ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮ ಬಾಯಿ ಮುಚ್ಚಿಸಲಾಗದು: ಸುಪ್ರೀಂಕೋರ್ಟ್‌

ತಬ್ಲೀಗ್ ಜಮಾತ್‌ಗೆ ಸಂಬಂಧಿಸಿ ಕೋಮುವಾದಿ ವರದಿಗಾರಿಕೆಯ ಆರೋಪ
Last Updated 13 ಏಪ್ರಿಲ್ 2020, 17:29 IST
ಅಕ್ಷರ ಗಾತ್ರ

ನವದೆಹಲಿ: ‘ಮಾಧ್ಯಮದ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ’ ಎಂದು ಸುಪ‍್ರೀಂ ಕೋರ್ಟ್‌ ಸೋಮವಾರ ಹೇಳಿದೆ.

ನಿಜಾಮುದ್ದೀನ್‌ ಮರ್ಕಜ್‌ನಲ್ಲಿ ನಡೆದ ‘ತಬ್ಲೀಗ್‌ ಜಮಾತ್‌’ ಹಾಗೂ ಆ ನಂತರದ ಬೆಳವಣಿಗೆಗಳ ಬಗ್ಗೆ ಕೆಲವು ಸುದ್ದಿ ವಾಹಿನಿಗಳು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆ. ಇದನ್ನು ತಡೆಯಬೇಕು’ ಎಂದು ಜಮೀಯತ್‌ ಉಲೇಮಾ ಎ ಹಿಂದ್‌ ಸಂಘಟನೆಯು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಕೋರ್ಟ್‌, ಪ್ರಕರಣಕ್ಕೆ ಸಂಬಂಧಿಸಿದಂತೆ ‘ಭಾರತೀಯ ಪತ್ರಿಕಾ ಮಂಡಳಿ’ಯನ್ನು ಪ್ರತಿವಾದಿಯನ್ನಾಗಿಸುವಂತೆ ವಕೀಲ ಇಜಾಜ್‌ ಮಕ್ಬೂಲ್‌ ಅವರಿಗೆ ಸೂಚನೆ ನೀಡಿದೆ.

ಎರಡು ವಾರಗಳ ಬಳಿಕ ಅರ್ಜಿಯ ವಿಚಾರಣೆ ಆರಂಭಿಸುವುದಾಗಿ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ನೇತೃತ್ವದ ಪೀಠ ಹೇಳಿದೆ.

‘ಮಾಧ್ಯಮಗಳ ವರದಿಗಳನ್ನು ಆಧಾರವಾಗಿಟ್ಟುಕೊಂಡು ಜನರ ಮೇಲೆ ಹಲ್ಲೆ ಮಾಡಲಾಗುತ್ತಿದೆ. ಕೊರೊನಾ ಸೋಂಕಿತರ ಹೆಸರುಗಳನ್ನು ಬಹಿರಂಗಪಡಿಸಲಾಗುತ್ತಿದೆ’ ಎಂದು ಇಜಾಜ್‌ ಅವರು ನ್ಯಾಯಾಲಯದ ಮುಂದೆ ಹೇಳಿಕೊಂಡರು.

‘ಸುದ್ದಿ ‍ಪ್ರಸಾರದ ವಿಚಾರವಾಗಿ ಗಟ್ಟಿಯಾದ ಮತ್ತು ದೀರ್ಘಕಾಲೀನ ಕ್ರಮಗಳನ್ನು ಕೈಗೊಳ್ಳಲು ನಾವು ಇಚ್ಛಿಸುತ್ತೇವೆ. ಅದೇನೆಂಬುದು ಜನರಿಗೆ ಆನಂತರ ತಿಳಿಯಲಿದೆ. ಆದ್ದರಿಂದ ಈಗ ಮಧ್ಯಂತರ ಆದೇಶವನ್ನು ನೀಡುವುದಿಲ್ಲ. ಮಾನಹಾನಿ ಅಥವಾ ಹತ್ಯೆಯ ಪ್ರಶ್ನೆಯಾಗಿದ್ದರೆ ಪರಿಹಾರ ಬೇರೆ ಕಡೆ ಇದೆ. ಇದು ವರದಿಗಾರಿಕೆಯ ಪ್ರಶ್ನೆ, ಆದ್ದರಿಂದ ಭಾರತೀಯ ಪತ್ರಿಕಾ ಮಂಡಳಿಯನ್ನು ಪ್ರತಿವಾದಿಯನ್ನಾಗಿಸಬೇಕು’ ಎಂದು ಕೋರ್ಟ್‌ ಹೇಳಿದೆ.

‘ಇಡೀ ಮುಸ್ಲಿಂ ಸಮುದಾಯವನ್ನು ರಾಕ್ಷಸೀಕರಿಸುವ ಉದ್ದೇಶದಿಂದ ‘ಕೊರೊನಾ ಜಿಹಾದ್‌, ಕೊರೊನಾ ಭಯೋತ್ಪಾದನೆ, ಕೊರೊನಾ ಬಾಂಬ್‌, ಮುಸ್ಲಿಂ ದಂಗೆ’ ಮುಂತಾದ ಪದಗಳನ್ನು ಮಾಧ್ಯಮಗಳು ಬಳಸುತ್ತಿವೆ’ ಎಂದು ಮುಸ್ಲಿಂ ವಿದ್ವಾಂಸರನ್ನೊಳಗೊಂಡ ಸಂಸ್ಥೆಯು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.ನಿಜಾಮುದ್ದೀನ್‌ ಮರ್ಕಜ್‌ ಘಟನೆಗೆ ಕೋಮುವಾದಿ ಬಣ್ಣ ನೀಡಿದ ಮಾಧ್ಯಮಗಳನ್ನು ಗುರುತಿಸಿ, ಅವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕು ಎಂದೂ ಮನವಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT