ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸರಪಂಚನಿಂದ ಸಿಎಂವರೆಗೆ: ರಾಜಸ್ಥಾನ ಸಿಎಂ ಭಜನ್ ಲಾಲ್ ನಡೆದುಬಂದ ಹಾದಿ

Published 15 ಡಿಸೆಂಬರ್ 2023, 11:10 IST
Last Updated 15 ಡಿಸೆಂಬರ್ 2023, 11:10 IST
ಅಕ್ಷರ ಗಾತ್ರ

ಜೈ‍ಪುರ: ಪಂಚರಾಜ್ಯಗಳ ವಿಧಾನಸಭೆ ಚುನಾವಣೆಗಳ ಪೈಕಿ ಬಿಜೆಪಿ 3 ರಾಜ್ಯಗಳಲ್ಲಿ ಜಯ ದಾಖಲಿಸಿತ್ತು. ಈ ಮೂರೂ ರಾಜ್ಯಗಳಲ್ಲಿ ಹೊಸಬರಿಗೆ ಸಿಎಂ ಪಟ್ಟ ನೀಡುವ ಮೂಲಕ ಬಿಜೆಪಿ ಹೊಸ ಪ್ರಯೋಗ ಮಾಡಿದೆ. ಈ ಮೂರರಲ್ಲಿ ಹೆಚ್ಚು ಗಮನ ಸೆಳೆದಿರುವುದು ರಾಜಸ್ಥಾನ. ಏಕೆಂದರೆ, ಇಲ್ಲಿ ಅಚ್ಚರಿಯ ತೀರ್ಮಾನ ತೆಗೆದುಕೊಂಡಿರುವ ಬಿಜೆಪಿ ವರಿಷ್ಠರು ಮೊದಲ ಬಾರಿಗೆ ಶಾಸಕರಾಗಿರುವ ಭಜನ್‌ ಲಾಲ್‌ ಶರ್ಮಾ ಅವರನ್ನು ಮುಖ್ಯಮಂತ್ರಿಗಾದಿಗೆ ಏರಿಸಿದ್ದಾರೆ. ಇಂದು ಅವರು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ವರಿಷ್ಠರ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಮೊದಲ ಬಾರಿಗೆ ಶಾಸಕನಾದರೂ ಮುಖ್ಯಮಂತ್ರಿ ಪಟ್ಟ ಗಿಟ್ಟಿಸಿದ ಭಜನ್ ಲಾಲ್ ಕುರಿತು ನೋಡುವುದಾದರೆ, ಬ್ರಾಹ್ಮಣ ಸಮುದಾಯಕ್ಕೆ ಸೇರಿದ 56 ವರ್ಷದ ಭಜನ್‌ ಲಾಲ್‌, ಜೈಪುರದ ಸಂಗನೇರ್ ಕ್ಷೇತ್ರದ ಶಾಸಕರಾಗಿದ್ದಾರೆ. ರಾಜಸ್ಥಾನ ಬಿಜೆಪಿಯ ಪ್ರಧಾನ ಕಾರ್ಯದರ್ಶಿಗಳಲ್ಲಿ ಒಬ್ಬರಾಗಿದ್ದಾರೆ.

ಕಟ್ಟಾ ಆರೆಸ್ಸೆಸ್ ಪ್ರತಿಪಾದಕರಾಗಿರುವ ಶರ್ಮಾ ಅವರು, ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಇದ್ದ ಸ್ಥಳದಲ್ಲಿ ರಾಮ ಮಂದಿರ ಕಟ್ಟಬೇಕೆಂಬ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. 1992ರಲ್ಲಿ, ಇದೇ ಹೋರಾಟದಲ್ಲಿ ಜೈಲಿಗೂ ಹೋಗಿ ಬಂದಿದ್ದಾರೆ.

27ನೇ ವಯಸ್ಸಿನಲ್ಲಿ ಎರಡು ಬಾರಿ ಗ್ರಾಮದ ಸರಪಂಚ್ ಆಗಿ ಕಾರ್ಯನಿರ್ವಹಿಸಿರುವ ಭಜನ್ ಲಾಲ್, ಭಾರತೀಯ ಜನತಾ ಯುವ ಮೋರ್ಚಾ(ಬಿಜೆವೈಎಂ) ಸೇರಿದಂತೆ ಕಳೆದ 3 ದಶಕಗಳಲ್ಲಿ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ.

ಭರತ್‌ಪುರ ಜಿಲ್ಲೆಯ ಅಟಾರಿ ಗ್ರಾಮ ಮತ್ತು ನಾಡಬಾಯಿ ಪಟ್ಟಣದಲ್ಲಿ ಶಾಲಾ ವ್ಯಾಸಂಗ ಮುಗಿಸಿದ ಅವರು, ನಂತರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ಗೆ (ಎಬಿವಿಪಿ) ಸೇರಿದ್ದರು. ನಬಾಡಿ ಮತ್ತು ಭರತ್‌ಪುರದಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.

ಕಾಶ್ಮೀರಿ ಪಂಡಿತರ ಮೇಲಿನ ದಾಳಿ ಖಂಡಿಸಿ 1990ರಲ್ಲಿ ನಡೆದ ಎಬಿವಿಪಿಯ ಬೃಹತ್ ಪ್ರತಿಭಟನೆಯಲ್ಲಿ ಭಜನ್ ಲಾಲ್ ಸಕ್ರಿಯವಾಗಿ ಭಾಗವಹಿಸಿದ್ದರು. ಇದರಲ್ಲಿ ದೇಶದ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ವಿದ್ಯಾರ್ಥಿಗಳು ಶ್ರೀನಗರದ ಕಡೆಗೆ ಪ್ರತಿಭಟನಾ ಮೆರವಣಿಗೆ ಮಾಡಲು ಜಮ್ಮುವಿನಲ್ಲಿ ಜಮಾಯಿಸಿದ್ದರು. ಪ್ರತಿಭಟನಾಕಾರರನ್ನು ತಡೆದ ಅಧಿಕಾರಿಗಳು, ಉಧಮ್‌ಪುರದಲ್ಲಿ ಕೆಲವರನ್ನು ಬಂಧಿಸಿದರು. ಬಂಧನಕ್ಕೊಳಗಾದವರ ಪೈಕಿ ಶರ್ಮಾ ಕೂಡ ಒಬ್ಬರಾಗಿದ್ದರು.

ಬಳಿಕ, ಮೂರು ಬಾರಿ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾದ ಭರತ್‌ಪುರದ ಜಿಲ್ಲಾ ಅಧ್ಯಕ್ಷರಾಗಿ ಅವರು ಕೆಲಸ ಮಾಡಿದ್ದಾರೆ. ಬಳಿಕ, ರಾಜ್ಯಘಟಕದ ಉಪಾಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ, ಈಗ ನೇರ ಮುಖ್ಯಮಂತ್ರಿಗಾದಿಗೆ ಏರಿದ್ದಾರೆ.

ರಾಜ್ಯಶಾಸ್ತ್ರದಲ್ಲಿ ಸ್ನಾತಕ ಪದವಿ ಪಡೆದಿರುವ ಭಜನ್ ಲಾಲ್, ಕೃಷಿಗೆ ಸಂಬಂಧಿಸಿದ ಉಪಕರಣಗಳ ಸರಬರಾಜು ಉದ್ಯಮ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT