ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ‌ ಗೃಹಬಂಧನ

ಮುಖ್ಯಮಂತ್ರಿ ಭೇಟಿಗೆ ಹೋಗಿದ್ದ ಶಾಸಕರನ್ನು ಥಳಿಸಿದ್ದಾರೆ: ಆಮ್‌ ಆದ್ಮಿ ಪಾರ್ಟಿ ಆರೋಪ
Last Updated 8 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ನವದೆಹಲಿ: ‘ಪ್ರತಿಭಟನಾ ನಿರತ ರೈತರಿಗೆ ಬೆಂಬಲ ಸೂಚಿಸಿದ್ದ ಕಾರಣಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ’ ಎಂದು ಆಮ್‌ ಆದ್ಮಿ ಪಾರ್ಟಿ (ಎಎಪಿ) ಮಂಗಳವಾರ ಆರೋಪಿಸಿದೆ. ಈ ಆರೋಪವನ್ನು ದೆಹಲಿ ಪೊಲೀಸರು ಅಲ್ಲಗಳೆದಿದ್ದಾರೆ.

ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಸೋಮವಾರ ಭೇಟಿಮಾಡಿದ್ದ ಕೇಜ್ರಿವಾಲ್, ರೈತರಿಗೆ ನೀಡಲಾಗಿದ್ದ ಸೌಲಭ್ಯಗಳ ಪರಿಶೀಲನೆ ನಡೆಸಿದ್ದರು.

ಮಂಗಳವಾರ ಬೆಳಿಗ್ಗೆ ಮಾಧ್ಯಮಗೋಷ್ಠಿ ನಡೆಸಿದ ಪಕ್ಷದ ವಕ್ತಾರ ಸೌರಭ್‌ ಭಾರದ್ವಾಜ್‌, ‘ಕೇಂದ್ರ ಗೃಹ ಸಚಿವಾಲಯದ ಸೂಚನೆಯಂತೆ, ನಗರ ಪೊಲೀಸರು ಕೇಜ್ರಿವಾಲ್‌ ಅವರನ್ನು ಗೃಹಬಂಧನದಲ್ಲಿಟ್ಟಿದ್ದಾರೆ. ಅವರ ಮನೆಯೊಳಗೆ ಹೋಗಲು ಅಥವಾ ಮನೆಯಿಂದ ಹೊರಬರಲು ಯಾರಿಗೂ ಅವಕಾಶ ನೀಡುತ್ತಿಲ್ಲ. ಅವರನ್ನು ಭೇಟಿಮಾಡಲು ಹೋದ ಶಾಸಕರನ್ನು ಪೊಲೀಸರು ಥಳಿಸಿದ್ದಾರೆ’ ಎಂದು ಆರೋಪಿಸಿದರು.

ಮಧ್ಯಾಹ್ನ ಮಾಧ್ಯಮಗೋಷ್ಠಿ ನಡೆಸಿದ ದೆಹಲಿಯ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ, ‘ಕೇಜ್ರಿವಾಲ್‌ ಅವರನ್ನು ಭೇಟಿಯಾಗಲು ಹೋಗಿದ್ದ ನನ್ನನ್ನೂ ಪೊಲೀಸರು ತಡೆದಿದ್ದಾರೆ’ ಎಂದು ಆರೋಪಿಸಿದರು. ಎಎಪಿ ಸಂಸದ ಭಗವಂತ್‌ ಮಾನ್‌ ಅವರೂ ಇಂಥದ್ದೇ ಆರೋಪ ಮಾಡಿದರು. ಇದಾದ ಬಳಿಕ ಕೆಲವು ಶಾಸಕರು ಹಾಗೂ ಕಾರ್ಯಕರ್ತರು ಮುಖ್ಯಮಂತ್ರಿಯ ಮನೆಯ ಮುಂದೆ ಧರಣಿ ನಡೆಸಿದರು.

ಆದರೆ, ಎಎಪಿಯ ಈ ಆರೋಪವನ್ನು ದೆಹಲಿಯ ವಿಶೇಷ ಪೊಲೀಸ್‌ ಆಯಿಕ್ತ ಸತೀಶ್‌ ಗೊಲಚ ನಿರಾಕರಿಸಿದ್ದಾರೆ. ‘ಮುಖ್ಯಮಂತ್ರಿಯ ಓಡಾಟದ ಮೇಲೆ ನಿರ್ಬಂಧ ಹೇರಲಾಗಿದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇವು ಆಧಾರರಹಿತ ಹೇಳಿಕೆಗಳಾಗಿವೆ. ಮುಖ್ಯಮಂತ್ರಿ ತಮ್ಮ ಕಾರ್ಯಕ್ರಮಗಳ ಪ್ರಕಾರ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರ ಮೇಲೆ ಯಾವುದೇ ನಿರ್ಬಂಧ ಹೇರಿಲ್ಲ’ ಎಂದು ಟ್ವೀಟ್‌ ಮಾಡಿದ್ದಾರೆ.

ಪೊಲೀಸ್‌ ಉಪ ಆಯುಕ್ತ ಆ್ಯಂಟೊ ಅಲ್ಫೋನ್ಸ್‌ ಅವರೂ ಈ ಆರೋಪವನ್ನು ತಳ್ಳಿಹಾಕಿದ್ದು, ಕೇಜ್ರಿವಾಲ್‌ ಅವರು ಮನೆಯ ಮುಂದಿನ ಚಿತ್ರವನ್ನು ಟ್ವೀಟ್‌ ಮಾಡಿದ್ದಾರೆ.

‘ರಾಜಕೀಯ ಗಿಮಿಕ್‌’

ಕೇಜ್ರಿವಾಲ್‌ ಗೃಹಬಂಧನ ಪ್ರಕರಣವು ಒಂದು ‘ರಾಜಕೀಯ ಗಿಮಿಕ್‌’ ಎಂದು ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಟೀಕಿಸಿವೆ.‘ಎಎಪಿ ಸತತವಾಗಿ ಸುಳ್ಳು ಮತ್ತು ದ್ರೋಹದ ರಾಜಕಾರಣ ಮಾಡುತ್ತಾ ಬಂದಿದೆ. ಸೋಮವಾರ ಬೆಳಿಗ್ಗೆ ಸಿಂಘು ಗಡಿಗೆ ಹೋಗಿದ್ದ ಕೇಜ್ರಿವಾಲ್, ಸಂಜೆ ಪಾರ್ಟಿಯೊಂದರಲ್ಲಿ ಪಾಲ್ಗೊಂಡಿದ್ದರು. ಮನೆಯಲ್ಲಿ ವಿಶ್ರಾಂತಿ ಪಡೆಯುವುದನ್ನೇ ಅವರು ಗೃಹಬಂಧನ ಎನ್ನುತ್ತಿದ್ದಾರೆ’ ಎಂದು ಬಿಜೆಪಿಯ ದೆಹಲಿ ಘಟಕದ ವಕ್ತಾರ ನವೀನ್‌ ಕುಮಾರ್‌ ಟ್ವೀಟ್‌ ಮಾಡಿದ್ದಾರೆ. ಜತೆಗೆ ವಿಡಿಯೊ ಒಂದನ್ನು ಟ್ಯಾಗ್‌ ಮಾಡಿದ್ದಾರೆ.

‘ಇದೊಂದು ಗಿಮಿಕ್‌. ದೆಹಲಿ ಸರ್ಕಾರವೇ ಕೃಷಿ ಕಾಯ್ದೆಗಳನ್ನು ಅಂಗೀಕರಿಸಿರುವಾಗ, ಅವರು ಭಾರತ್‌ ಬಂದ್‌ ಅನ್ನು ಬೆಂಬಲಿಸುವುದಾದರೂ ಹೇಗೆ ಸಾಧ್ಯ? ಮನೆಯಿಂದ ಹೊರಬರಲು ಅವರು ಅಮಿತ್‌ ಶಾ ಅವರ ಆದೇಶಕ್ಕಾಗಿ ಕಾಯುತ್ತಿರಬಹುದು’ ಎಂದು ಕಾಂಗ್ರೆಸ್‌ ದೆಹಲಿ ಘಟಕದ ಅಧ್ಯಕ್ಷ ಅನಿಲ್‌ ಚೌಧರಿ ಟೀಕಿಸಿದ್ದಾರೆ.

ತಡೆದದ್ದು ನಿಜ: ಕೇಜ್ರಿವಾಲ್‌

ಸಂಜೆ ತಮ್ಮ ನಿವಾಸದಿಂದಲೇ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್‌, ‘ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದರಿಂದ ನನ್ನನ್ನು ಪೊಲೀಸರು ತಡೆದಿರುವುದು ನಿಜ’ ಎಂದಿದ್ದಾರೆ.

‘ಒಬ್ಬ ಮುಖ್ಯಮಂತ್ರಿಯಾಗಿ ಅಲ್ಲ ಸಾಮಾನ್ಯ ಪ್ರಜೆಯಾಗಿ ಹೋಗಿ, ಪ್ರತಿಭಟನಾನಿರತ ರೈತರಿಗೆ ಬೆಂಬಲ ಸೂಚಿಸಬೇಕು ಎಂದು ನಿರ್ಧರಿಸಿದ್ದೆ. ನನ್ನ ಯೋಜನೆಯ ಬಗ್ಗೆ ಅವರಿಗೆ ಮೊದಲೇ ಮಾಹಿತಿ ಲಭಿಸಿದಂತಿದೆ. ಅವರು ನನ್ನನ್ನು ಹೋಗಲು ಬಿಡಲಿಲ್ಲ. ಪೊಲೀಸರು ನನ್ನನ್ನು ತಡೆಯದಿದ್ದರೆ, ರೈತರಿದ್ದಲ್ಲಿಗೆ ಹೋಗಿ ಭಾರತ್‌ ಬಂದ್‌ಗೆ ಬೆಂಬಲ ಸೂಚಿಸುತ್ತಿದ್ದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT