ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ಅಂತ್ಯ ಸನ್ನಿಹಿತ: ಪ್ರಧಾನಿ ಮೋದಿ

Published : 14 ಸೆಪ್ಟೆಂಬರ್ 2024, 13:24 IST
Last Updated : 14 ಸೆಪ್ಟೆಂಬರ್ 2024, 13:24 IST
ಫಾಲೋ ಮಾಡಿ
Comments

ಜಮ್ಮು: ‘ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯ ಅಂತ್ಯ ಸನ್ನಿಹಿತವಾಗುತ್ತಿದ್ದು,  ಅತ್ಯಂತ ಸುಂದರವಾದ ಪ್ರದೇಶವನ್ನು ನಾಶಪಡಿಸಿದ ಕುಟುಂಬ ರಾಜಕಾರಣವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರವು ಹೊಸ ನಾಯಕತ್ವವನ್ನು ಪರಿಚಯಿಸುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಜಮ್ಮು ಪ್ರಾಂತ್ಯದ ಡೋಡಾ ಜಿಲ್ಲೆಯಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ನಾವು ಹಾಗೂ ನೀವು ಸೇರಿಕೊಂಡು, ಜಮ್ಮು ಮತ್ತು ಕಾಶ್ಮೀರವನ್ನು ದೇಶದ ಸಂಪದ್ಭರಿತ ರಾಜ್ಯವನ್ನಾಗಿ ನಿರ್ಮಿಸೋಣ’ ಎಂದು ಕರೆ ನೀಡಿದರು.

ಇದೇ ಸೆ. 18ರಂದು ರಾಜ್ಯ ವಿಧಾನಸಭೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಮೊದಲ ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಂಡರು.

‘ಸ್ವಾತಂತ್ರ್ಯಾ ನಂತರ, ಜಮ್ಮು ಮತ್ತು ಕಾಶ್ಮೀರವು ವಿದೇಶಿ ಶಕ್ತಿಗಳು ಹಾಗೂ ಕುಟುಂಬ ರಾಜಕಾರಣಕ್ಕೆ ಗುರಿಯಾಗಿದ್ದರಿಂದ ಸುಂದರ ಪ್ರದೇಶದ ಒಳಗೆ ನಿರ್ವಾತ  ಸೃಷ್ಟಿಸಿತು. ಕುಟುಂಬ ರಾಜಕಾರಣ ನಡೆಸಿದವರು, ಮಕ್ಕಳನ್ನು ಉತ್ತರಾಧಿಕಾರಿಯನ್ನಾಗಿ ಮಾಡಿ, ಹೊಸ ನಾಯಕತ್ವದ ಬೆಳವಣಿಗೆಗೆ ಅವಕಾಶ ನೀಡಲಿಲ್ಲ’ ಎಂದು ಅಬ್ದುಲ್ಲಾ ಹಾಗೂ ಮುಫ್ತಿ ಕುಟುಂಬದ ವಿರುದ್ಧ ಕಿಡಿಕಾರಿದರು. ‘2014ರಲ್ಲಿ ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ನಮ್ಮ ಸರ್ಕಾರವು ಯುವ ನಾಯಕತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿದೆ’ ಎಂದರು.

ಕಣಿವೆಗೆ ರೈಲು ಸಂಪರ್ಕ ಶೀಘ್ರ: ‘ಜಮ್ಮು ಮತ್ತು ಕಾಶ್ಮೀರ ಸಂ‍ಪರ್ಕ ಹೊಂದದ ಎಲ್ಲ ಪ್ರದೇಶಗಳಿಗೂ ಶೀಘ್ರದಲ್ಲಿ ರೈಲು ಸಂಪರ್ಕ ದೊರೆಯಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದರು.

‘ಕಣಿವೆಯ ರಾಮ್‌ಬನ್‌, ಡೋಡಾ, ಕಿಶ್ತ್‌ವಾಢ್‌ ಹಾಗೂ ಕಾಶ್ಮೀರಕ್ಕೆ ನವದೆಹಲಿಯಿಂದಲೇ ನೇರ ರೈಲು ಸಂಪರ್ಕ ಲಭ್ಯವಾಗಲಿದೆ. ನಿಮ್ಮ ಕನಸುಗಳನ್ನು ನಾನು ಈಡೇರಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಶ್ರೀನಗರ ದಿಂದ ರಾಮಬನ್‌ ನಡುವೆ ಶೀಘ್ರದಲ್ಲಿಯೇ ರೈಲು ಸಂಚಾರ ಆರಂಭಗೊಳ್ಳಲಿದೆ. ರೈಲು ಮಾರ್ಗ, ನಿಲ್ದಾಣ ಪೂರ್ಣಗೊಂಡಿದ್ದು, ಪ್ರಾಯೋಗಿಕ ಸಂಚಾರವೂ ಆರಂಭಗೊಂಡಿದೆ’ ಎಂದರು.

ರಾಹುಲ್‌ ವಿರುದ್ಧ ಕಿಡಿ: ರ‍್ಯಾಲಿಯಲ್ಲಿ ಕಾಂಗ್ರೆಸ್‌ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖಂಡ ರಾಹುಲ್‌ ಗಾಂಧಿ ವಿರುದ್ಧವೂ ಕಿಡಿಕಾರಿದರು.

‘ಅಮೆರಿಕದಲ್ಲಿ ಕಾಂಗ್ರೆಸ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತದ ಪತ್ರಕರ್ತನ ಮೇಲೆ ರಾಹುಲ್‌ ಗಾಂಧಿ ತಂಡದಿಂದ ಹಲ್ಲೆ ನಡೆಸಲಾಗಿದೆ. ಅಲ್ಲಿ ‘ದ್ವೇಷ ಹಂಚುವವರು’, ಇಲ್ಲಿ ‘ಪ್ರೀತಿಯ ಅಂಗಡಿ’ ತೆರೆಯುವುದಾಗಿ ಮಾತನಾಡುತ್ತಿದ್ದಾರೆ’ ಎಂದು ರಾಹುಲ್‌ ನಡೆಯನ್ನು ವ್ಯಂಗ್ಯವಾಡಿದರು.

‘ಹರಿಯಾಣದಲ್ಲಿ ಬಿಜೆಪಿಗೆ ಹ್ಯಾಟ್ರಿಕ್‌’

ಕುರುಕ್ಷೇತ್ರ: ಹರಿಯಾಣದಲ್ಲಿ ಅಕ್ಟೋಬರ್‌ 5ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸತತ ಮೂರನೇ ಬಾರಿಯೂ ಗೆಲ್ಲುವ ಮೂಲಕ ಹ್ಯಾಟ್ರಿಕ್‌ ಸಾಧನೆ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತನ್ನ ಮೊದಲ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ ರಾಜ್ಯದ ಬಿಜೆಪಿ ಸರ್ಕಾರದ ಕೆಲಸವನ್ನು ಶ್ಲಾಘಿಸಿದರು. ‘ಕೇಂದ್ರದ ಎನ್‌ಡಿಎ ಸರ್ಕಾರ ಇನ್ನೂ 100 ದಿನ ಪೂರೈಸಿಲ್ಲ. ಅಷ್ಟರಲ್ಲಿಯೇ 15 ಲಕ್ಷ ಕೋಟಿ ರೂಪಾಯಿ ವೆಚ್ಚದ ಕೆಲಸಗಳನ್ನು ಆರಂಭಿಸಿದೆ’ ಎಂದು ಅವರು ತಿಳಿಸಿದರು.

ಹರಿಯಾಣದಲ್ಲಿ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ, ‘ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿಗೆ ಹಣ ಕೇವಲ ಒಂದು ಜಿಲ್ಲೆಗೆ ಸೀಮಿತವಾಗಿತ್ತು. ಆದರೆ ಬಿಜೆಪಿ ಸಮಾನ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ’ ಎಂದರು.

‘ದೇಶದಲ್ಲಿ ಸುಳ್ಳು ಮತ್ತು ಅರಾಜಕತೆ ಹರಡಿ ಕಾಂಗ್ರೆಸ್‌ ರಾಜಕಾರಣ ಮಾಡುತ್ತದೆ. ಇತ್ತೀಚೆಗೆ ಕಾಂಗ್ರೆಸ್‌ ನಗರ ನಕ್ಸಲ್‌ನ ಹೊಸ ರೂಪವನ್ನೂ ತಾಳಿದ್ದು, ಯಾವುದೇ ಲಜ್ಜೆಯಿಲ್ಲದೆ ಸುಳ್ಳುಗಳನ್ನು ಹೇಳುತ್ತಿದೆ’ ಎಂದು ಕಿಡಿಕಾರಿದರು. ‘ಕಾಂಗ್ರೆಸ್‌ ಅವಧಿಯಲ್ಲಿ ಯಾವುದೇ ರೈತರ ಖಾತೆಗಳಿಗೆ ಹಣ ಜಮೆಯಾಗಿತ್ತಾ’ ಎಂದು ಅವರು ಇದೇ ವೇಳಿ ಕೇಳಿದರು.

ಕಾಂಗ್ರೆಸ್‌ ಆಡಳಿತವಿರುವ ಹಿಮಾಚಲ ಪ್ರದೇಶದಲ್ಲಿ ಯಾರೊಬ್ಬರೂ ಸಂತಸದಿಂದಿಲ್ಲ. ಅಲ್ಲಿನ ಸರ್ಕಾರವು ಆರ್ಥಿಕ ನಿರ್ವಹಣೆ ಮತ್ತು ಹಣದುಬ್ಬರ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಮೋದಿ ದೂರಿದರು.

ಕರ್ನಾಟಕ ಉದಾಹರಿಸಿ ಟೀಕೆ
ರೈತರ ವಿಷಯಗಳಿಗೆ ಸಂಬಂಧಿಸಿದಂತೆ ಭಾರಿ ಧ್ವನಿಯೆತ್ತಿ, ಕಣ್ಣೀರು ಹಾಕಿದ ಕಾಂಗ್ರೆಸ್‌, ತನ್ನ ಆಡಳಿತವಿರುವ ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಎಷ್ಟು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಿದೆ ಎಂದು ಮೋದಿ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT