ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಏರಿಕೆ: ಕೇಂದ್ರದ ವಿರುದ್ಧ ಪ್ರತಿಪಕ್ಷಗಳ ವಾಗ್ದಾಳಿ

ಐದು ರಾಜ್ಯಗಳ ಚುನಾವಣೆಯ ಬಳಿಕ ಪುನಃ ಇಂಧನ ಬೆಲೆ ಏರಿಕೆ– ಆರೋಪ
Last Updated 22 ಮಾರ್ಚ್ 2022, 13:59 IST
ಅಕ್ಷರ ಗಾತ್ರ

ನವದೆಹಲಿ: ಐದು ರಾಜ್ಯಗಳ ಚುನಾವಣೆಗಳ ಬಳಿಕ, ಎಲ್‌ಪಿಜಿ, ಪೆಟ್ರೋಲ್ ಮತ್ತು ಡೀಸೆಲ್ ದರಗಳು ಏರಿಕೆಯಾಗಿವೆ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮಂಗಳವಾರ ಸಂಸತ್ತಿನ ಒಳಗೆ ಮತ್ತು ಹೊರಗೆ ತೀವ್ರ ವಾಗ್ದಾಳಿ ನಡೆಸಿದವು.

ವಿಧಾನಸಭಾ ಚುನಾವಣೆಗಳ ಫಲಿತಾಂಶದ 12 ದಿನಗಳ ಬಳಿಕ ಎಲ್‌ಪಿಜಿ ಹಾಗೂ ತೈಲ ಬೆಲೆಗಳ ಏರಿಕೆಯಾಗಿರುವ ವಿಷಯ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿತು. ಉಭಯ ಸದನಗಳ‌ಲ್ಲಿ ಪ್ರತಿಪಕ್ಷಗಳ ಸಂಸದರು ಬೆಲೆ ಏರಿಕೆ ವಿಷಯದ ಕುರಿತ ಚರ್ಚೆಯನ್ನು ಮುಕ್ತಾಯಗೊಳಿಸುವ ಕ್ರಮವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ರತಿಪಕ್ಷಗಳ ಸಂಸದರು ಘೋಷಣೆಗಳನ್ನು ಕೂಗಿದ್ದರಿಂದ ರಾಜ್ಯಸಭೆಯಲ್ಲಿ ಬೆಳಗಿನ ಕಲಾಪ ನಡೆಯಲಿಲ್ಲ. ಲೋಕಸಭೆಯಲ್ಲಿ ಕಾಂಗ್ರೆಸ್, ಡಿಎಂಕೆ, ತೃಣಮೂಲ ಕಾಂಗ್ರೆಸ್, ಎನ್‌ಸಿಪಿ, ಜೆಎಂಎಂ, ಸಿಪಿಎಂ, ಸಿಪಿಐ, ಮುಸ್ಲಿಂ ಲೀಗ, ಆರ್‌ಎಸ್‌ಪಿ, ಎಂಡಿಎಂಕೆ ಮತ್ತು ವಿಸಿಕೆ ಸಂಸದರು ಪ್ರತಿಭಟನೆ ನಡೆಸಿ, ಕಲಾಪವನ್ನು ಬಹಿಷ್ಕರಿಸಿದರು.

ರಾಜ್ಯಸಭೆಯಲ್ಲಿ ಬೆಲೆ ಏರಿಕೆಯ ಕುರಿತು ಚರ್ಚಿಸಲು ಕಾಂಗ್ರೆಸ್‌ನ ಶಕ್ತಿಸಿನ್ಹ ಗೋಹಿಲ್, ತೃಣಮೂಲ ಕಾಂಗ್ರೆಸ್‌ನ ದೋಲಾ ಸೇನ್ ಮತ್ತು ಸಿಪಿಎಂನ ಎಲಮರಮ್ ಕರೀಂ, ಜಾನ್ ಬ್ರಿಟಾಸ್ ಮತ್ತು ಡಾ.ವಿ. ಶಿವದಾಸನ್ ಅವರು ಸಲ್ಲಿಸಿದ್ದ ಮನವಿಗಳನ್ನು ಸಭಾಪತಿ ಎಂ. ವೆಂಕಯ್ಯ ನಾಯ್ದು ಅವರು ನಿರಾಕರಿಸಿದರು. ಈ ಮನವಿಯಲ್ಲಿನ ಬೇಡಿಕೆಗಳನ್ನು ನಿಗದಿತ ಚರ್ಚೆಯ ಸಂದರ್ಭದಲ್ಲಿ ಪ್ರಸ್ತಾಪಿಸಬಹುದು ಎಂದರು.

ಶೂನ್ಯವೇಳೆಯಲ್ಲಿ 19 ಸಂಸದರು ತಮ್ಮ ಮನವಿ ಸ್ವೀಕರಿಸಲು ಅವಕಾಶ ನೀಡುವಂತೆ ನಾಯ್ಡು ಅವರಿಗೆ ಮನವಿ ಮಾಡಿದರೂ ಪ್ರತಿಭಟನೆ ಮುಂದುವರಿದಿದ್ದರಿಂದ, ಸದನವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಲಾಯಿತು. ಸದನವು ಪುನರಾರಂಭಗೊಂಡಾಗ ಕೆಲ ಸಂಸದರು ಪುನಃ ಘೋಷಣೆಗಳನ್ನು ಕೂಗಿದ್ದರಿಂದ ಉಪ ಸಭಾಪತಿ ಹರಿವಂಶ್ ಅವರು ಸದನವನ್ನು ಮತ್ತೆ ಮುಂದೂಡಲು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT