನೀಡಿತ್ತು. ಜತೆಗೆ ಅಗತ್ಯ ಕ್ರಮಗಳನ್ನೂ ಸೂಚಿಸಿತ್ತು. ಆದರೆ ಅದನ್ನು ಕಡೆಗಣಿಸಲಾಗಿತ್ತು. 2015ರಲ್ಲಿ ಜಲ ಆಯೋಗವು ಮತ್ತೆ ಇಂತಹ ಎಚ್ಚರಿಕೆಯನ್ನು ನೀಡಿತ್ತು. ಆಗಲೂ ಯಾವುದೇ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ದಕ್ಷಿಣ ಲೋನಕ್‌ ಸರೋವರವೂ ಸೇರಿದಂತೆ 15ಕ್ಕೂ ಹೆಚ್ಚು ಸರೋವರಗಳಲ್ಲಿ ಇಂತಹ ಸ್ಥಿತಿ ಇದೆ ಎಂದು 2022ರಲ್ಲಿ ಮತ್ತೊಮ್ಮೆ ಇಂತಹ ಎಚ್ಚರಿಕೆಯನ್ನು ನೀಡಲಾಗಿತ್ತು. ಲೋನಕ್‌ ಸರೋವರದ ದಂಡೆ ಯಾವಾಗ ಬೇಕಾದರೂ ಒಡೆಯಬಹುದು ಎಂದು ಎಚ್ಚರಿಕೆ ನೀಡಲಾಗಿತ್ತು. ಆನಂತರ ‘ದಂಡೆ ತುರ್ತು ಎಚ್ಚರಿಕೆ ವ್ಯವಸ್ಥೆ’ ಅಳವಡಿಕೆಗೆ ಕೇಂದ್ರ ಸರ್ಕಾರವು ಆದೇಶಿಸಿತ್ತು. ಆ ವ್ಯವಸ್ಥೆಯ ಅಳವಡಿಕೆ ಕಾರ್ಯ ಪ್ರಗತಿಯಲ್ಲಿತ್ತು. ಇದರ ಭಾಗವಾಗಿ ಮೊದಲ ಹಂತದಲ್ಲಿ ಸರೋವರ ದಂಡೆಯಲ್ಲಿ ಸಂವೇದಕಗಳನ್ನು ಅಳವಡಿಸಲಾಗಿತ್ತು. ಎರಡನೇ ಹಂತದಲ್ಲಿ ಸೈರನ್‌ ಮತ್ತು ಎಚ್ಚರಿಕೆ ರವಾನೆ ವ್ಯವಸ್ಥೆಯನ್ನು ಅಳವಡಿಸಬೇಕಿತ್ತು. ಸರ್ಕಾರವು ಹಣ ಬಿಡುಗಡೆ ಮಾಡದೇ ಇರುವ ಕಾರಣಕ್ಕೆ ಎರಡನೇ ಹಂತದ ವ್ಯವಸ್ಥೆ ಕಾಮಗಾರಿ ಸ್ಥಗಿತವಾಗಿತ್ತು.

<div class="paragraphs"><p>ಪ್ರಜಾವಾಣಿ ಚಿತ್ರ</p></div>

ಪ್ರಜಾವಾಣಿ ಚಿತ್ರ

ಈ ವ್ಯವಸ್ಥೆ ಅಳವಡಿಸಿದ್ದಿದ್ದರೆ, ಸರೋವರದ ದಂಡೆ ಒಡೆದ ಕೂಡಲೇ ಸೈರನ್‌ ಕೂಗುತ್ತಿತ್ತು ಮತ್ತು ಎಚ್ಚರಿಕೆ ಸಂದೇಶ ರವಾನೆಯಾಗುತ್ತಿತ್ತು. ದಂಡೆ ಒಡೆದು ನೀರು ನುಗ್ಗಿದರೂ, ಹತ್ತಿರದ ಜನವಸತಿ ಪ್ರದೇಶಕ್ಕೆ ನೀರು ನುಗ್ಗಲು 90 ನಿಮಿಷ ಬೇಕಾಗಿತ್ತು. ತೀಸ್ತಾ ನದಿಗೆ ಅಡ್ಡವಾಗಿ ಕಟ್ಟಿರುವ ಚುಂಗ್‌ತಾಂಗ್‌ ಅಣೆಕಟ್ಟೆಗೆ ಈ ನೀರು ತಲುಪಲು ಎರಡು ತಾಸಿನ ಕಾಲಾವಕಾಶ ಇರುತ್ತಿತ್ತು. ಎಚ್ಚರಿಕೆ ರವಾನೆ ವ್ಯವಸ್ಥೆ ಇಲ್ಲದೇ ಇರುವ ಕಾರಣಕ್ಕೆ ಜನರನ್ನು ತೆರವು ಮಾಡಲು ಸಾಧ್ಯವಾಗಿಲ್ಲ. ಹೀಗಾಗಿಯೇ ಹೆಚ್ಚು ಪ್ರಾಣಹಾನಿ ಸಂಭವಿಸಿದೆ ಎಂದು ಸಿಕ್ಕಿಂ ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ ಎಂದು ರಾಯಿಟರ್ಸ್‌ ವರದಿ ಮಾಡಿದೆ.

ಚುಂಗ್‌ತಾಂಗ್‌ ಅಣೆಕಟ್ಟೆಯ ಗೇಟುಗಳನ್ನು ತೆರೆಯಲೂ ಅವಕಾಶವಿತ್ತು. ಆಗ ಅಣೆಕಟ್ಟೆ ಒಡೆದು ದಿಢೀರ್ ಪ್ರವಾಹ ಉಂಟಾಗುವ ಅಪಾಯ ಇರುತ್ತಿರಲಿಲ್ಲ. ಅಣೆಕಟ್ಟೆಯ ಗೇಟುಗಳನ್ನು ತೆಗೆಯಲು ಅವಕಾಶವಿದ್ದರೂ, ಏಕೆ ತೆಗೆಯಲಿಲ್ಲ ಎಂಬುದು ಗೊತ್ತಾಗುತ್ತಿಲ್ಲ ಎಂದು ಸಿಕ್ಕಿ ಸರ್ಕಾರದ ಅಧಿಕಾರಿಗಳು ಆಘಾತ ವ್ಯಕ್ತಪಡಿಸಿದ್ದಾರೆ ಎಂದು ರಾಯಿಟರ್ಸ್‌ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT