ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛತ್ತೀಸಗಢದಲ್ಲಿ ಡಿಸಿಎಂ ನೇಮಕ; ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ಒಗ್ಗಟ್ಟು ಪ್ರದರ್ಶನ

Published 29 ಜೂನ್ 2023, 2:52 IST
Last Updated 29 ಜೂನ್ 2023, 2:52 IST
ಅಕ್ಷರ ಗಾತ್ರ

ನವದೆಹಲಿ: ಸಚಿವ ಟಿ.ಎಸ್‌. ಸಿಂಗ್ ದೇವ್ ಅವರನ್ನು ಛತ್ತೀಸಗಢ ಉಪ ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದಾರೆ.

ಈ ಬಗ್ಗೆ ಕಾಂಗ್ರೆಸ್‌ ಹೇಳಿಕೆ ಬಿಡುಗಡೆ ಮಾಡಿದ್ದು, ಸಿಂಗ್ ದೇವ್ ಅವರನ್ನು ಛತ್ತೀಸಗಢ ಉಪ ಮುಖ್ಯಮಂತ್ರಿಯನ್ನಾಗಿ ನೇಮಿಸಿರುವುದನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನುಮೋದಿಸಿದ್ದಾರೆ ಎಂದು ತಿಳಿಸಿದೆ.

ಪಕ್ಷವು 2018ರಲ್ಲಿ ಅಧಿಕಾರಕ್ಕೇರಿದಾಗಿನಿಂದಲೂ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಮತ್ತು ಸಿಂಗ್‌ ದೇವ್ ನಡುವೆ ಅಧಿಕ್ಕಾರಕ್ಕಾಗಿ ತಿಕ್ಕಾಟ ನಡೆಯುತ್ತಿದೆ.

ಛತ್ತೀಸಗಢ ವಿಧಾನಸಭೆಗೆ ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿದ್ದು, ಕಾರ್ಯತಂತ್ರ ಸಭೆ ಸಲುವಾಗಿ ಈ ಇಬ್ಬರೂ ದೆಹಲಿಗೆ ಆಗಮಿಸಿದ್ದರು. ಸಭೆ ಬಳಿಕ ಉಭಯ ನಾಯಕರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ.

ಬಘೇಲ್‌ ಮತ್ತು ತಮ್ಮ ನಡುವೆ ಅಧಿಕಾರ ಹಂಚಿಕೆಯಾಗಲಿದೆ ಎಂದು ಪಕ್ಷದ ನಾಯಕರು ಭರವಸೆ ನೀಡಿರುವುದಾಗಿ ಸಿಂಗ್‌ ದೇವ್ ಈ ಹಿಂದೆ ಹೇಳಿಕೆ ನೀಡಿದ್ದರು. ಅದನ್ನು ಬಘೇಲ್‌ ತಿರಸ್ಕರಿಸಿದ್ದರು. ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಸರತ್ತು ಆರಂಭಿಸಿದ್ದ ಸಿಂಗ್‌ ದೇವ್, ಆಪ್ತ ಶಾಸಕರೊಂದಿಗೆ ಹೈಕಮಾಂಡ್‌ ಬಳಿ ತೆರಳಿ ಪ್ರಯತ್ನ ನಡೆಸಿದ್ದರು.

ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿರಿಸಿ ಪಕ್ಷದ ಒಗ್ಗಟ್ಟನ್ನು ಸಾರಲು ಸಿಂಗ್‌ ದೇವ್ ಅವರನ್ನು ಡಿಸಿಎಂ ಮಾಡಲಾಗಿದೆ ಎಂದು ಹೇಳಲಾಗಿದೆ.

ಸಿಂಗ್‌ ದೇವ್ ಜೊತೆಗಿನ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಬಘೇಲ್‌, 'ನಾವು (ಚುನಾವಣೆಗೆ) ತಯಾರಾಗಿದ್ದೇವೆ. ಉಪಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡ ಮಹಾರಾಜ್‌ ಸಾಹೆಬ್‌ ಅವರಿಗೆ ಅಭಿನಂದನೆ ಮತ್ತು ಶುಭಾಶಯಗಳು' ಎಂದು ಬರೆದುಕೊಂಡಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌, 'ಅವರು (ಸಿಂಗ್‌ ಡಿಯೊ) ಕಾಂಗ್ರೆಸ್‌ನ ನಿಷ್ಠಾವಂತ ನಾಯಕ ಮತ್ತು ಸಮರ್ಥ ಆಡಳಿತಗಾರ. ಉಪ ಮುಖ್ಯಮಂತ್ರಿಯಾಗಿ ಅವರ ಸೇವೆಯನ್ನು ರಾಜ್ಯವು ಮತ್ತಷ್ಟು ಪಡೆಯಲಿದೆ. ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರ ನಾಯಕತ್ವಕ್ಕೆ ಬಹುಮತ ನೀಡುವ ಮೂಲಕ ಛತ್ತೀಸಗಢದ ಜನರು ಮತ್ತೊಮ್ಮೆ ಕಾಂಗ್ರೆಸ್‌ಗೆ ಅಧಿಕಾರ ನೀಡಲಿದ್ದಾರೆ ಎಂಬ ವಿಶ್ವಾಸದಲ್ಲಿದ್ದೇವೆ' ಎಂದು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT