ಮೈನ್‌ಪುರಿ: ತಿರುಪತಿಯಲ್ಲಿ ಲಾಡು ತಯಾರಿಸುವಾಗ ಪ್ರಾಣಿಗಳ ಕೊಬ್ಬು ಬಳಸಲಾಗಿದೆ ಎಂಬ ಆರೋಪ ಭುಗಿಲೆದ್ದ ಬೆನ್ನಲ್ಲೇ, ಮಥುರಾದಲ್ಲಿ ಕಲಬೆರಕೆಯುಕ್ತ ‘ಖೋವಾ’ ಮಾರುತ್ತಿದ್ದು, ತನಿಖೆ ನಡೆಸಬೇಕು’ ಎಂದು ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್ ಆಗ್ರಹಿಸಿದ್ದಾರೆ.
ಮಾಧ್ಯಮಗಳ ಜತೆ ಮಾತನಾಡಿದ ಅವರು, ‘ತಿರುಪತಿ ಲಾಡುಗಳ ತಯಾರಿಕೆ ವೇಳೆ ಕಲಬೆರಕೆಯುಕ್ತ ತುಪ್ಪ ಬಳಸಿರುವುದು ಅತ್ಯಂತ ಗಂಭೀರ ವಿಚಾರ. ಇದು ಜನರ ಧಾರ್ಮಿಕ ನಂಬಿಕೆಗೆ ನೋವುಂಟು ಮಾಡಿದೆ’ ಎಂದರು.
‘ಆಹಾರ ಇಲಾಖೆಯ ವೈಫಲ್ಯದಿಂದ ಕಲಬೆರಕೆಯುಕ್ತ ಆಹಾರ, ತೈಲ ಬಳಕೆಯಿಂದ ಜನರು ಗಂಭೀರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇಲಾಖೆಯೂ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದು, ಮೌನವಾಗಿದೆ’ ಎಂದರು.
ಕೆಲವು ವರದಿಗಳ ಪ್ರಕಾರ, ಮಥುರಾದಲ್ಲಿ ಕಲಬೆರಕೆ ‘ಖೋವಾ’ ಮಾರಾಟ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರವು ತಕ್ಷಣವೇ ಈ ಪ್ರಕರಣದ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು. ವರದಿಯ ಮೂಲ ತಿಳಿಸಲು ಅವರು ನಿರಾಕರಿಸಿದರು.
ಮತ್ತೊಂದೆಡೆ, ಆಹಾರ ಸುರಕ್ಷತೆ ಹಾಗೂ ಔಷಧ ಆಡಳಿತ (ಎಫ್‌ಎಸ್‌ಡಿಎ) ವಿಭಾಗವು ಮಥುರಾದ ಪ್ರಮುಖ 13 ದೇವಸ್ಥಾನಗಳಲ್ಲಿ ವಿತರಿಸುತ್ತಿದ್ದ ‘ಪ್ರಸಾದ’ದ ಸ್ಯಾಂಪಲ್ಸ್ ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಿದೆ.