ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರಾನ್ಸ್‌ನಿಂದ ರಫೇಲ್‌ ಖರೀದಿ: ಅಂತಿಮಗೊಳ್ಳದ ದರ ವಿವರ

Published 18 ಜುಲೈ 2023, 11:22 IST
Last Updated 18 ಜುಲೈ 2023, 11:22 IST
ಅಕ್ಷರ ಗಾತ್ರ

ನವದೆಹಲಿ: ರಫೇಲ್–ಎಂ ಯುದ್ಧವಿಮಾನಗಳು ಹಾಗೂ ಸ್ಕಾರ್ಪೀನ್ ಜಲಾಂತರ್ಗಾಮಿಗಳ ಖರೀದಿಗೆ ಸಂಬಂಧಿಸಿದಂತೆ ದರ ಹಾಗೂ ತಾಂತ್ರಿಕ–ವ್ಯವಹಾರದ ವಿವರಗಳು ಇನ್ನೂ ಅಂತಿಮಗೊಂಡಿಲ್ಲ ಎಂದು ಮೂಲಗಳು ಮಂಗಳವಾರ ಹೇಳಿವೆ.

ನೌಕಾಪಡೆಗಾಗಿ 26 ರಫೇಲ್‌–ಎಂ ಯುದ್ಧವಿಮಾನಗಳು ಹಾಗೂ ಮೂರು ಸ್ಕಾರ್ಪೀನ್‌ ಜಲಾಂತರ್ಗಾಮಿಗಳ ಖರೀದಿಗಾಗಿ ಫ್ರಾನ್ಸ್‌ನೊಂದಿಗೆ ಮಾತುಕತೆ ನಡೆಯುತ್ತಿದೆ.

ಸ್ಕಾರ್ಪೀನ್ ಜಲಾಂರ್ಗಾಮಿಗಳ ಖರೀದಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ಒಡೆತನದ ಮಜಗಾಂವ ಡಾಕ್‌ ಲಿಮಿಟೆಡ್ (ಎಂಡಿಎಲ್) ಹಾಗೂ ಫ್ರಾನ್ಸ್‌ನ ನಾವಲ್ ಗ್ರೂಪ್‌ ನಡುವೆ ಜುಲೈ 6ರಂದು ಒಪ್ಪಂದವಾಗಿದೆ. ಆದರೆ, ಈ ರಕ್ಷಣಾ ವ್ಯವಸ್ಥೆಗಳ ದರ ಹಾಗೂ ಅವುಗಳ ತಾಂತ್ರಿಕ ವಿವರಗಳ ಕುರಿತ ಮಾತುಕತೆ ಅಂತಿಮಗೊಳ್ಳಬೇಕಿದೆ ಎಂದು ಇವೇ ಮೂಲಗಳು ಹೇಳಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಫ್ರಾನ್ಸ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್‌ ಅವರೊಂದಿಗೆ ದ್ವಿಪಕ್ಷೀಯ ಸಂಬಂಧಗಳ ವೃದ್ಧಿ ಕುರಿತು ಮಾತಕತೆ ನಡೆಸಿದ್ದರು. ರಕ್ಷಣಾ ವ್ಯವಸ್ಥೆಗಳ ಜಂಟಿ ಅಭಿವೃದ್ಧಿ ಹಾಗೂ ಜಂಟಿ ಉತ್ಪಾದನೆಗೆ ಉಭಯ ನಾಯಕರ ನಡುವಿನ ಚರ್ಚೆ ವೇಳೆ ಹೆಚ್ಚು ಒತ್ತು ನೀಡಲಾಗಿತ್ತು ಎಂದು ತಿಳಿಸಿವೆ.

‘ಫ್ರಾನ್ಸ್‌ನ ಸ್ಯಾಫ್ರನ್ ಕಂಪನಿಯೇ ಯುದ್ಧವಿಮಾನದ ಎಂಜಿನ್‌ಅನ್ನು ಭಾರತದಲ್ಲಿಯೇ ಉತ್ಪಾದಿಸಬೇಕು ಎಂಬ ಬಗ್ಗೆಯೂ ಅಂತಿಮ ನಿರ್ಧಾರ ಇಲ್ಲ. ಭಾರತದ ಭದ್ರತಾಪಡೆಗಳ ಅಗತ್ಯಗಳ ಆಧಾರದ ಮೇಲೆ ಈ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ’ ಎಂದೂ ಮೂಲಗಳು ಹೇಳಿವೆ.

ವಾಯುಪಡೆಯ ಯುದ್ಧವಿಮಾನಗಳ ಎಂಜಿನ್‌ಗಳ (ಎಫ್‌–414) ಉತ್ಪಾದನೆಗೆ ಸಂಬಂಧಿಸಿ ಅಮೆರಿಕದ ಜಿಇ ಏರೋಸ್ಪೇಸ್‌ ಹಾಗೂ ಎಚ್‌ಎಎಲ್‌ ನಡುವೆ ಒಪ್ಪಂದವಾಗಿದೆ. ಪ್ರಧಾನಿ ಮೋದಿ ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ್ದ ವೇಳೆ ಈ ಕುರಿತು ಘೋಷಣೆ ಮಾಡಲಾಗಿತ್ತು.

‘ಈ ಎರಡು ಒಪ್ಪಂದಗಳ ನಡುವೆ ಸಾಕಷ್ಟು ವ್ಯತ್ಯಾಸ ಇದೆ. ಎಫ್‌–414 ಎಂಜಿನ್‌ಗಳಿಗೆ ಸಂಬಂಧಿಸಿದ ಒಪ್ಪಂದಕ್ಕೆ ಹೋಲಿಸಿದರೆ ಫ್ರಾನ್ಸ್‌ ಕಂಪನಿಯ ನೆರವಿನೊಂದಿಗೆ ಎಂಜಿನ್‌ಗಳನ್ನು ಅಭಿವೃದ್ದಿಪಡಿಸುವ ಯೋಜನೆಯ ವ್ಯಾಪ್ತಿ  ದೊಡ್ಡದು’ ಎಂದು ಮತ್ತೊಂದು ಮೂಲ ಹೇಳಿದೆ.

ಜಂಟಿ ಉತ್ಪಾದನೆ

ಲೆನೈನ್ ‘ಹೊಸ ತಲೆಮಾರಿನ ಮಿಲಿಟರಿ ಸಲಕರಣೆಗಳನ್ನು ಜಂಟಿಯಾಗಿ ಉತ್ಪಾದನೆ ಮಾಡಲು ಭಾರತ ಹಾಗೂ ಫ್ರಾನ್ಸ್‌ ಸಮ್ಮತಿಸಿವೆ’ ಎಂದು ಫ್ರಾನ್ಸ್‌ ರಾಯಭಾರಿ ಇಮ್ಯಾನುಯೆಲ್ ಲೆನೈನ್ ಮಂಗಳವಾರ ಹೇಳಿದ್ದಾರೆ.  ‘ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಪ್ಯಾರಿಸ್‌ಗೆ ಭೇಟಿ ನೀಡಿದ್ದ ಸಮಯದಲ್ಲಿ ಈ ಬಗ್ಗೆ ಮಾತುಕತೆ ನಡೆಸಲಾಗಿದೆ. ಮೋದಿ ಅವರ ಭೇಟಿಯು ಉಭಯ ದೇಶಗಳ ನಡುವಿನ ವಿಶ್ವಾಸ ಮತ್ತು  ದೃಢವಾದ ಪಾಲುದಾರಿಕೆಯನ್ನು ತೋರಿಸುತ್ತದೆ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT