ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಜ್ರಿವಾಲ್‌ ನಿವಾಸ ನವೀಕರಣದಲ್ಲಿ ಅವ್ಯವಹಾರ ಆರೋಪ: ಸಿಎಜಿಯಿಂದ ವಿಶೇಷ ಪರಿಶೋಧನೆ

ಮುಖ್ಯಮಂತ್ರಿ ಕೇಜ್ರಿವಾಲ್‌ ಅಧಿಕೃತ ನಿವಾಸ ನವೀಕರಣದಲ್ಲಿ ಅವ್ಯವಹಾರ ಆರೋಪ
Published : 27 ಜೂನ್ 2023, 15:52 IST
Last Updated : 27 ಜೂನ್ 2023, 15:52 IST
ಫಾಲೋ ಮಾಡಿ
Comments

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಅಧಿಕೃತ ನಿವಾಸದ ನವೀಕರಣದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಮತ್ತು ನಿಯಮಗಳ ಉಲ್ಲಂಘನೆ ಕುರಿತು ಮಹಾಲೇಖಪಾಲರು (ಸಿಎಜಿ) ವಿಶೇಷ ಪರಿಶೋಧನೆ ನಡೆಸಲಿದ್ದಾರೆ.

ಈ ನಡೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಆಡಳಿತಾರೂಢ ಆಮ್‌ ಆದ್ಮಿ ಪಕ್ಷ (ಎಎಪಿ), ‘ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಹತಾಶೆಯನ್ನು ತೋರಿಸುತ್ತದೆ’ ಎಂದಿದೆ.

‘ಕೇಜ್ರಿವಾಲ್‌ ಅವರ ಅಧಿಕೃತ ನಿವಾಸದ ನವೀಕರಣದಲ್ಲಿ ಭಾರಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂಬುದಾಗಿ ಲೆಫ್ಟಿನೆಂಟ್‌ ಗವರ್ನರ್ ವಿ.ಕೆ.ಸಕ್ಸೇನಾ ಅವರು ಗೃಹ ಸಚಿವಾಲಯಕ್ಕೆ ಮೇ 24ರಂದು ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ವಿಶೇಷ ಪರಿಶೋಧನೆಗೆ ಗೃಹ ಸಚಿವಾಲಯ ಶಿಫಾರಸು ಮಾಡಿದೆ’ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಕೇಜ್ರಿವಾಲ್‌ ನಿವಾಸದ ನವೀಕರಣ ಕಾರ್ಯದಲ್ಲಿ ಆಗಿರುವ ಅವ್ಯವಹಾರ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳು, ದೆಹಲಿ ಮುಖ್ಯ ಕಾರ್ಯದರ್ಶಿ ಏಪ್ರಿಲ್‌ 27 ಹಾಗೂ ಮೇ 12ರಂದು ಸಲ್ಲಿಸಿದ್ದ ವರದಿಗಳಲ್ಲಿನ ಅಂಶಗಳನ್ನು ಸಕ್ಸೆನಾ ಅವರು ಗೃಹ ಸಚಿವಾಲಯಕ್ಕೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಲೋಕೋಪಯೋಗಿ ಇಲಾಖೆ ಹಾಗೂ ದೆಹಲಿ ಸರ್ಕಾರ ನಿಯಮಗಳು, ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ ಬಗ್ಗೆ ಮುಖ್ಯ ಕಾರ್ಯದರ್ಶಿಗಳು ತಮ್ಮ ವರದಿಯಲ್ಲಿ ವಿವರಿಸಿದ್ದಾರೆ’ ಎಂದು ರಾಜಭವನ ಅಧಿಕಾರಿಗಳು ಹೇಳಿದ್ದಾರೆ.

ದೆಹಲಿ ಮುಖ್ಯಕಾರ್ಯದರ್ಶಿ ವರದಿಯಲ್ಲಿರುವ ಪ್ರಮುಖ ಅಂಶಗಳು

* ನವೀಕರಣದ ಹೆಸರಿನಲ್ಲಿ ಸುಸಜ್ಜಿತ ಹೊಸ ಕಟ್ಟಡವನ್ನು ನಿರ್ಮಿಸಲಾಗಿದೆ/ಮರು ನಿರ್ಮಾಣ ಮಾಡಲಾಗಿದೆ. ಆರಂಭಿಕ ಅಂದಾಜು ವೆಚ್ಚ ₹ 15–20 ಕೋಟಿ ಇತ್ತು. ಕಾಲಕಾಲಕ್ಕೆ ಇದು ಹೆಚ್ಚಳವಾಗಿ, ₹ 52.17 ಕೋಟಿಗೆ ತಲುಪಿತು

* ₹ 10 ಕೋಟಿ ಹಾಗೂ ಅದಕ್ಕಿಂತ ಹೆಚ್ಚು ಮೊತ್ತದ ಕಾಮಗಾರಿಗೆ ಪಿಡಬ್ಲ್ಯುಡಿಯ ಪ್ರಧಾನ ಕಾರ್ಯದರ್ಶಿಯ ಅನುಮೋದನೆ ಅಗತ್ಯ. ಇದನ್ನು ತಪ್ಪಿಸಲು ಪ್ರತಿಬಾರಿಯೂ ಕಾಮಗಾರಿಗಳ ವೆಚ್ಚವನ್ನು ₹ 10 ಕೋಟಿಗಿಂತ ಕಡಿಮೆ ತೋರಿಸಿ, ಅನುಮೋದನೆ ಪಡೆಯಲಾಗಿದೆ.

* ಕಟ್ಟಡ ನಕಾಶೆಗಳಿಗೆ ಮಂಜೂರಾತಿ ಪಡೆದಿಲ್ಲ. ಆಸ್ತಿಯ ಮಾಲೀಕತ್ವದ ಬಗ್ಗೆ ಪಿಡಬ್ಲ್ಯುಡಿಯು ಖಚಿತಪಡಿಸಿಕೊಂಡಿಲ್ಲ

* 10 ಅಥವಾ ಅದಕ್ಕಿಂತ ಹೆಚ್ಚು ಮರಗಳನ್ನು ಕಡಿಯಲು/ಸ್ಥಳಾಂತರಗೊಳಿಸಲು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಕಡ್ಡಾಯ. ಮರಗಳನ್ನು ಕಡಿಯುವುದಕ್ಕೆ ಐದು ಬಾರಿ ಅನುಮೋದನೆ ಪಡೆಯುವ ಮೂಲಕ ನಿಯಮಗಳನ್ನು ಗಾಳಿಗೆ ತೂರಲಾಗಿದೆ.

ದೆಹಲಿ ಹಾಗೂ ನಂತರ ನಡೆದ ವಿಧಾನಸಭಾ ಚುನಾವಣೆಗಳಲ್ಲಿನ ಸೋಲಿನಿಂದ ಬಿಜೆಪಿ ಕಂಗೆಟ್ಟಿದೆ. ಕೇಜ್ರಿವಾಲ್‌ ನೇತೃತ್ವದ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದೆ
– ಎಎಪಿ
ದೆಹಲಿ ಆಡಳಿತದಲ್ಲಿ ಕೇಂದ್ರದ ಹಸ್ತಕ್ಷೇಪ:
ಎಎಪಿ ‘ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಅಧಿಕೃತ ನಿವಾಸ ನವೀಕರಣ ಕುರಿತು ಸಿಎಜಿಯಿಂದ ವಿಶೇಷ ಪರಿಶೋಧನೆಗೆ ಶಿಫಾರಸು ಮಾಡಿರುವುದು ಬಿಜೆಪಿಯ ಹತಾಶೆ ಹಾಗೂ ಸರ್ವಾಧಿಕಾರ ಪ್ರವೃತ್ತಿಯನ್ನು ತೋರಿಸುತ್ತದೆ’ ಎಂದು ಎಎಪಿ ಟೀಕಿಸಿದೆ. ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವ ಎಎಪಿ ‘ಕಳೆದ ವರ್ಷವೇ ಸಿಎಜಿ ಲೆಕ್ಕಪರಿಶೋಧನೆ ನಡೆಸಿದ್ದು ಅವ್ಯವಹಾರ ಕುರಿತು ಯಾವುದೇ ಸಾಕ್ಷ್ಯಗಳು ಸಿಕ್ಕಿರಲಿಲ್ಲ’ ಎಂದಿದೆ. ‘ಈಗ ಮತ್ತೊಮ್ಮೆ ಲೆಕ್ಕಪರಿಶೋಧನೆ ನಡೆಸುವುದು ಚುನಾಯಿತ ಸರ್ಕಾರದ ವ್ಯವಹಾರಗಳಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡಿದಂತೆ. ಸಾಂವಿಧಾನಿಕ ತತ್ವಗಳ ಉಲ್ಲಂಘನೆಯೂ ಆಗುತ್ತದೆ’ ಎಂದು ಹೇಳಿದೆ.
ಸಮಗ್ರ ತನಿಖೆ ಅಗತ್ಯ:
ಕಾಂಗ್ರೆಸ್‌ ನಾಯಕ ಮಾಕೆನ್ ನವದೆಹಲಿ (ಪಿಟಿಐ): ‘ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅಧಿಕೃತ ನಿವಾಸದ ನವೀಕರಣಕ್ಕೆ ₹ 171 ಕೋಟಿ ಖರ್ಚು ಮಾಡಲಾಗಿದೆ. ಈ ಬಗ್ಗೆ ಸಮಗ್ರವಾದ ಕ್ರಿಮಿನಲ್ ತನಿಖೆ ನಡೆಸಬೇಕು’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಅಜಯ್ ಮಾಕೆನ್ ಮಂಗಳವಾರ ಆಗ್ರಹಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಅವರು ‘ಜನರ ತೆರಿಗೆ ಹಣವನ್ನು ದುರ್ಬಳಕೆ ಮಾಡಿರುವ ಕುರಿತು ಸಿಎಜಿಯಿಂದ ವಿಶೇಷ ಪರಿಶೋಧನೆ ನಡೆಸುತ್ತಿರುವುದು ಸ್ವಾಗತಾರ್ಹ’ ಎಂದಿದ್ದಾರೆ. ‘ಮಾರ್ಬಲ್‌ಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಪರದೆಗಳು ಅಡುಗೆ ಮನೆ ಉಪಕರಣಗಳನ್ನು ಖರೀದಿಸಲಾಗಿದೆ. ಬ್ರಿಟಿಷ್‌ ಕಾಲದ ಪಾರಂಪರಿಕ ಕಟ್ಟಡವನ್ನು ಕೆಡವಿ ಮರಗಳನ್ನು ನಾಶ ಮಾಡಿ ಹೊಸ ನಿವಾಸ ನಿರ್ಮಿಸಲಾಗಿದ್ದು ಆ ಮೂಲಕ ಜನರ ಹಣವನ್ನು ದುರ್ಬಳಕೆ ಮಾಡಲಾಗಿದೆ’ ಎಂದು ಅವರು ವಾಗ್ದಾಳಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT