ನವದೆಹಲಿ: ಇದೇ 11ಕ್ಕೆ ನಿಗದಿಯಾಗಿರುವ ನೀಟ್–ಪಿಜಿ ಪರೀಕ್ಷೆಯನ್ನು ಮುಂದೂಡುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ನಡೆಸಲಿದೆ.
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು(ಎನ್‌ಟಿಎ) ನೀಟ್–ಪಿಜಿ ಪರೀಕ್ಷೆಗೆ ನಿಗದಿಪಡಿಸಿರುವ ಪರೀಕ್ಷಾ ಕೇಂದ್ರಗಳನ್ನು ತಲುಪುವುದು ಸಮಯ ಅಭಾವದ ಕಾರಣ ಪರೀಕ್ಷಾರ್ಥಿಗಳಿಗೆ ತೊಂದರೆಯಾಗಲಿದೆ. ಹಾಗಾಗಿ, ಭಾನುವಾರ ನಿಗದಿಯಾಗಿರುವ ಪರೀಕ್ಷೆಯನ್ನು ಮುಂಡೂಡಬೇಕೆಂದು ವಿಶಾಲ್ ಸೊರೇನ್ ಎಂಬುವರು ಸುಪ್ರೀಂ ಕೋರ್ಟ್ ಮೊರೆಹೋಗಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠವು, ಈ ವಿಷಯದ ಕುರಿತು ವಕೀಲ ಅನಾಸ್ ತನ್ವೀರ್ ಸಲ್ಲಿಸಿದ್ದ ದಾಖಲೆಗಳನ್ನು ಗುರುವಾರ ಪರಿಶೀಲಿಸಿತು. ಬಳಿಕ, ಶುಕ್ರವಾರ ಈ ಅರ್ಜಿಯ ವಿಚಾರಣೆ ನಡೆಸುವುದಾಗಿ ಹೇಳಿತು.
ಪರೀಕ್ಷೆ ನಡೆಯಲಿರುವ ನಗರಗಳ ಪಟ್ಟಿಯನ್ನು ಜುಲೈ 31ರಂದು ಪ್ರಕಟಿಸಿರುವ ಎನ್‌ಟಿಎ, ನಿರ್ದಿಷ್ಟ ಪರೀಕ್ಷಾ ಕೇಂದ್ರಗಳನ್ನು ಆಗಸ್ಟ್ 8ರಂದು ಪ್ರಕಟಿಸುವುದಾಗಿ ಹೇಳಿದೆ. ಹಾಗಾಗಿ ಪರೀಕ್ಷಾರ್ಥಿಗಳಿಗೆ ನಿಗದಿತ ಸಮಯದೊಳಗೆ ಪರೀಕ್ಷಾ ಕೇಂದ್ರಗಳನ್ನು ತಲುಪುವುದು ಬಹಳ ತ್ರಾಸದಾಯಕವಾಗಲಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಹಿಂದೆ ಜೂನ್ 23ರಂದು ನೀಟ್–ಪಿಜಿ ಪರೀಕ್ಷೆ ನಿಗದಿಯಾಗಿತ್ತು. ಆದರೆ ಕೆಲ ಸ್ಪರ್ಧಾತ್ಮಕ ಪರೀಕ್ಷಾ ಅಕ್ರಮಗಳ ಕುರಿತು ದೂರುಗಳು ವ್ಯಕ್ತವಾದ ಕಾರಣ ಕೇಂದ್ರ ಆರೋಗ್ಯ ಸಚಿವಾಲಯ ಪರೀಕ್ಷೆಯನ್ನು ಮುಂದೂಡಿತ್ತು.