ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸೂರಿನಲ್ಲಿ ವಿಮಾನ ನಿಲ್ದಾಣ: ಎಂ.ಕೆ. ಸ್ಟಾಲಿನ್

Published 27 ಜೂನ್ 2024, 16:18 IST
Last Updated 27 ಜೂನ್ 2024, 16:18 IST
ಅಕ್ಷರ ಗಾತ್ರ

ಚೆನ್ನೈ: ‘ತಮಿಳುನಾಡು ಸರ್ಕಾರವು 2 ಸಾವಿರ ಎಕರೆ ಪ್ರದೇಶದಲ್ಲಿ ಹೊಸೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ಉದ್ದೇಶಿಸಿದ್ದು, ವಾರ್ಷಿಕ 3 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರಲಿದೆ. ಹೊಸ ನಿಲ್ದಾಣವು ಕೃಷ್ಣಗಿರಿ, ಧರ್ಮಪುರಿ ಜಿಲ್ಲೆಗಳ ಕೈಗಾರಿಕಾ ಅಗತ್ಯಗಳನ್ನು ಪೂರೈಸಲಿದೆ’ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಅಧಿವೇಶನದಲ್ಲಿ ಗುರುವಾರ ಪ್ರಕಟಿಸಿದರು.

ಸದನದಲ್ಲಿದ್ದ ಎಲ್ಲ ರಾಜಕೀಯ ಪಕ್ಷಗಳು ಈ ನಿರ್ಧಾರವನ್ನು ಸ್ವಾಗತಿಸಿದವು. 

‘ಡಿಎಂಕೆ ಅಧಿಕಾರಕ್ಕೆ ಬಂದ ಬಳಿಕ ತಮಿಳುನಾಡು ಎಲ್ಲ ಕ್ಷೇತ್ರಗಳಲ್ಲಿ ವ್ಯಾಪಕ ಪ್ರಗತಿ ದಾಖಲಿಸುತ್ತಿದ್ದು, 2022ರ ರಫ್ತು ಸನ್ನದ್ಧತೆ ಸೂಚ್ಯಂಕದಲ್ಲಿ ಅತ್ಯುತ್ತಮ ಪ್ರಗತಿ ದಾಖಲಿಸಿದೆ’ ಎಂದರು.

‘ಮೋಟರ್‌ ವಾಹನ, ಎಂಜಿನ್‌ಗಳ ಬಿಡಿಭಾಗಗಳು, ಚರ್ಮದ ಉತ್ಪನ್ನಗಳು ಹಾಗೂ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ರಫ್ತಿನಲ್ಲಿ ಇಡೀ ದೇಶದಲ್ಲಿ ತಮಿಳುನಾಡು ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಕೈಗಾರಿಕಾ ಬೆಳವಣಿಗೆಯಲ್ಲಿ ತಮಿಳುನಾಡು ಅತ್ಯುನ್ನತ ಕಾರ್ಯಕ್ಷಮತೆಯ ರಾಜ್ಯವಾಗಿ ಮಾರ್ಪಟ್ಟಿದೆ’ ಎಂದು ಸ್ಟಾಲಿನ್‌ ಹೇಳಿದರು.

‘ಎಲೆಕ್ಟ್ರಾನಿಕ್ಸ್‌, ಎಲೆಕ್ಟ್ರಿಕ್‌ ವಾಹನಗಳ ತಯಾರಿಕೆ ಕ್ಷೇತ್ರದಲ್ಲಿ ಹೊಸೂರು ಕೆಲವು ವರ್ಷಗಳಿಂದ ಈಚೆಗೆ ದೊಡ್ಡ ಪ್ರಮಾಣದ ಹೂಡಿಕೆಗಳನ್ನು ಆಕರ್ಷಿಸಿದ್ದು, ಹೊಸೂರು ಪಟ್ಟಣದ ಮೂಲಸೌಕರ್ಯ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೊಳಿಸಿದೆ’ ಎಂದು ಸ್ಟಾಲಿನ್ ತಿಳಿಸಿದರು.

‘ಧರ್ಮಪುರಿ, ಕೃಷ್ಣಗಿರಿ ಪ್ರಾಂತ್ಯಗಳ ಸಮಗ್ರ ಸಾಮಾಜಿಕ– ಆರ್ಥಿಕ ಅಭಿವೃದ್ಧಿಗಾಗಿ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಿಸುವುದು ಅಗತ್ಯವೆಂದು ಸರ್ಕಾರವು ಪ್ರತಿಪಾದಿಸುತ್ತದೆ’ ಎಂದರು.

2030ರ ವೇಳೆಗೆ ರಾಜ್ಯವನ್ನು 1 ಟ್ರಿಲಿಯನ್ ಡಾಲರ್‌ (ಸುಮಾರು ₹83 ಲಕ್ಷ ಕೋಟಿ) ಆರ್ಥಿಕತೆಯನ್ನಾಗಿ ಮಾರ್ಪಡಿಸಲು ಎಲ್ಲ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ.
– ಎಂ.ಕೆ.ಸ್ಟಾಲಿನ್‌, ತಮಿಳುನಾಡು ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT