ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಸೇನೆ ಕುರಿತು ಐಎಸ್‌ಐಗೆ ಮಾಹಿತಿ: ವ್ಯಕ್ತಿ ಬಂಧನ

Published 16 ಜುಲೈ 2023, 15:50 IST
Last Updated 16 ಜುಲೈ 2023, 15:50 IST
ಅಕ್ಷರ ಗಾತ್ರ

ಲಖನೌ (ಪಿಟಿಐ): ಭಾರತದ ಮಿಲಿಟರಿ ಕುರಿತು ಪಾಕಿಸ್ತಾನಕ್ಕೆ ಮಾಹಿತಿ ರವಾನಿಸುತ್ತಿದ್ದ ಆರೋಪದ ಮೇಲೆ ಪಾಕ್‌ ಗುಪ್ತಚರ ಇಲಾಖೆಯ (ಐಎಸ್‌ಐ) ಶಂಕಿತ ಪ್ರತಿನಿಧಿಯನ್ನು ಭಾನುವಾರ ಬಂಧಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಬಂಧಿತ ರಯೀಸ್‌ ಉತ್ತರ ಪ್ರದೇಶದ ಗೊಂಡದ ನಿವಾಸಿ. ರಾಜ್ಯದ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್‌) ಆತನನ್ನು ಬಂಧಿಸಿದೆ. ಎಟಿಎಸ್‌ ಮುಖ್ಯ ಕಚೇರಿಯಲ್ಲಿ ಆತನನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಬೇಹುಗಾರಿಕೆಯಲ್ಲಿ ಭಾಗಿಯಾಗಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ರಯೀಸ್‌ಗೆ ಮುಂಬೈನಲ್ಲಿ ಅರ್ಮಾನ್‌ ಎಂಬಾತನ ಪರಿಚಯವಾಗಿತ್ತು. ದುಬೈನಲ್ಲಿ ಉದ್ಯೋಗ ಕೊಡಿಸುವ ಆಮಿಷ ತೋರಿದ್ದ ಅರ್ಮಾನ್‌, ಭಾರತದ ವಿರುದ್ಧ ಬೇಹುಗಾರಿಕೆ ನಡೆಸುವಂತೆ ರಯೀಸ್‌ನನ್ನು ಪ್ರೇರೇಪಿಸಿದ್ದ. ಬಳಿಕ, ಹುಸೇನ್ ಎಂಬಾತನನ್ನು ಸಂಪರ್ಕಿಸುವಂತೆ 2022ರಲ್ಲಿ ರಯೀಸ್‌ಗೆ ವಾಟ್ಸ್‌ಆ್ಯಪ್ ಕರೆಬಂದಿತ್ತು. ಭಾರತದ ಮಿಲಿಟರಿ ಸ್ಥಾಪನೆಗೆ ಸಂಬಂಧಿಸಿದ ಚಿತ್ರಗಳನ್ನು ಕಳಿಸುವಂತೆ ಆಗ ರಯೀಸ್‌ಗೆ ಹೇಳಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ರಯೀಸ್‌ಗೆ ₹15,000 ನೀಡಲಾಗಿತ್ತು ಮತ್ತು ಬಾಂಗ್ಲಾದೇಶದಲ್ಲಿ ನೋಂದಣಿಯಾಗಿರುವ ಮೊಬೈಲ್‌ ಸಂಖ್ಯೆ ಬಳಸಿ ಆತ ಐಎಸ್‌ಐ ಜೊತೆ ಸಂಪರ್ಕದಲ್ಲಿದ್ದ. ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿ ಆತನ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅರ್ಮಾನ್‌ ಸೇರಿ ಇತರ ಆರೋಪಿಗಳನ್ನು ಬಂಧಿಸುವ ಪ್ರಯತ್ನಗಳು ನಡೆದಿವೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT