ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಡ ರೈತರ ಕಷ್ಟ ಗೊತ್ತು, ಕೂಳೆ ನಿರ್ವಹಣೆಗೆ ಯಂತ್ರ ನೀಡಿ: ಸುಪ್ರೀಂ ಕೋರ್ಟ್‌

ಕೂಳೆ ನಿರ್ವಹಣೆಯ ಯಂತ್ರ ಸರ್ಕಾರವೇ ಒದಗಿಸಬಾರದೇಕೆ?
Last Updated 13 ನವೆಂಬರ್ 2021, 21:30 IST
ಅಕ್ಷರ ಗಾತ್ರ

ನವದೆಹಲಿ: ಕೂಳೆ ನಿರ್ವಹಣೆಗಾಗಿ ಯಂತ್ರಗಳನ್ನು ಖರೀದಿಸುವುದು ಬಡರೈತರಿಗೆ ಸಾಧ್ಯವಾಗದು ಎಂದು ಸುಪ್ರೀಂ ಕೋರ್ಟ್‌ ಶನಿವಾರ ಅಭಿಪ್ರಾಯಪಟ್ಟಿದೆ.

‘ನಾನೂ ರೈತ. ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಅವರೂ ಕೃಷಿ ಕುಟುಂಬದಿಂದಲೇ ಬಂದವರು. ರೈತರ ಕಷ್ಟ ಏನೆಂಬುದರ ಅರಿವು ನಮಗಿದೆ. ಬೆಳೆ ಕಟಾವಿನ ನಂತರದ ಕೂಳೆ ನಿರ್ವಹಣೆಗಾಗಿ ಉತ್ತರದ ರಾಜ್ಯಗಳ ಬಡ ಹಾಗೂ ಸಣ್ಣ ರೈತರಿಗೆ ಯಂತ್ರಗಳನ್ನು ಖರೀದಿಸುವುದು ಆಗದ ಮಾತು’ ಎಂದುನ್ಯಾಯಮೂರ್ತಿ ಸೂರ್ಯಕಾಂತ ಹೇಳಿದರು.

ಕೂಳೆ ತೆಗೆಯುವ ಯಂತ್ರಗಳನ್ನು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಉಚಿತವಾಗಿ ಒದಗಿಸುವಂತೆ ನಿರ್ದೇಶನ ನೀಡುವಂತೆ ಕೋರಿ, ಪರಿಸರ ಕಾರ್ಯಕರ್ತ ಆದಿತ್ಯ ದುಬೆ ಹಾಗೂ ಕಾನೂನು ವಿದ್ಯಾರ್ಥಿ ಅಮನ್‌ ಬಂಕಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನ ಸುಪ್ರೀಂ ಕೋರ್ಟ್‌ ನಡೆಸಿತು.

‘ಎರಡು ಲಕ್ಷ ಯಂತ್ರಗಳು ಲಭ್ಯವಿರುವುದಾಗಿ ನೀವು ಹೇಳುತ್ತಿದ್ದೀರಿ. ಆದರೆ, ಅವುಗಳನ್ನು ಕೊಳ್ಳುವ ಶಕ್ತಿ ಬಡ ರೈತರಿಗೆ ಇಲ್ಲ. ಕೃಷಿ ಕಾನೂನುಗಳ ನಂತರದಲ್ಲಿ ಉತ್ತರಪ್ರದೇಶ, ಪಂಜಾಬ್‌ ಹಾಗೂ ಹರಿಯಾಣದಲ್ಲಿ ಮೂರು ಎಕರೆಗಿಂತ ಕಡಿಮೆ ಭೂಮಿ ಉಳ್ಳವರಿದ್ದಾರೆ. ಅಂಥವರಿಂದ ಯಂತ್ರ ಖರೀದಿಯನ್ನು ನಿರೀಕ್ಷಿಸಲಾಗದು’ ಎಂದು ಸಾಲಿಸಿಟರ್ ಜನರಲ್‌ ತುಷಾರ್‌ ಮೆಹ್ತಾ ಅವರಿಗೆ ಹೇಳಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳೇ ಯಂತ್ರಗಳನ್ನು ಒದಗಿಸಬಾರದೇಕೆ? ಕಾಗದ ಕಾರ್ಖಾನೆಗಳಲ್ಲಿ ಅಥವಾ ಬೇರೆ ಉದ್ದೇಶಕ್ಕೆ ಕೂಳೆಯನ್ನು ಬಳಕೆ ಮಾಡಿ. ರಾಜಸ್ಥಾನದಲ್ಲಿ ಚಳಿಗಾಲದಲ್ಲಿ ಆಡುಗಳಿಗೆ ಮೇವಾಗಿಯೂ ಬಳಸಬಹುದು’ ಎಂದು ಸಲಹೆ ನೀಡಿದರು.

ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಮೆಹ್ತಾ, ಈ ಯಂತ್ರಗಳು ಶೇ 80 ಸಬ್ಸಿಡಿ ದರದಲ್ಲಿ ಲಭ್ಯ ಇರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು.

‘ಹಾಗಿದ್ದರೆ, ಸಬ್ಸಿಡಿ ನಂತರದಲ್ಲಿ ಈ ಯಂತ್ರಗಳ ನಿಜವಾದ ದರ ಎಷ್ಟು ಎಂಬುದನ್ನು ನಿಮ್ಮ ಅಧಿಕಾರಿಗಳು ಹೇಳುತ್ತಾರೆಯೇ? ಅಷ್ಟು ದರ ಕೊಟ್ಟು ರೈತರಿಗೆ ಖರೀದಿಸುವುದು ಸಾಧ್ಯವಾಗುತ್ತದೆಯೇ’ ಎಂದು ನ್ಯಾಯಮೂರ್ತಿ ಸೂರ್ಯಕಾಂತ ಪ್ರಶ್ನಿಸಿದರು.

ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ, ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಅವರೂ ಇದ್ದ ವಿಶೇಷ ನ್ಯಾಯಪೀಠವು ಅರ್ಜಿಯ ವಿಚಾರಣೆ ನಡೆಸಿತು.

ದೆಹಲಿ ಸರ್ಕಾರದ ಪರವಾಗಿ ಹಾಜರಿದ್ದ ಹಿರಿಯ ವಕೀಲ ರಾಹುಲ್‌ ಮೆಹ್ರಾ, ರೈತರು ಕೂಳೆ ಸುಡುವ ವಿಷಯವನ್ನು ನ್ಯಾಯಾಲಯದ ಗಮನಕ್ಕೆ ತಂದರು.

ಆಗ, ‘ವಾಯು ಮಾಲಿನ್ಯಕ್ಕೆ ರೈತರನ್ನು ದೂರುವುದು ಫ್ಯಾಶನ್‌ ಆಗಿಬಿಟ್ಟಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಪಟಾಕಿ ನಿಷೇಧ ಮತ್ತು ವಾಹನಗಳ ಇಂಗಾಲ ಹೊರ
ಸೂಸುವಿಕೆಯನ್ನು ನಿಯಂತ್ರಿಸುವುದು ಸೇರಿದಂತೆ ಬೇರೆ ಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗಿದೆಯೇ ಎಂದೂ ಪ್ರಶ್ನಿಸಿತು.

‘ಅರ್ಜಿದಾರರು, ದೆಹಲಿ ಸರ್ಕಾರ ಅಥವಾ ಇನ್ನಾರೇ ಆಗಿರಲಿ. ರೈತರನ್ನು ದೂರುವುದೇ ಫ್ಯಾಶನ್‌ ಆಗಿದೆ. ದೆಹಲಿಯಲ್ಲಿ ಕಳೆದ ಏಳು ದಿನಗಳಲ್ಲಿ ಪಟಾಕಿ ಸುಟ್ಟಿದ್ದನ್ನು ನೋಡಿದಿರಾ? ದೆಹಲಿ ಪೊಲೀಸರು ಏನು ಮಾಡುತ್ತಿದ್ದರು?‘ ಎಂದು ತರಾಟೆಗೆ ತೆಗೆದುಕೊಂಡಿತು.

ಈ ಬಗ್ಗೆ ಸಂಬಂಧಿಸಿದವರೊಂದಿಗೆ ಸಭೆ ನಡೆಸಿ, ಸೋಮವಾರ ಪ್ರತಿಕ್ರಿಯೆ ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತು.

ದೆಹಲಿಯಲ್ಲಿ ವಾಯು ಮಾಲಿನ್ಯ: ಎರಡು ದಿನ ‘ಲಾಕ್‌ಡೌನ್‌’ ಘೋಷಣೆಗೆ ಸಲಹೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಮಿತಿಮೀರಿದ್ದು, ಗಾಳಿಯ ಗುಣಮಟ್ಟ ಸುಧಾರಣೆಗಾಗಿ ಅಗತ್ಯವಿದ್ದಲ್ಲಿ ನಗರದಲ್ಲಿ ಎರಡು ದಿನ ಲಾಕ್‌ಡೌನ್‌ ಘೋಷಿಸುವಂತೆ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಶನಿವಾರ ಸಲಹೆ ನೀಡಿದೆ.

ಲಾಕ್‌ಡೌನ್‌ ಜಾರಿಗೊಳಿಸುವ ಎರಡು ದಿನ ನಗರದಲ್ಲಿ ವಾಹನಗಳ ಸಂಚಾರ, ಬೆಳೆ ತ್ಯಾಜ್ಯ ಸುಡುವುದು, ಕೈಗಾರಿಕೆಗಳು, ಪಟಾಕಿ ಬಳಕೆಯ ಮೇಲೆ ನಿಷೇಧ ವಿಧಿಸುವುದರಿಂದ ಸ್ವಲ್ಪಮಟ್ಟಿಗೆ ಗಾಳಿಯ ಗುಣಮಟ್ಟ ಸುಧಾರಿಸಬಹುದೆಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ.

‘ಬೆಳೆ ತ್ಯಾಜ್ಯ ಸುಡುವುದು ಶೇ 25ರಷ್ಟು ಮಾಲಿನ್ಯಕ್ಕೆ ಕಾರಣವಾದರೆ, ಉಳಿದ ಶೇ 75ರಷ್ಟು ಮಾಲಿನ್ಯವು ಪಟಾಕಿ ಸುಡುವುದು, ವಾಹನಗಳಿಂದ ಹೊರಹೊಮ್ಮುವ ಹೊಗೆ ಮತ್ತು ದೂಳಿನಿಂದ ಆಗುತ್ತಿದೆ’ ಎಂದು ರಮಣ ಹೇಳಿದರು.

‘ಸದ್ಯ ದೆಹಲಿಯ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ನಾವು ಮನೆಯಲ್ಲಿ ಮಾಸ್ಕ್‌ ಧರಿಸುತ್ತಿದ್ದೇವೆ. ಇದು ಅತ್ಯಂತ ಕೆಟ್ಟ ಪರಿಸ್ಥಿತಿ. ವಾಯು ಮಾಲಿನ್ಯ ತಡೆಗಟ್ಟುವುದು ಹೇಗೆ? ಲಾಕ್‌ಡೌನ್‌ ಒಂದೇ ಪರಿಹಾರವೇ? ಜನರು ಬದುಕುವುದು ಹೇಗೆ?’ ಎಂದು ಎನ್‌.ವಿ.ರಮಣ ಅವರು ಕೇಂದ್ರದ ಪ್ರತಿನಿಧಿ ಸಾಲಿಸಿಟರ್ ಜನರಲ್‌ ತುಷಾರ್‌ ಮೆಹ್ತಾ ಅವರನ್ನು ಪ್ರಶ್ನಿಸಿದರು.

ವಾಯು ಮಾಲಿನ್ಯ ನಿಯಂತ್ರಿಸಲು ಬೆಳೆ ತ್ಯಾಜ್ಯ ಸುಡುವುದನ್ನು ನಿಲ್ಲಿಸುವಂತೆ ರೈತರಿಗೆ ಸೂಚಿಸಲಾಗಿದೆ ಎಂದು ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ತುಷಾರ್‌ ಮೆಹ್ತಾ ವಿವರಿಸಿದರು.

ಈ ಬಗ್ಗೆ, ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಪ್ರತಿಕ್ರಿಯಿಸಿ, ‘ರೈತರನ್ನು ದೂಷಿಸುವ ಬದಲು, ಕೇಂದ್ರ ಮತ್ತು ಎಲ್ಲಾ ರಾಜ್ಯ ಸರ್ಕಾರಗಳು ವಾಯು ಮಾಲಿನ್ಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಹೇಳಿದರು.

ಚತುರ ವಾಗ್ಮಿಯಲ್ಲ:ವಾಯುಮಾಲಿನ್ಯಕ್ಕೆ ರೈತರಷ್ಟೇ ಕಾರಣ ಎಂಬುದು ತಮ್ಮ ಮಾತಿನ ಅರ್ಥವಾಗಿರಲಿಲ್ಲ ಎಂದು ಮೆಹ್ತಾ ಅವರು ನ್ಯಾಯಪೀಠಕ್ಕೆ ಸ್ಪಷ್ಟಪಡಿಸಲು ಮುಂದಾದರು. ಆಗ ಸಿಜೆಐ ರಮಣ ಅವರು, ‘ನಾನು ಚತುರ ವಾಗ್ಮಿಯಲ್ಲ. ನಾನು ಎಂಟನೇ ತರಗತಿಯಲ್ಲಷ್ಟೇ ಇಂಗ್ಲಿಷ್‌ ಕಲಿತಿದ್ದು ಕಾನೂನು ಅಧ್ಯಯನವನ್ನು ಇಂಗ್ಲಿಷ್‌ನಲ್ಲಿ ಮಾಡಿದ್ದೇನೆ. ಪದಗಳನ್ನು ಅಭಿವ್ಯಕ್ತಿಪಡಿಸುವ ಒಳ್ಳೆಯ ಇಂಗ್ಲಿಷ್‌ ನನ್ನಲ್ಲಿಲ್ಲ’ ಎಂದರು.

ಆಗ ಮೆಹ್ತಾ, ತಾವಿಬ್ಬರೂ ಒಂದೇ ದೋಣಿಯ ಪಯಣಿಗರು ಎಂದು ಪ್ರತಿಕ್ರಿಯಿಸಿದರು.

ತಾವು ಕೂಡ ಎಂಟನೇ ತರಗತಿಗೆ ಇಂಗ್ಲಿಷ್‌ ಕಲಿತಿದ್ದಾಗಿ ಹಾಗೂ ಪದವಿಯನ್ನು ಗುಜರಾತಿ ಮಾಧ್ಯಮದಲ್ಲೇ ಓದಿದ್ದಾಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT