ನವದೆಹಲಿ: ‘ಮೋದಿ ಉಪನಾಮ’ ಹೇಳಿಕೆಗೆ ಸಂಬಂಧಿಸಿದ 2019ರ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.
ಈ ತೀರ್ಪು, ಲೋಕಸಭಾ ಸದಸ್ಯತ್ವದಿಂದ ಅನರ್ಹರಾಗಿರುವ ರಾಹುಲ್ ಅವರಿಗೆ, ಪುನಃ ಸದಸ್ಯತ್ವ ಪಡೆಯುವ ಹಾದಿಯನ್ನು ಸುಗಮಗೊಳಿಸಿದೆ. ಅಲ್ಲದೆ, ಕಾಂಗ್ರೆಸ್ ಪಕ್ಷದ ಪಾಲಿಗೆ ನಿರಾಳತೆಯನ್ನೂ ಉಂಟುಮಾಡಿದೆ.
ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ಪಿ.ಎಸ್.ನರಸಿಂಹ ಮತ್ತು ಸಂಜಯ್ ಕುಮಾರ್ ಅವರಿದ್ದ ತ್ರಿಸದಸ್ಯ ಪೀಠವು, ‘ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು, ನ್ಯಾಯಾಂಗ ನಿಂದನೆ ಪ್ರಕರಣವೊಂದರಲ್ಲಿ ರಾಹುಲ್ ಅವರಿಗೆ ಸುಪ್ರೀಂ ಕೋರ್ಟ್ ತಾಕೀತು ಮಾಡಿರುವುದನ್ನು ಹೊರತುಪಡಿಸಿ, ತಾವು ಶಿಕ್ಷೆ ನೀಡಿರುವುದಕ್ಕೆ ಬೇರೆ ಯಾವ ಕಾರಣವನ್ನೂ ನೀಡಿಲ್ಲ’ ಎಂದು ಹೇಳಿದೆ.
ರಫೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ‘ಚೌಕಿದಾರ್ ಚೋರ್ ಹೈ’ ಎಂದು ರಾಹುಲ್ ಆರೋಪಿಸಿದ್ದಕ್ಕಾಗಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನು ಈ ಹಿಂದೆ ಸುಪ್ರೀಂ ಕೋರ್ಟ್ ನಡೆಸಿತ್ತು. ‘ಭವಿಷ್ಯದಲ್ಲಿ ಈ ರೀತಿ ನಡೆದುಕೊಳ್ಳದೆ, ಜಾಗರೂಕರಾಗಿರಬೇಕು’ ಎಂದು ಎಚ್ಚರಿಕೆ ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸಿತ್ತು. ರಾಹುಲ್ ಅವರೂ ಬೇಷರತ್ ಕ್ಷಮೆ ಕೋರಿದ್ದರು.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499ರ (ಮಾನನಷ್ಟ) ಅಡಿ ಶಿಕ್ಷಾರ್ಹ ಅಪರಾಧಕ್ಕೆ ಗರಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು. ವಿಚಾರಣಾ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಆದರೆ, ತನ್ನ ಆದೇಶ ಸಮರ್ಥಿಸುವಂತಹ ಯಾವುದೇ ಕಾರಣವನ್ನೂ ನೀಡಿಲ್ಲ. (ಎರಡು ವರ್ಷಗಳ) ಗರಿಷ್ಠ ಶಿಕ್ಷೆ ವಿಧಿಸಿದ್ದರಿಂದ ರಾಹುಲ್ ಅವರು ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 8(3) ಅಡಿ ಲೋಕಸಭಾ ಸಸದಸ್ಯತ್ವದಿಂದ ಅನರ್ಹಗೊಳ್ಳಬೇಕಾಯಿತು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಈ ಹಿಂದೆ ಅಫಿಡವಿಟ್ ಸಲ್ಲಿಸಿದ್ದ ರಾಹುಲ್ ಅವರು ಹೆಚ್ಚು ಜಾಗರೂಕತೆ ವಹಿಸಬೇಕಿತ್ತು. ಮಾನಹಾನಿಕರ ಆರೋಪಗಳನ್ನು ಮಾಡುವಾಗ ಎಚ್ಚರ ವಹಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿದೆ.
ರಾಹುಲ್ ಅವರಿಗೆ ನ್ಯಾಯಾಲಯ ವಿಧಿಸಿದ ಶಿಕ್ಷೆ ಮತ್ತು ನಂತರ ಸಂಸತ್ತಿನ ಸದಸ್ಯತ್ವದ ಅನರ್ಹತೆಯು ಸಾರ್ವಜನಿಕ ಜೀವನದಲ್ಲಿ ಮುಂದುವರಿಯುವ ಅವರ ಹಕ್ಕಿನ ಮೇಲೆ ಪರಿಣಾಮ ಬೀರಿದೆ. ಅಲ್ಲದೆ, ಇದು ಅವರನ್ನು ಆಯ್ಕೆ ಮಾಡಿದ ಮತದಾರರ ಮೇಲೂ ಪರಿಣಾಮ ಬೀರಿದೆ ಎಂದು ಪೀಠ ಆದೇಶದಲ್ಲಿ ಪ್ರಸ್ತಾಪಿಸಿದೆ.
ರಾಹುಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ‘ನನ್ನ ಕಕ್ಷಿದಾರರು ಘೋರ ಅಪರಾಧಿಯಲ್ಲ ಮತ್ತು ಅವರ ವಿರುದ್ಧ ಬಿಜೆಪಿ ಕಾರ್ಯಕರ್ತರು ಹಲವು ಪ್ರಕರಣಗಳನ್ನು ದಾಖಲಿಸಿದ್ದರೂ ಯಾವ ಪ್ರಕರಣದಲ್ಲೂ ಅವರಿಗೆ ಶಿಕ್ಷೆಯಾಗಿಲ್ಲ ಎಂದು ಪೀಠಕ್ಕೆ ತಿಳಿಸಿದರು.
ಗುಜರಾತ್ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ, ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರ ವಿರುದ್ಧ ಸಾಕಷ್ಟು ಪುರಾವೆಗಳಿವೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.