ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗೆ ಮರಳಿದ ಚಂದ್ರಬಾಬುನಾಯ್ಡು: ಕುಟುಂಬಸ್ಥರು, ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ

Published 1 ನವೆಂಬರ್ 2023, 9:07 IST
Last Updated 1 ನವೆಂಬರ್ 2023, 9:07 IST
ಅಕ್ಷರ ಗಾತ್ರ

ಅಮರಾವತಿ: ಆಂಧ್ರಪ್ರದೇಶದ ಕೌಶಲ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ, ಟಿಡಿಪಿ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಅವರು ಇಂದು (ಬುಧವಾರ) ಬೆಳಿಗ್ಗೆ ಉಂದವಳ್ಳಿಯಲ್ಲಿರುವ ತಮ್ಮ ನಿವಾಸಕ್ಕೆ ಮರಳಿದ್ದಾರೆ.

ನಾಯ್ಡು ಅವರನ್ನು ಪತ್ನಿ ಭುವನೇಶ್ವರಿ ಮತ್ತು ಕುಟುಂಬಸ್ಥರು ಆರತಿ ಬೆಳಗಿ ಸ್ವಾಗತಿಸಿದರು. ಇದೇ ವೇಳೆ ಸಾವಿರಾರು ಕಾರ್ಯಕರ್ತರು ನಿವಾಸದ ಬಳಿ ಜಮಾಯಿಸಿದ್ದರು.

ಕೌಶಲ ಅಭಿವೃದ್ಧಿ ನಿಗಮದ ₹300 ಕೋಟಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿ ನಾಯ್ಡು ಅವರನ್ನು ಸೆ.9ರಂದು ಬಂಧಿಸಲಾಗಿತ್ತು. ಬಂಧನಕ್ಕೊಳಗಾಗಿದ್ದ ಅವರಿಗೆ ಹೈಕೋರ್ಟ್‌ ಮಂಗಳವಾರ ನಾಲ್ಕು ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.

ಅರ್ಜಿ ವಿಚಾರಣೆ ವೇಳೆ ನಾಯ್ಡು ಪರ ವಕೀಲರು, ‘ನಾಯ್ಡು ಅವರು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ. ಆರೋಗ್ಯದ ದೃಷ್ಟಿಯಿಂದ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಬೇಕು’ ಎಂದು ಮನವಿ ಮಾಡಿದ್ದರು.

ಬಳಿಕ ನ್ಯಾಯಪೀಠವು, ‘ಅರ್ಜಿದಾರರ ಆರೋಗ್ಯ ಮತ್ತು ಮಾನವೀಯ ದೃಷ್ಟಿಯಿಂದ ತಾತ್ಕಾಲಿಕ ಜಾಮೀನು ಮಂಜೂರು ಮಾಡಲಾಗುತ್ತಿದೆ’ ಎಂದು ತಿಳಿಸಿತ್ತು.

ಇದೇ ವೇಳೆ, ನವೆಂಬರ್‌ 28ರಂದು ಅಥವಾ ಅದಕ್ಕೂ ಮುಂಚೆ ಕೇಂದ್ರ ಕಾರಾಗೃಹದ ವರಿಷ್ಠಾಧಿಕಾರಿ ಎದುರು ಹಾಜರಾಗಬೇಕು. ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಯಿತು ಎಂಬ ಬಗ್ಗೆ ಮುಚ್ಚಿದ ಲಕೋಟೆಯಲ್ಲಿ ವರಿಷ್ಠಾಧಿಕಾರಿಗೆ ಮಾಹಿತಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿತ್ತು.

ಇದೇ ಸಂದರ್ಭದಲ್ಲಿ ಜಾಮೀನು ಕೋರಿರುವ ಅರ್ಜಿ ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಿತ್ತು.

ಕೋರ್ಟ್‌ ಷರತ್ತು: ಚಂದ್ರಬಾಬು ನಾಯ್ಡು ಅವರಿಗೆ ಮಾಧ್ಯಮಗಳ ಎದುರು ಹೇಳಿಕೆ ನೀಡಲು ಹಾಗೂ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸದಿರಲು ಹೈಕೋರ್ಟ್ ಷರತ್ತು ವಿಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT