ಮಥುರಾ: ಉತ್ತರ ಪ್ರದೇಶದಲ್ಲಿ ಧಾರ್ಮಿಕ ಮತಾಂತರದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ತೈವಾನ್ ಪ್ರಜೆ ಸೇರಿದಂತೆ ಹನ್ನೆರಡು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ವಿಚಾರಣೆ ನಡೆಸಲಾಗುತ್ತಿದ್ದು, ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿದ ನಂತರವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಅರವಿಂದ್ ಕುಮಾರ್ ತಿಳಿಸಿದ್ದಾರೆ.
ಇಂದ್ರಪುರಿ ಕಾಲೋನಿಯ ಮನೆಯೊಂದರಲ್ಲಿ ವಿದೇಶಿ ಪ್ರಜೆ ಸೇರಿದಂತೆ ಕೆಲವರು ಧಾರ್ಮಿಕ ಮತಾಂತರಕ್ಕಾಗಿ ಸಭೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ದೂರು ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಮನೆಯೊಂದರಲ್ಲಿ ಕೆಲವು ಧಾರ್ಮಿಕ ಕರಪತ್ರಗಳು ಪತ್ತೆಯಾಗಿವೆ. ಆದರೆ, ಯಾವುದೇ ಆಕ್ಷೇಪಾರ್ಹ ವಸ್ತುಗಳನ್ನು ಸಿಕ್ಕಿಲ್ಲ ಎಂದು ಇನ್‌ಸ್ಪೆಕ್ಟರ್ ಆನಂದ್ ಕುಮಾರ್ ತಿಳಿಸಿದ್ದಾರೆ.
ತೈವಾನ್ ಪ್ರಜೆ, ಮನೆಯ ಮಾಲೀಕರು ಮತ್ತು ಅವರ ಪತ್ನಿ ಸೇರಿದಂತೆ ಹನ್ನೆರಡು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಧಾರ್ಮಿಕ ಮತಾಂತರದ ಬಗ್ಗೆ ಖಚಿತವಾದ ಪುರಾವೆಗಳು ಕಂಡುಬಂದರೆ ಮಾತ್ರ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕುಮಾರ್ ಹೇಳಿದ್ದಾರೆ.
ಬಂಧಿತ ಆರೋಪಿಗಳು ಹಲವು ಆಮಿಷಗಳನ್ನು ಒಡ್ಡುವ ಮೂಲಕ ಸ್ಥಳೀಯರನ್ನು ಬೇರೆ ಧರ್ಮಕ್ಕೆ ಮತಾಂತರ ಮಾಡಲು ಪ್ರಯತ್ನಿಸುತ್ತಿದ್ದರು ಎಂದು ಹಿಂದೂ ಹಕ್ಕುಗಳ ಸಂಘಟನೆಯ ಸದಸ್ಯರು ಆರೋಪಿಸಿದ್ದಾರೆ.
ತೈವಾನ್ ಪ್ರಜೆ ಸೇರಿ ಹಲವರು ಧಾರ್ಮಿಕ ಮತಾಂತರ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ವಿಶ್ವ ಹಿಂದೂ ಪರಿಷತ್‌ನ ಸಂಯೋಜಕ ವಿಜಯ್ ಗುರ್ಜರ್ ಒತ್ತಾಯಿಸಿದ್ದಾರೆ.