ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಪ್ಪುರಂ ದೋಣಿ ದುರಂತ: ನ್ಯಾಯಾಂಗ ತನಿಖೆ, ಮೃತರ ಕುಟುಂಬಕ್ಕೆ ತಲಾ ₹10 ಲಕ್ಷ ಪರಿಹಾರ

ಕೇರಳ ಸರ್ಕಾರದ ಆದೇಶ: ಲೈಸೆನ್ಸ್ ಇಲ್ಲದ ದೋಣಿ, ಸಾಮರ್ಥ್ಯ ಮೀರಿ ಜನರ ಭರ್ತಿ
Published 8 ಮೇ 2023, 19:35 IST
Last Updated 8 ಮೇ 2023, 19:35 IST
ಅಕ್ಷರ ಗಾತ್ರ

ಮಲಪ್ಪುರಂ: ಕೇರಳದ ತುವಲ್‌ತೀರ ಬೀಚ್‌ನಲ್ಲಿ ಭಾನುವಾರ ಸಂಜೆ ಸಂಭವಿಸಿದ ದೋಣಿ ದುರಂತ ಕುರಿತು ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಮೃತರ ಕುಟುಂಬಕ್ಕೆ ತಲಾ ₹ 10 ಲಕ್ಷ ಪರಿಹಾರ ಘೋಷಿಸಿದೆ.

ದೋಣಿ ಮಗುಚಿ ಸಂಭವಿಸಿದ್ದ ದುರಂತದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ 22 ಜನರು ಮೃತಪಟ್ಟಿದ್ದರು. ಕಣ್ಣುಮೇಲ್‌ ಕುಟುಂಬದ 12 ಜನರು ಮೃತರಲ್ಲಿ ಸೇರಿದ್ದರು.

‘ಅವಘಡದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿರುವವರ ಚಿಕಿತ್ಸೆ ವೆಚ್ಚವನ್ನೂ ಸರ್ಕಾರ ಭರಿಸಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೋಮವಾರ ಹೇಳಿದರು. ತಿರುರಂಗಂಡಿ ತಾಲ್ಲೂಕು ಆಸ್ಪತ್ರೆಯಲ್ಲಿ ಮೃತರ ಕುಟುಂಬದವರ ಭೇಟಿ ಬಳಿಕ ಅವರು ಸುದ್ದಿಗಾರರ ಜೊತೆಗೆ ಮಾತನಾಡಿದರು.

ಇದಕ್ಕೆ ಮುನ್ನ ಅವರು ಸರ್ವಪಕ್ಷ ಸಭೆ ಕರೆದು ಈ ವಿಷಯ ಕುರಿತು ಚರ್ಚಿಸಿದರು. ‘ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಸರ್ವಪಕ್ಷಗಳ ಸಭೆ ನಿರ್ಧರಿಸಿದೆ. ದೋಣಿ ಸುರಕ್ಷತೆ ಮತ್ತು ಇತರೆ ತಾಂತ್ರಿಕ ಅಂಶಗಳು ತನಿಖೆ ವ್ಯಾಪ್ತಿಗೆ ಒಳಪಡಲಿವೆ. ತಾಂತ್ರಿಕ ಪರಿಣತರು ತನಿಖೆ ಆಯೋಗದಲ್ಲಿ ಇರಲಿದ್ದಾರೆ. ಜೊತೆಗೆ ಕೇರಳ ಪೊಲೀಸ್‌ನ ವಿಶೇಷ ತಂಡವೂ ಅವಘಡದ ತನಿಖೆಯನ್ನು ನಡೆಸಲಿದೆ’ ಎಂದು ವಿವರಿಸಿದರು.

ಪ್ರವಾಸಿಗರ ಬೋಟ್‌ಗಳಲ್ಲಿ ಸುರಕ್ಷತೆ ಕುರಿತು ಸರ್ಕಾರ ನಿಯಮಗಳನ್ನು ರೂಪಿಸಿತ್ತು. ಇಲ್ಲಿ, ಆ ನಿಯಮ ಪಾಲನೆಯಾಗಿದೆಯೇ ಎಂದು ತನಿಕೆ ನಡೆಯಲಿದೆ ಎಂದು ಹೇಳಿದರು. 

ಜಿಲ್ಲಾ ಅಧಿಕಾರಿಗಳ ಪ್ರಕಾರ, ಮೃತರಲ್ಲಿ 15 ಮಂದಿ ಎಂಟು ತಿಂಗಳಿನಿಂದ 17 ವರ್ಷ ವಯಸ್ಸಿನವರು. ತನೂರ್‌ ಠಾಣೆಯ ಪೊಲೀಸರು, ‘ಸದ್ಯ ಬೋಟ್‌ ಮಾಲೀಕ ತಲೆಮರೆಸಿಕೊಂಡಿದ್ದು, ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಬೋಟ್‌ಗೆ ಲೈಸೆನ್ಸ್‌ ಇರಲಿಲ್ಲ’ ಎಂದು ಗೊತ್ತಾಗಿದೆ ಎಂದು ತಿಳಿಸಿದರು. 

ಈ ಮಧ್ಯೆ, ಕೊಚ್ಚಿಯ ಪಳರಿವಟ್ಟಂ ಠಾಣೆಯ ವ್ಯಾಪ್ತಿಯಲ್ಲಿ ಬೋಟ್‌ ಮಾಲೀಕನದು ಎನ್ನಲಾದ ಕಾರು ಮತ್ತು ಮೊಬೈಲ್ ಫೋನ್‌ ಪತ್ತೆಯಾಗಿದೆ. ‘ಆ ಕಾರಿನಲ್ಲಿ ಆರೋಪಿ ಇಲ್ಲ, ಆತನ ಕುಟುಂಬ ಸದಸ್ಯರಿದ್ದು, ವಕೀಲರ ಭೇಟಿಗೆ ಸಿದ್ಧತೆ ನಡೆಸಿದ್ದಾರೆ’ ಎಂದು ಸ್ಥಳೀಯ ಪೊಲೀಸರು ತಿಳಿಸಿದರು.

ಶೋಧ ಕಾರ್ಯಕ್ಕೆ ಏಳು ತಂಡ: ಎನ್‌ಡಿಆರ್‌ಎಫ್‌, ಕರಾವಳಿ ರಕ್ಷಣಾ ಪಡೆ, ಅಗ್ನಿಶಾಮಕ ಸೇವೆ, ನೌಕಾಪಡೆ ಮತ್ತು ಸ್ಥಳೀಯರ ಒಟ್ಟು  ಏಳು ತಂಡಗಳು ಶೋಧ ನಡೆಸಿದವು. ಎನ್‌ಡಿಆರ್‌ಎಫ್‌ನ ಇನ್ನೊಂದು ತಂಡ ಶೀಘ್ರ ಸೇರ್ಪಡೆ ಆಗಲಿದೆ ಎಂದು ಸಚಿವ ರಾಜನ್‌ ತಿಳಿಸಿದರು.

’22 ಜನರು ಮೃತಪಟ್ಟಿದ್ದಾರೆ. ದೋಣಿಯಲ್ಲಿ 37 ಜನರಿದ್ದರು. ಐವರು ಈಜಿ ದಡ ಸೇರಿದ್ದಾರೆ. ಅದು ಖಾಸಗಿ ಬೋಟ್ ಆಗಿದ್ದು, ಎಷ್ಟು ಜನರಿದ್ದರು ಎಂಬುದು ಖಚಿತವಾಗಿ ಹೇಳಲಾಗುತ್ತಿಲ್ಲ‘ ಎಂದು ತಿಳಿಸಿದರು.

‘15 ಜನರಿರುವ ನುರಿತ ಈಜುಗಾರರ ತಂಡ, ಅಗತ್ಯ ಪರಿಕರಗಳ ಜೊತೆಗೆ ಶೋಧ ಕಾರ್ಯದಲ್ಲಿ ತೊಡಗಿದೆ. ಕಾರ್ಯಾಚರಣೆಯ ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆದಿದೆ’ ಎಂದು ನೌಕಾಪಡೆ ಅಧಿಕಾರಿಗಳು ಹೇಳಿದರು.

ದೋಣಿ ದುರಂತದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸೋಮವಾರ ಒಂದು ದಿನದ ಶೋಕ ಘೋಷಿಸಿದ್ದು, ಅಧಿಕೃತ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿತ್ತು.

ದೋಣಿ ದುರಂತದಲ್ಲಿ ನೀರು ಪಾಲಾದವರ ಶೋಧ ಕಾರ್ಯಕ್ಕೆ ನೌಕಾಪಡೆ ಹೆಲಿಕಾಪ್ಟರ್‌ ನೆರವು ಪಡೆಯಲಾಗಿತ್ತು –ಎಎಫ್‌ಪಿ ಚಿತ್ರ
ದೋಣಿ ದುರಂತದಲ್ಲಿ ನೀರು ಪಾಲಾದವರ ಶೋಧ ಕಾರ್ಯಕ್ಕೆ ನೌಕಾಪಡೆ ಹೆಲಿಕಾಪ್ಟರ್‌ ನೆರವು ಪಡೆಯಲಾಗಿತ್ತು –ಎಎಫ್‌ಪಿ ಚಿತ್ರ

ಕಡೆ ಪಯಣವಾದ ‘ಕಡೇ ಟ್ರಿಪ್‌’ ಆಮಿಷ ಆಸ್ಪತ್ರೆಯಲ್ಲಿ ಅರಿವಿಗೆ ಬಂದ ‘ಸಂಬಂಧ’

ಮಲ್ಲಪುರಂ (ಪಿಟಿಐ): 22 ಜನರ ಅಕಾಲಿಕ ಸಾವಿಗೆ ಕಾರಣವಾದ ದೋಣಿ ದುರಂತ ಹಲವರ ಪಾಲಿಗೆ ದುಃಸ್ವಪ್ನ. ಆಟೊರಿಕ್ಷಾ ಚಾಲಕ ಶಾಹುಲ್ ಹಮೀದ್‌ ಪಾಲಿಗೆ ಅನವರತ ಕಾಡುವ ಆಘಾತ. ದುರಂತದ ಮಾಹಿತಿ ತಿಳಿದಂತೆ ಶಾಹುಲ್ ಅಟೊದಲ್ಲಿ ಸ್ಥಳಕ್ಕೆ ಧಾವಿಸಿದ್ದರು.

ದುರಂತ ಸ್ಥಳದಿಂದ ಆ ವೇಳೆಗೆ ರಕ್ಷಿಸಿದ್ದ ಮೂವರು ಮಕ್ಕಳನ್ನು ಜೀವ ಉಳಿಸುವ ಭರದಲ್ಲಿ ಆಟೊಗೆ ಸ್ಥಳಾಂತರಿಸಲಾಗಿತ್ತು. ಆಸ್ಪತ್ರೆಗೆ ತಲುಪಿದ ಬಳಿಕ ಶಾಹುಲ್‌ಗೆ ತಿಳಿದ ಸಂಗತಿ: ಆಟೊದಲ್ಲಿ ಬಿದ್ದಿರುವ ಮೂವರು ತಂಗಿ ಮಕ್ಕಳು ಎಂಬುದು. ದೋಣಿ ನಿರ್ವಹಣೆಗಾರನ ‘ಕೊನೆ ಟ್ರಿಪ್‌’ ತಂತ್ರ ಹಲವರಿಗೆ ಕಡೆ ಪಯಣವೇ ಆಯಿತು. ಸಾಮರ್ಥ್ಯ ಮೀರಿ ಜನರನ್ನು ತುಂಬಲಾಗಿತ್ತು. ಇದನ್ನು ಗಮನಿಸಿ ಕೆಲವರು ನೀಡಿದ ಎಚ್ಚರಿಕೆಯೂ ಫಲ ನೀಡಲಿಲ್ಲ.  ‘ಕೊನೆ ಟ್ರಿಪ್‌’ ತಂತ್ರಕ್ಕೆ ಮಾರುಹೋಗಿ ದೋಣಿ ಏರಿದ್ದವರಲ್ಲಿ ಆಟೊ ಚಾಲಕ ಶಾಹುಲ್‌ನ ಸಹೋದರಿ ಆಕೆಯ ಮೂವರು ಮಕ್ಕಳು ಇದ್ದರು.

‘ಸ್ಥಳಕ್ಕೆ ಹೋದಂತೆ ಮಕ್ಕಳನ್ನು ಆಟೊಗೆ ಹಾಕಿದರು. ವೇಗವಾಗಿ ಆಸ್ಪತ್ರೆ ತಲುಪಿದ್ದೆ. ಅಲ್ಲಿಗೆ ಹೋದಾಗಲೇ ಅವರು ತಂಗಿಯ ಮಕ್ಕಳೆಂಬುದು ತಿಳಿಯಿತು‘ ಎಂದು ಹೇಳಿದರು. ಶಾಹುಲ್ ತಂಗಿಯ ಕುಟುಂಬಕ್ಕೆ ಸೇರಿದ ಇತರ ಐವರು ಮತ್ತು ಮೂವರು ಸಂಬಂಧಿಕರು ಮೃತಪಟ್ಟಿದ್ದ 22 ಜನರಲ್ಲಿ ಸೇರಿದ್ದರು. ವಾರಾಂತ್ಯದ ರಜೆ ಕಾರಣ ಹಲವು ಕುಟುಂಬಗಳು ತೂವಳತೀರಕ್ಕೆ ಬಂದಿದ್ದವು. ದೋಣಿ ಪ್ರಯಾಣ ಎಷ್ಟು ಸುರಕ್ಷಿತ ಎಂದು ಮೂಡಿದ ಶಂಕೆಯೇ ಇಬ್ಬರ ಜೀವ ಉಳಿಸಿತು. ಐಸ್ಯಾಕ್‌ ಮತ್ತು ಇಬ್ರಾಹಿಂ ಸೋದರರಿಗೆ ದೋಣಿ ಪ್ರಯಾಣ ಸುರಕ್ಷಿತವಲ್ಲ ಎಂಬ ಶಂಕೆ ಬಲವಾಗಿತ್ತು. ದೋಣಿ ಏರದೆ ಹಿಂದೆ ಉಳಿದರು. ಕೊನೆಗೆ ಜೀವ ಉಳಿಸಿಕೊಂಡರು.  ಕೊನೆ ಟ್ರಿಪ್ ಎಂಬ ಆತುರ ಹೆಚ್ಚಿನ ಜನರು ದೋಣಿ ಏರಿದ್ದನ್ನು ಗಮನಿಸಿದ್ದ ಶಂಸುದ್ದೀನ್‌ ಮತ್ತು ಅವರ ಎಂಟು ಸದಸ್ಯರ ಕುಟುಂಬ ಕೂಡಾ ದೋಣಿ ವಿಹಾರದಿಂದ ಹಿಂದೆ ಸರಿಯಿತು.

‘ನಾನು ಟಿಕೆಟ್ ಖರೀದಿಸಿದ್ದೆ. ಆದರೆ ಅದಾಗಲೇ ಸಾಮರ್ಥ್ಯ ಮೀರಿ ದೋಣಿ ತುಂಬಿತ್ತು. ಒಮ್ಮುಖವಾಗಿ ಬಾಗಿತ್ತು. ಅದನ್ನು ಗಮನಿಸಿ ನಾನು ಟಿಕೆಟ್‌ ಕ್ಯಾನ್ಸಲ್‌ ಮಾಡಿಕೊಂಡೆ‘ ಎಂದು ಬಳಿಕ ತಿಳಿಸಿದರು. ‘ಇದು ಬಯಸಿ ಮಾಡಿಕೊಂಡ ದುರಂತ. ಸಾಮರ್ಥ್ಯ ಮೀರಿ ಪ್ರಯಾಣಿಕರ ತುಂಬದಿದ್ದರೆ ಘಟಿಸುತ್ತಿರಲಿಲ್ಲ‘ ಎಂದು ಸ್ಥಳೀಯ ನಿವಾಸಿಯೊಬ್ಬರು ಘಟನೆಯನ್ನು ಸ್ಮರಿಸಿದರು. ದೋಣಿಗೆ ಗಾಜಿನ ಕವಚ ಇದ್ದು ಎರಡೇ ಬಾಗಿಲಿದ್ದವು ಹೆಚ್ಚಿನ ಸಾವುಗಳಿಗೆ ಇದೂ ಕಾರಣ ಎಂದು ಮತ್ತೊಬ್ಬರು ಹೇಳಿದರು. ರಕ್ಷಣಾ ವ್ಯವಸ್ಥೆ ಇರಲಿಲ್ಲ. ಸ್ಥಳೀಯ ಮೀನುಗಾರರೇ ರಕ್ಷಣೆಗೆ ಧಾವಿಸಿದ್ದರು. 

10 ದಶಕ 200 ಜನ ನೀರುಪಾಲು ದೋಣಿ ದುರಂತದ ಕರಾಳ ಇತಿಹಾಸ

ತಿರುವನಂತಪುರಂ/ಮಲಪ್ಪುರಂ (ಪಿಟಿಐ): ಕೇರಳದಲ್ಲಿ ದೋಣಿ ಅವಘಡಗಳ ಕರಾಳ ಇತಿಹಾಸವಿದೆ. 100 ವರ್ಷಗಳಲ್ಲಿ 200 ಜನರು ಸತ್ತಿದ್ದಾರೆ. ಪ್ರಮುಖ ದುರಂತದ ಹಿನ್ನೋಟ ಹೀಗಿದೆ.

* 1924: ಕೊಲ್ಲಂನಿಂದ ಕೊಟ್ಟಾಯಂಗೆ ತೆರಳುತ್ತಿದ್ದ ದೋಣಿಯು ಪಾಳನ ಬಳಿ ಮಗುಚಿ 24 ಜನರ ಸಾವು. ಮಹಾಕವಿ ಕುಮಾರನಾಸನ್ ಕೂಡಾ ಇದೇ ಅವಘಡದಲ್ಲಿ ಅಸುನೀಗಿದ್ದರು.

* ಮಾರ್ಚ್ 19 1980: ಕನ್ನಮಲಿ ಬಳಿ ದೋಣಿ ಮಗುಚಿ ಚರ್ಚ್‌ಗೆ ಪ್ರಾರ್ಥನೆಗೆ ತೆರಳುತ್ತಿದ್ದ 30 ಜನರ ಸಾವು.

* ಸೆಪ್ಟೆಂಬರ್ 25. 1983: ವಲ್ಲರ್‌ಪದಂ ಬಳಿ ನಡೆದ ಅವಘಡದಲ್ಲಿ ಚರ್ಚ್‌ನ ಕಾರ್ಯಕ್ರಮ ಮುಗಿಸಿ ಮರಳುತ್ತಿದ್ದ 18 ಜನರ ಸಾವು.

* ಜುಲೈ 27 2002: ಕೇರಳ ಜಲಸಾರಿಗೆ ಇಲಾಖೆಯ ಎ53 ದೋಣಿ ಮಗುಚಿ 29 ಜನರ ಸಾವು. ಸ್ಪರ್ಧಾತ್ಮಕ ಪರೀಕ್ಷೆಗೆ ತೆರಳುತ್ತಿದ್ದ ಹಲವು ಪರೀಕ್ಷಾರ್ಥಿಗಳು ಮೃತಪಟ್ಟಿದ್ದರು.

* ಫೆಬ್ರುವರಿ 20 2007: ಎರ್ನಾಕುಲಂ ಜಿಲ್ಲೆಯ ತಟ್ಟೆಕ್ಕಾಡ್‌ ಬಳಿ ಪೆರಿಯಾರ್‌ ನದಿಯಲ್ಲಿ ದೋಣಿ ಮುಗುಚಿ ಶಾಲಾ ಪ್ರವಾಸ ತೆರಳಿದ್ದ 14 ಮಕ್ಕಳು ಸಾವು. ಆರು ಜನರ ಸಾಮರ್ಥ್ಯದ ದೋಣಿಯಲ್ಲಿ 61 ಪ್ರಯಾಣಿಕರಿದ್ದರು ಎಂಬುದು ನಂತರ ತಿಳಿದುಬಂದಿತ್ತು.

* ಸೆಪ್ಟೆಂಬರ್ 30 2009: ಡಬ್ಬಲ್ ಡೆಕ್ಕರ್‌ ಪ್ರಯಾಣಿಕರ ಬೋಟ್‌ ‘ಜಲಕನ್ಯಕಾ’ ಮುಲ್ಲಪೆರಿಯಾರ್‌ ಜಲಾಶಯದಲ್ಲಿ ಮುಳುಗಿ 45 ಜನರ ಸಾವು. 75 ಜನ ಸಾಮರ್ಥ್ಯದ ದೋಣಿಯಲ್ಲಿ 80 ಪ್ರಯಾಣಿಕರಿದ್ದರು.

ಸ್ವಯಂಪ್ರೇರಿತ ದೂರು ದಾಖಲು

ತಿರುವನಂತಪುರ (ಪಿಟಿಐ): ದೋಣಿ ದುರಂತದ ಕುರಿತು ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಅವಘಡ ಕುರಿತು 10 ದಿನದಲ್ಲಿ ವರದಿ ಸಲ್ಲಿಸಲು ಮಲಪ್ಪುರಂ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದು ಆಯೋಗದ ಸದಸ್ಯ ಕೆ.ಬೈಜುನಾಥ್‌ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT