ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಕ್ಕಿಲ್ಲ ಆರ್ಥಿಕತೆಯ ಅರಿವು; ಕೇಂದ್ರದ ವಿರುದ್ಧ ಚಿದಂಬರಂ ವಾಗ್ದಾಳಿ

Last Updated 5 ಡಿಸೆಂಬರ್ 2019, 10:01 IST
ಅಕ್ಷರ ಗಾತ್ರ

ನವದೆಹಲಿ: ಎದುರಾಗಿರುವ ಸಮಸ್ಯೆಯನ್ನು ಸರಿಯಾಗಿ ಗ್ರಹಿಸದೆದೇಶದ ಆರ್ಥಿಕತೆಯನ್ನು ಸಂಕಷ್ಟಕ್ಕೆ ಸಿಲುಕಿಸಿರುವುದಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ವಾಗ್ದಾಳಿ ನಡೆಸಿದ್ದಾರೆ.

'ಸಮಸ್ಯೆಯ ಲಕ್ಷಣವನ್ನು ಸರಿಯಾಗಿ ಗ್ರಹಿಸುವುದರಲ್ಲಿ ಎಡವಿದರೆ ನೀಡುವ ಸಲಹೆ–ಸೂಚನೆಗಳು ನಿರುಪಯುಕ್ತವಾಗುತ್ತವೆ ಹಾಗೂ ಮಾರಣಾಂತಿಕವಾಗಿಯೂ ಪರಿಣಮಿಸಬಹುದು. ಪ್ರಸಕ್ತ ಹಣಕಾಸು ವರ್ಷ ಪ್ರಾರಂಭವಾಗಿ 7 ತಿಂಗಳು ಕಳೆದಿದ್ದರೂ, ಆರ್ಥಿಕತೆಗೆ ಎದುರಾಗುತ್ತಿರುವ ಸಮಸ್ಯೆಗಳು ಆವರ್ತಕವಾದುದು ಎಂದೇ ಬಿಜೆಪಿ ಸರ್ಕಾರ ನಂಬಿದೆ. ಸರ್ಕಾರ ತಪ್ಪಾಗಿ ನಡೆದುಕೊಳ್ಳುತ್ತಿದೆ. ಆರ್ಥಿಕತೆಯ ಸುಳಿವೂ ಸರ್ಕಾರಕ್ಕೆ ಇಲ್ಲ' ಎಂದು ಚಿದಂಬರಂ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.

ಹಣದ ಅಕ್ರಮ ವರ್ಗಾವಣೆಯ ಆರೋಪದ ಮೇಲೆ ಬಂಧನಕ್ಕೊಳಗಾಗಿ, 106 ದಿನ ತಿಹಾರ್‌ ಜೈಲಿನಲ್ಲಿದ್ದ ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ ಅವರಿಗೆ ಸುಪ್ರೀಂ ಕೋರ್ಟ್‌ ಷರತ್ತುಬದ್ಧ ಜಾಮೀನು ನೀಡಿದೆ. ಬುಧವಾರ ರಾತ್ರಿ ಬಿಡುಗಡೆಯಾದ ಚಿದಂಬರಂ ಮೊದಲ ಮಾಧ್ಯಮ ಗೋಷ್ಠಿಯಲ್ಲೇ ಸರ್ಕಾರದ ಆಡಳಿತ ವೈಖರಿ ಮತ್ತು ಆರ್ಥಿಕತೆಯ ಬಗ್ಗೆ ಮಾತನಾಡಿದ್ದಾರೆ.

'ಎದುರಾಗಿರುವ ಅನಿಶ್ಚಿತತೆ ಮತ್ತು ಭಯದ ಕಾರಣದಿಂದಾಗಿ ಜನರಲ್ಲಿಬೇಡಿಕೆ ಕುಸಿದಿದೆ ಹಾಗೂ ಅವರಲ್ಲಿ ಹಣದ ಹರಿಯುವಿಕೆಯೂ ಕಡಿಮೆಯಾಗಿದೆ. ಬೇಡಿಕೆ ಹೆಚ್ಚುವವರೆಗೂ ಉತ್ಪಾದನೆ ಏರಿಕೆಯಾಗುವುದಿಲ್ಲ ಅಥವಾ ಹೂಡಿಕೆಯಲ್ಲೂ ಹೆಚ್ಚಳವಾಗುವುದಿಲ್ಲ' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'8, 7, 6.6, 5.8, 5 ಮತ್ತು 4.5; ಇದಕ್ಕಿಂತಲೂ ಉತ್ತಮವಾಗಿ ಆರ್ಥಿಕತೆಯ ಸ್ಥಿತಿಯನ್ನ ಹೇಳಲು ಆಗದು. ಕಳೆದ ಆರು ತ್ರೈಮಾಸಿಕದಲ್ಲಿ ಜಿಡಿಪಿ ವೃದ್ಧಿ ದರವನ್ನು ಸಂಖ್ಯೆಗಳು ಸೂಚಿಸುತ್ತಿವೆ.ಆರ್ಥಿಕ ವೃದ್ಧಿ ದರವು ಶೇ 5 ತಲುಪುವುದರೊಂದಿಗೆ ವರ್ಷಾಂತ್ಯ ಕಂಡರೆ ನಾವೇ ಅದೃಷ್ಟವಂತರು. ಈ ಸರ್ಕಾರದ ಅವಧಿಯಲ್ಲಿ ವೃದ್ಧಿ ದರ ಶೇ 5ರ ಬಗ್ಗೆ ಡಾ.ಅರವಿಂದ್‌ ಸುಬ್ರಮಣಿಯನ್‌ ಅವರು ನೀಡಿದ್ದ ಎಚ್ಚರಿಕೆಯನ್ನು ನೆನಪಿಸಿಕೊಳ್ಳಬೇಕು. ಆರ್ಥಿಕತೆ ಕುರಿತು ಪ್ರಧಾನಿ ಮೌನ ವಹಿಸಿದ್ದಾರೆ. ಆರ್ಭಟ ಮತ್ತು ಸುಳ್ಳಾಡಲು ಅವರ ಸಚಿವರಿಗೆ ಆರ್ಥಿಕತೆ ವಿಚಾರವನ್ನು ಬಿಟ್ಟುಕೊಟ್ಟಿದ್ದಾರೆ. ಸರ್ಕಾರವು ಆರ್ಥಿಕತೆಯ ಬಗ್ಗೆ ಅಸಮರ್ಥ ನಿರ್ವಹಣೆ ತೋರಿರುವುದಾಗಿ ಅರ್ಥಶಾಸ್ತ್ರಜ್ಞರು ವಿಶ್ಲೇಷಿಸಿದ್ದಾರೆ' ಎಂದಿದ್ದಾರೆ.

ಎರಡನೇ ತ್ರೈಮಾಸಿಕದ ಅಂಕಿ–ಅಂಶಗಳಲ್ಲಿ ಜಿಡಿಪಿ ಶೇ 4.5ಕ್ಕೆ ಕುಸಿದಿರುವುದು ದಾಖಲಾಗಿದೆ. ಗುರುವಾರ ಆರ್‌ಬಿಐ ಆರ್ಥಿಕ ವೃದ್ಧಿ ದರ ಅಂದಾಜು ಶೇ 5ಕ್ಕೆ ಇಳಿಸಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT