ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಕಾಲಕ್ಕೆ ಚುನಾವಣೆ: ರಾಮನಾಥ ಕೋವಿಂದ ನೇತೃತ್ವದ ಸಮಿತಿಯ ಮೊದಲ ಸಭೆ

Published 23 ಸೆಪ್ಟೆಂಬರ್ 2023, 15:57 IST
Last Updated 23 ಸೆಪ್ಟೆಂಬರ್ 2023, 15:57 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆ ಹಾಗೂ ವಿಧಾನಸಭೆಗಳ ಚುನಾವಣೆಯನ್ನು ಏಕಕಾಲಕ್ಕೆ ನಡೆಸುವ ಕುರಿತಂತೆ ಅಭಿಪ್ರಾಯಗಳನ್ನು ಆಲಿಸಲು ವಿವಿಧ ಪಕ್ಷಗಳ ನಾಯಕರನ್ನು‌ ಆಹ್ವಾನಿಸಲು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ನೇತೃತ್ವದ ಸಮಿತಿ ಶನಿವಾರ ನಿರ್ಧರಿಸಿದೆ.

ಕೋವಿಂದ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯ ಮೊದಲ ಸಭೆಯಲ್ಲಿ ಈ ಕುರಿತು ಚರ್ಚಿಸಿ, ನಿರ್ಣಯ ಕೈಗೊಳ್ಳ‌ಲಾಯಿತು ಎಂದು ಸಮಿತಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಎಲ್ಲ ರಾಷ್ಟ್ರೀಯ ಪಕ್ಷಗಳು, ರಾಜ್ಯಗಳಲ್ಲಿನ ಆಡಳಿತಾರೂಢ ಪಕ್ಷಗಳು‌, ಸಂಸತ್‌ನಲ್ಲಿ ಪ್ರಾತಿನಿಧ್ಯ ಹೊಂದಿರುವ ಹಾಗೂ ರಾಜ್ಯಗಳಲ್ಲಿ ಮಾನ್ಯತೆ ಹೊಂದಿರುವ ಪಕ್ಷಗಳ ನಾಯಕರನ್ನು ಆಹ್ವಾನಿಸಿ, ಏಕಕಾಲಕ್ಕೆ ಚುನಾವಣೆಗಳನ್ನು ನಡೆಸುವ ಕುರಿತಂತೆ ಅವರಿಂದ ಸಲಹೆ/ಅಭಿಪ್ರಾಯಗಳನ್ನು ಪಡೆಯಲು ಸಭೆ ತೀರ್ಮಾನಿಸಿದೆ ಎಂದು ತಿಳಿಸಲಾಗಿದೆ. 

ಕಾನೂನು ಆಯೋಗದ ಪ್ರತಿನಿಧಿಗಳನ್ನು ಕೂಡ ಆಹ್ವಾನಿಸಿ, ಅವರ ಸಲಹೆಗಳನ್ನು ಪಡೆಯುವುದಕ್ಕೆ ಕೂಡ ಸಮಿತಿ ನಿರ್ಧರಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ಗೃಹ ಸಚಿವ ಅಮಿತ್‌ ಶಾ, ಕಾನೂನು ಸಚಿವ ಅರ್ಜುನ್‌ರಾಮ್‌ ಮೆಘವಾಲ್, ರಾಜ್ಯಸಭೆಯ ವಿರೋಧ ಪಕ್ಷದ ಮಾಜಿ ನಾಯಕ ಗುಲಾಂ ನಬಿ ಆಜಾದ್‌, ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎನ್‌.ಕೆ.ಸಿಂಗ್‌, ಲೋಕಸಭೆಯ ಮಾಜಿ ಮಹಾ ಪ್ರಧಾನ ಕಾರ್ಯದರ್ಶಿ ಸುಭಾಷ್‌ ಕಶ್ಯಪ್, ಜಾಗೃತ ದಳದ ಮಾಜಿ ಮುಖ್ಯ ಆಯುಕ್ತ ಸಂಜಯ್‌ ಕೊ‌ಠಾರಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಮಿತಿ ಸದಸ್ಯರಾದ ಹಿರಿಯ ವಕೀಲ ಹರೀಶ್‌ ಸಾಳ್ವೆ ಅವರು ವರ್ಚುವಲ್‌ ಆಗಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ಲೋಕಸಭೆಯಲ್ಲಿ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್‌ನ ನಾಯಕ ಅಧೀರ್ ರಂಜನ್‌ ಚೌಧರಿ ಸಭೆಗೆ ಗೈರಾಗಿದ್ದರು.

‘ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಮಿತಿಯಲ್ಲಿ ಸ್ಥಾನ ನೀಡಿಲ್ಲ. ಹೀಗಾಗಿ, ನಾನು ಸಮಿತಿಯ ಭಾಗವಾಗುವುದಿಲ್ಲ‘ ಎಂದು ಚೌಧರಿ ಅವರು ಈ ಹಿಂದೆಯೇ ಸಚಿವ ಶಾ ಅವರಿಗೆ ಪತ್ರ ಬರೆದಿದ್ದರು.

ಸಮಿತಿ ರಚನೆ ಕುರಿತು ಆಗಸ್ಟ್‌ನಲ್ಲಿ ಘೋಷಿಸಿದ್ದ ಕೇಂದ್ರ ಸರ್ಕಾರ, ಸೆಪ್ಟೆಂಬರ್‌ 2ರಂದು ಸಮಿತಿ ರಚಿಸಿ ಅಧಿಸೂಚನೆ ಹೊರಡಿಸಿತ್ತು.

ವರದಿ ಸಲ್ಲಿಸಲು ಸಮಿತಿಗೆ ಯಾವುದೇ ಗಡುವನ್ನು ನೀಡಲಾಗಿಲ್ಲ. ಆದರೆ, ಆದಷ್ಟು‌ ಶೀಘ್ರವೇ ಶಿಫಾರಸುಗಳನ್ನು ಒಳಗೊಂಡ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT