ಮುಂಬೈ: ‘ಬಿಜೆಪಿಯೊಂದಿಗೆ ಕೈ ಜೋಡಿಸುವಂತೆ ಕೆಲ ಹಿತೈಷಿಗಳು ಮನವೊಲಿಸುವ ಪ್ರಯತ್ನ ಮಾಡುತ್ತಿದ್ದು, ಯಾವುದೇ ಕಾರಣಕ್ಕೂ ಬಿಜೆಪಿಯೊಂದಿಗೆ ಎನ್‌ಸಿಪಿ ಸೇರುವುದಿಲ್ಲ’ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ(ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ.
ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಸಂಗೋಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪವಾರ್, ‘ಎನ್‌ಸಿಪಿಯ ರಾಷ್ಟ್ರೀಯ ಅಧ್ಯಕ್ಷನಾಗಿ ಹೇಳುತ್ತಿದ್ದೇನೆ ಯಾವುದೇ ಕಾರಣಕ್ಕೂ ನನ್ನ ಪಕ್ಷ(ಎನ್‌ಸಿಪಿ) ಬಿಜೆಪಿಯೊಂದಿಗೆ ಸೇರುವುದಿಲ್ಲ. ಬಿಜೆಪಿ ಜೊತೆಗಿನ ಯಾವುದೇ ರೀತಿಯ ಸಂಬಂಧವು ಪಕ್ಷದ ರಾಜಕೀಯ ನೀತಿಗೆ ಹೊಂದಾಣಿಕೆಯಾಗುವುದಿಲ್ಲ’ ಎಂದು ಹೇಳಿದರು.
‘ನಮ್ಮ ಪಕ್ಷದ ಕೆಲವರು (ಅಜಿತ್ ಪವಾರ್ ಬಣ) ವಿಭಿನ್ನ ನಿಲುವು ತಳೆದಿದ್ದಾರೆ. ನನ್ನ ಕೆಲ ಹಿತೈಷಿಗಳು ನನ್ನ ನಿಲುವಿನಲ್ಲಿ ಏನಾದರೂ ಬದಲಾವಣೆಯಾಗಬಹುದೇ ಎಂದು ನೋಡುತ್ತಿದ್ದಾರೆ. ಮನವೊಲಿಸುವ ಪ್ರಯತ್ನ ಕೂಡ ಮಾಡುತ್ತಿದ್ದಾರೆ. ಅದಕ್ಕಾಗಿ ನಮ್ಮ ಜೊತೆ ಸೌಹಾರ್ದಯುತವಾಗಿ ಚರ್ಚಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಹೇಳಿದರು.
ಅಜಿತ್ ಪವಾರ್ ಅವರೊಂದಿಗೆ ಪುಣೆಯಲ್ಲಿ ರಹಸ್ಯ ಮಾತುಕತೆ ನಡೆಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ‘ಅಜಿತ್ ಪವಾರ್ ನನ್ನ ಸಂಬಂಧಿ. ಅವರನ್ನು ಭೇಟಿಯಾಗುವುದರಲ್ಲಿ ತಪ್ಪೇನಿದೆ?’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.