ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರುಘಾ ಶರಣರ ಜಾಮೀನಿಗೆ ತಡೆ ನೀಡಿದ ಸುಪ್ರೀಂ ಕೋರ್ಟ್: ವಾರದೊಳಗೆ ಶರಣಾಗಲು ತಾಕೀತು

Published 23 ಏಪ್ರಿಲ್ 2024, 10:24 IST
Last Updated 23 ಏಪ್ರಿಲ್ 2024, 10:24 IST
ಅಕ್ಷರ ಗಾತ್ರ

ನವದೆಹಲಿ: ಪೋಕ್ಸೊ ಕಾಯ್ದೆಯಡಿ ಆರೋಪಿಯಾಗಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರು ಒಂದು ವಾರದೊಳಗೆ ವಿಚಾರಣಾ ನ್ಯಾಯಾಲಯಕ್ಕೆ ಶರಣಾಗಬೇಕು ಹಾಗೂ ಸಾಕ್ಷಿಗಳ ವಿಚಾರಣೆ ನಡೆಯುವವರೆಗೆ ನಾಲ್ಕು ತಿಂಗಳ ಕಾಲ ನ್ಯಾಯಾಂಗ ಬಂಧನದಲ್ಲಿರಬೇಕು ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ನಿರ್ದೇಶನ ನೀಡಿದೆ.

ಶರಣರಿಗೆ ಕರ್ನಾಟಕ ಹೈಕೋರ್ಟ್‌ 2023ರ ನವೆಂಬರ್‌ 8ರಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದನ್ನು ಪ್ರಶ್ನಿಸಿ ಸಂತ್ರಸ್ತೆಯ ತಂದೆಯು ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್‌ನಾಥ್‌ ಹಾಗೂ ಸತೀಶ್‌ ಚಂದ್ರ ಶರ್ಮಾ ಅವರಿದ್ದ ಪೀಠವು ಹೈಕೋರ್ಟ್‌ನ ಆದೇಶವನ್ನು ನಾಲ್ಕು ತಿಂಗಳ ಕಾಲ ತಡೆಹಿಡಿದಿದೆ.

ವಿಚಾರಣಾ ನ್ಯಾಯಾಲಯವು ನಾಲ್ಕು ತಿಂಗಳೊಳಗೆ ಸಾಕ್ಷ್ಯ ಸಾಮಗ್ರಿಗಳ ಪರಿಶೀಲನೆ ನಡೆಸಬೇಕು ಹಾಗೂ ಒಂದು ವರ್ಷದೊಳಗೆ ವಿಚಾರಣೆ ಪೂರ್ಣಗೊಳಿಸಬೇಕು ಎಂದು ಪೀಠ ಸೂಚಿಸಿದೆ.

ಸ್ವಾಮೀಜಿ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ ಲೂತ್ರಾ, ‘ಶರಣರು ನ್ಯಾಯಾಲಯಕ್ಕೆ ಶರಣಾಗಲಿದ್ದಾರೆ ಹಾಗೂ ಸಾಕ್ಷ್ಯ ಸಾಮಗ್ರಿಗಳ ವಿಚಾರಣೆ ಮುಗಿಯುವವರೆಗೆ ಹೈಕೋರ್ಟ್‌ ಆದೇಶವನ್ನು (ಅಂದರೆ ನಾಲ್ಕರಿಂದ ಗರಿಷ್ಠ ಆರು ತಿಂಗಳವರೆಗಿನ ಅವಧಿಯವರೆಗೆ) ತಡೆ ಹಿಡಿಯಬಹುದು’ ಎಂದು ಪ್ರಸ್ತಾಪಿಸಿದರು.

ಸಂತ್ರಸ್ತೆಯ ತಂದೆ ಪರ ವಾದ ಮಂಡಿಸಿದ ವಕೀಲೆ ಅಪರ್ಣಾ ಭಟ್‌, ‘ಸಂತ್ರಸ್ತರು ಅಪ್ರಾಪ್ತ ಬಾಲಕಿಯರು. ಇದು ಲೈಂಗಿಕ ಶೋಷಣೆಗೆ ಸಂಬಂಧಿಸಿದ ಪ್ರಕರಣವಾಗಿರುವುದರಿಂದ ಹೈಕೋರ್ಟ್‌ ನೀಡಿರುವ ಜಾಮೀನು ರದ್ದುಪಡಿಸಬೇಕು’ ಎಂದು ಮನವಿ ಮಾಡಿದರು.

ಎರಡೂ ಪಕ್ಷಗಳ ಸುದೀರ್ಘ ವಾದವನ್ನು ಆಲಿಸಿದ ನ್ಯಾಯಪೀಠ, ‘ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹೈಕೋರ್ಟ್‌ ವಿಸ್ತೃತ ಆದೇಶ ಜಾರಿಗೊಳಿಸಿರುವುದರಿಂದ ನಾವು ಮತ್ತೊಮ್ಮೆ ವಿವರವಾದ ಆದೇಶ ಹೊರಡಿಸುವ ಅಗತ್ಯವಿಲ್ಲ. ಆರೋಪಿಯು ನ್ಯಾಯಾಂಗ ಬಂಧನದಲ್ಲಿರುವ ಸಂದರ್ಭದಲ್ಲಿ ಎಲ್ಲ ಸಾಕ್ಷಿಗಳ ವಿಚಾರಣೆಯನ್ನು ತ್ವರಿತವಾಗಿ ಮುಗಿಸುವುದು ಸೂಕ್ತ’ ಎಂದಿತು.

‘ಶರಣರು ನಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಆರೋಪಿಸಿ ಇಬ್ಬರು ಬಾಲಕಿಯರು ಮೈಸೂರಿನ ನಜರ್‌ಬಾದ್ ಪೊಲೀಸ್‌ ಠಾಣೆಯಲ್ಲಿ 2022ರ ಆಗಸ್ಟ್‌ 26ರಂದು ದೂರು ದಾಖಲಿಸಿದ್ದರು. 2022ರ ಸೆಪ್ಟೆಂಬರ್ 1ರಂದು ಶರಣರನ್ನು ಬಂಧಿಸಲಾಗಿತ್ತು.

ಶರಣರ ವಿರುದ್ಧ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆ–2012, ಭಾರತೀಯ ದಂಡ ಸಂಹಿತೆ–1860, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮೇಲಿನ ದೌರ್ಜನ್ಯ ತಡೆ ಕಾಯ್ದೆ–1989 ಮತ್ತು ಬಾಲ ನ್ಯಾಯ (ಮಕ್ಕಳ ಸಂರಕ್ಷಣೆ ಹಾಗೂ ಆರೈಕೆ) ಕಾಯ್ದೆ–2015ರ ವಿವಿಧ ಕಲಂಗಳ ಅಡಿಯಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದ್ದು ಸೆಷನ್ಸ್‌ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ಮೊದಲ ಪ್ರಕರಣದ ಬೆನ್ನಲ್ಲೇ ಮತ್ತೊಂದು ಪೋಕ್ಸೊ ಪ್ರಕರಣ ಶರಣರ ವಿರುದ್ಧ ದಾಖಲಾಗಿದ್ದು ಇದರಲ್ಲಿ ಶರಣರ ವಿರುದ್ಧ ಬಾಡಿ ವಾರಂಟ್‌ ಹೊರಡಿಸಲಾಗಿತ್ತು. ಶರಣರಿಗೆ ಹೈಕೋರ್ಟ್‌ ಏಕಸದಸ್ಯ ಪೀಠ ನವೆಂಬರ್‌ನಲ್ಲಿ ಜಾಮೀನು ನೀಡಿತ್ತು.

ಸುಪ್ರೀಂ ಕೋರ್ಟ್‌ ನಿರ್ದೇಶನವೇನು? 

* ಪ್ರಕರಣದ ವಿಚಾರಣೆಯನ್ನು ದಿನನಿತ್ಯದ ಆಧಾರದ ಮೇಲೆ ನಡೆಸಬೇಕು ಮತ್ತು ನಾಲ್ಕು ತಿಂಗಳಲ್ಲಿ ಎಲ್ಲ ಸಾಕ್ಷಿಗಳ ವಿಚಾರಣೆ ಪೂರ್ಣಗೊಳಿಸಬೇಕು ಎಂದು ನ್ಯಾಯಪೀಠ ವಿಚಾರಣಾ ನ್ಯಾಯಾಲಯಕ್ಕೆ ಸೂಚನೆ ನೀಡಿತು

* ಅಗತ್ಯ ಸಂದರ್ಭಗಳನ್ನು ಹೊರತುಪಡಿಸಿ ಪ್ರಕರಣದ ವಿಚಾರಣೆಯಲ್ಲಿ ಅನಗತ್ಯ ಮುಂದೂಡಿಕೆ ಕೇಳದಂತೆ ಪ್ರಾಸಿಕ್ಯೂಟರ್‌ ಹಾಗೂ ಆರೋಪಿಗೆ ನಿರ್ದೇಶಿಸಿದ ನ್ಯಾಯಪೀಠ, ವಿಚಾರಣೆಗೆ ಸಹಕರಿಸುವಂತೆ ಸ್ವಾಮೀಜಿಗೆ ಸೂಚಿಸಿತು

* ನಾಲ್ಕು ತಿಂಗಳ ಅವಧಿಯಲ್ಲಿ ಸಾಕ್ಷಿಗಳ ವಿಚಾರಣೆ ನಡೆಸಲು ಸಾಧ್ಯವಾಗದಿದ್ದಲ್ಲಿ, ವಿಚಾರಣಾ ನ್ಯಾಯಾಲಯವು ಈ ನ್ಯಾಯಾಲಯದಿಂದ ಅವಧಿ ವಿಸ್ತರಣೆಗೆ ಮನವಿ ಮಾಡಬಹುದು. ಆದರೆ, ಅಲ್ಲಿಯವರೆಗೆ ಪ್ರತಿವಾದಿ ಸ್ವಾಮೀಜಿ ನ್ಯಾಯಾಂಗ ಬಂಧನದಲ್ಲಿಯೇ ಇರಲಿದ್ದಾರೆ ಎಂದೂ ಪೀಠ ಸ್ಪಷ್ಟಪಡಿಸಿತು. ನ್ಯಾಯಾಲಯದ ದಾಖಲೆಗಳಿಂದ ಸಂತ್ರಸ್ತರು ಮತ್ತು ಸಾಕ್ಷಿಗಳ ಹೆಸರುಗಳನ್ನು ಪರಿಷ್ಕರಿಸುವಂತೆ ಎರಡೂ ಪಕ್ಷಗಳಿಗೆ ನ್ಯಾಯಾಲಯ ಸೂಚಿಸಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT