ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ದಿಷ್ಟ ಮಾಹಿತಿ ಒದಗಿಸಿದರೆ ಪರಿಗಣನೆ: ಕೆನಡಾ ಆರೋಪಕ್ಕೆ ಜೈಶಂಕರ್ ಪ್ರತಿಕ್ರಿಯೆ

Published 27 ಸೆಪ್ಟೆಂಬರ್ 2023, 13:59 IST
Last Updated 27 ಸೆಪ್ಟೆಂಬರ್ 2023, 13:59 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ‘ನಿಜ್ಜರ್‌ ಹತ್ಯೆ ಕುರಿತು ನಿರ್ದಿಷ್ಟ ಮತ್ತು ನಂಬಲರ್ಹ ಮಾಹಿತಿ ಇದ್ದರೆ ತಿಳಿಸಿ. ಅದನ್ನು ಪರಿಗಣಿಸಲು ನಾವು ಮುಕ್ತರಾಗಿದ್ದೇವೆ’ ಎಂದು ಕೆನಡಾಕ್ಕೆ ಭಾರತ ಈಗಾಗಲೇ ತಿಳಿಸಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌  ಮಂಗಳವಾರ ಹೇಳಿದ್ದಾರೆ.

ಖಾಲಿಸ್ತಾನಿ ಪ್ರತ್ಯೇಕತಾವಾದಿ ಹೋರಾಟಗಾರ ಹರದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಗೆ ಸಂಬಂಧಿಸಿ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ ಅವರು ಭಾರತದ ವಿರುದ್ಧ ಮಾಡಿರುವ ಆರೋಪಗಳ ಕುರಿತು ಭಾರತದ ಅಮೆರಿಕ ರಾಯಭಾರಿ ಕೆನ್ನೆತ್‌ ಜಸ್ಟರ್‌ ಕೇಳಿದ ಪ್ರಶ್ನೆಗೆ ಅವರು  ಉತ್ತರಿಸಿದರು.

’ಇಂತಹ ಕೃತ್ಯದಲ್ಲಿ ತೊಡಗುವುದು ಭಾರತದ ನೀತಿಯಲ್ಲ, ಹತ್ಯೆಗೆ ಸಂಬಂಧಿಸಿದಂತೆ ‘ನಿರ್ದಿಷ್ಟ ಮಾಹಿತಿ ಒದಗಿಸಿದರೆ ಅದನ್ನು ಪರಿಗಣಿಸಲು ಭಾರತ ಸಿದ್ಧವಿದೆ ಎಂದರು.

ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಳಿಕ ನ್ಯೂಯಾರ್ಕ್‌ನಲ್ಲಿ ‘ವಿದೇಶಾಂಗ ವ್ಯವಹಾರಗಳ ಮಂಡಳಿ’ಯಲ್ಲಿ ನಡೆದ ಚರ್ಚೆ ವೇಳೆ ಅವರು ಹೀಗೆ ಹೇಳಿದರು.

ಹತ್ಯೆ ಕುರಿತು ನಿರ್ದಿಷ್ಟ ಮಾಹಿತಿಗಳನ್ನು ನೀಡಿದರೆ ಕೆನಡಾಕ್ಕೆ ಭಾರತ ಸಹಕಾರ ನೀಡಲಿದೆಯೇ ಎಂಬ ಪ್ರಶ್ನೆಗೆ, ನಿರ್ದಿಷ್ಟ ಮಾಹಿತಿಯನ್ನು ಯಾರು ನೀಡಿದರೂ  ಭಾರತ ಅದನ್ನು ಪರಿಗಣಿಸುತ್ತದೆ. ಅದು ಕೆನಡಾ ವಿಷಯಕ್ಕೆ ಮಾತ್ರ ಸಂಬಂಧಿಸುವುದಿಲ್ಲ. ಯಾವುದೇ ವಿವಾದಿತ ಘಟನೆ ಕುರಿತು ಯಾರಾದರೂ ನಿರ್ದಿಷ್ಟ ಮಾಹಿತಿ ನೀಡಿದರೆ ಖಂಡಿತಾ ಪರಿಗಣಿಸಲಾಗುವುದು ಎಂದು ಪ್ರತಿಕ್ರಿಯಿಸಿದರು.

ಹತ್ಯೆ ಕುರಿತು ಸ್ಪಷ್ಟ ಮಾಹಿತಿ ಇಲ್ಲ ಎಂಬುದನ್ನು ಎಲ್ಲರೂ ಮನಗಾಣಬೇಕು ಎಂದ ಅವರು, ‘ಯೋಜಿತ ಅಪರಾಧಗಳು, ಹಿಂಸಾಚಾರ, ಉಗ್ರವಾದವನ್ನು ಕಳೆದ ಕೆಲವು ವರ್ಷಗಳಿಂದ ಕೆನಡಾ ನೆಲದಲ್ಲಿ ಕಂಡಿದ್ದೇವೆ. ಕೆನಡಾದ ಹೊರಗೆ ಕಾರ್ಯಾಚರಣೆ ನಡೆಸುವ ಪಾತಕಿಗಳ ಕುರಿತು ಭಾರತ ಹಲವು ಬಾರಿ ಮಾಹಿತಿ ನೀಡಿದೆ. ಗಡೀಪಾರು ಬೇಡಿಕೆಯನ್ನು ಆ ದೇಶದ ಮುಂದೆ ಹಲವು ಬಾರಿ ಇರಿಸಿದೆ. ಹಲವು ಉಗ್ರರ ಗುರುತು ಪತ್ತೆ ಮಾಡಿ ಅವರಿಗೆ ಮಾಹಿತಿಯನ್ನೂ ನೀಡಿದೆ’ ಎಂದರು.

‘ನಮ್ಮ ರಾಯಭಾರಿಗಳನ್ನು ಬೆದರಿಸಲಾಯಿತು. ನಮ್ಮ ಕಾನ್ಸುಲೇಟ್‌ ಕಚೇರಿಗಳ ಮೇಲೆ ದಾಳಿ ಮಾಡಲಾಯಿತು. ಇದನ್ನೆಲ್ಲವನ್ನೂ ‘ಪ್ರಜಾಪ್ರಭುತ್ವವಾದಿ ನಡೆ’ ಹೆಸರಿನಲ್ಲಿ ಅವರು ಸಮರ್ಥಿಸಿಕೊಂಡರು’ ಎಂದು ಜೈಶಂಕರ್‌  ಅಸಮಾಧಾನ ವ್ಯಕ್ತಪಡಿಸಿದರು. 

‘ಸ್ಪಷ್ಟ ಸುಳಿವು ಲಭ್ಯ’

ವಾಷಿಂಗ್ಟನ್‌: ನಿಜ್ಜರ್‌ ಹತ್ಯೆಯಲ್ಲಿ ಹೊರದೇಶ ಸರ್ಕಾರದ ಕೈವಾಡವಿರುವ ಬಗ್ಗೆ ಸ್ಪಷ್ಟ ಸುಳಿವು ಲಭಿಸಿರುವುದಾಗಿ ಕೆನಡಾದ ನ್ಯೂ ಡೆಮಾಕ್ರಟಿಕ್‌ ಪಕ್ಷದ (ಎನ್‌ಡಿಪಿ) ನಾಯಕ ಜಗ್‌ಮೀತ್‌ ಸಿಂಗ್ ಹೇಳಿದ್ದಾರೆ.

ಒಟ್ಟಾವದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ವಿಷಯ ಕುರಿತಂತೆ ಕೆನಡಾ ಗುಪ್ತಚರ ವಿಭಾಗ ಮಾಹಿತಿ ನೀಡಿದೆ ಎಂದು  ತಿಳಿಸಿದ್ದಾರೆ.

ವೀಸಾ ಒದಗಿಸಿ ಯುವಕರನ್ನು ಸೆಳೆಯುವ ಖಾಲಿಸ್ತಾನಿಯರು

ನವದೆಹಲಿ: ಪಂಜಾಬ್‌ನಲ್ಲಿನ ಸಿಖ್‌ ಯುವಕರಿಗೆ ಕೆನಡಾದಲ್ಲಿ ಉದ್ಯೋಗ ದೊರಕಿಸುವ ಆಮಿಷ ತೋರಿ ಅವರಿಗೆ ವೀಸಾ ಒದಗಿಸುವ ಕೆಲಸವನ್ನು ಖಾಲಿಸ್ತಾನ ಪರ ಹೋರಾಟಗಾರರು ಮಾಡುತ್ತಿದ್ದಾರೆ. ಹೀಗೆ ಉದ್ಯೋಗ ಅರಸಿ ಕೆನಡಾಕ್ಕೆ ಬರುವ ಸಿಖ್‌ ಯುವಕರನ್ನು ಕೆನಡಾದ ನೆಲದಿಂದಲೇ ಖಾಲಿಸ್ತಾನ ಪರ ಕಾರ್ಯಸೂಚಿ ಜಾರಿಗೊಳಿಸುವ ಉದ್ದೇಶಕ್ಕೆ ಅವರು ಬಳಸಿಕೊಳ್ಳುತ್ತಾರೆ ಎಂದು ಮೂಲಗಳು ತಿಳಿಸಿವೆ.

ಖಾಲಿಸ್ತಾನ ಪರ ಹೋರಾಟಗಾರರಾದ ಮೋನಿಂದರ್‌ ಸಿಂಗ್ ಬೌಲ್‌ ಪರ್ಮಿಂದರ್‌ ಪಂಗ್ಲಿ ಭಗತ್ ಸಿಂಗ್‌ ಬ್ರಾರ್‌ ಅವರು ಸಿಖ್‌ ಯುವಕರನ್ನು ಖಾಲಿಸ್ತಾನ ಪರ ಹೋರಾಟದ ಕಾರ್ಯಸೂಚಿಗೆ ಬಳಸಿಕೊಳ್ಳುತ್ತಿದ್ದಾರೆ. ಆದರೆ ಅವರು ನಿರೀಕ್ಷಿಸಿದಷ್ಟು ಬೆಂಬಲವು ಸಿಖ್‌ ಸಮುದಾಯದಿಂದ ವ್ಯಕ್ತವಾಗದ ಕಾರಣ ಕಾಲಾಳುಗಳ ಕೊರತೆ ಅನುಭವಿಸುತ್ತಿದ್ದಾರೆ.

ಪ್ಲಂಬರ್‌ ಟ್ರಕ್‌ ಚಾಲಕರು ಅಥವಾ ಖಾಲಿಸ್ತಾನಿ ಸಂಘಟನೆಗಳ ನಿಯಂತ್ರಣದಲ್ಲಿರುವ ಗುರುದ್ವಾರಗಳಲ್ಲಿ ‘ಸೇವಾದಾರ’ ಇನ್ನಿತರ ಕೆಲಸಗಳನ್ನು ಕೊಡಿಸುವುದಾಗಿ ಯುವಕರನ್ನು ಕೆನಡಾಕ್ಕೆ ಕರೆತರಲಾಗುತ್ತದೆ. ಬಳಿಕ ಅವರನ್ನು ಭಾರತ ವಿರೋಧಿ ಪ್ರತಿಭಟನೆಗಳು ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹಾಗೂ ತೀವ್ರಸ್ವರೂಪದ ಧಾರ್ಮಿಕ ಸಭೆಗಳನ್ನು ಆಯೋಜಿಸಲು ಬಳಸಿಕೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಇದಲ್ಲದೇ ಉನ್ನತ ಶಿಕ್ಷಣಕ್ಕಾಗಿ ಭಾರತದಿಂದ ಕೆನಡಾಕ್ಕೆ ಬಂದು ಹಣಕಾಸಿನ ಸಂಕಷ್ಟ ಅನುಭವಿಸುವ ವಿದ್ಯಾರ್ಥಿಗಳಿಗೆ ಅರೆಕಾಲಿಕ ಉದ್ಯೋಗಗಳನ್ನು ಒದಗಿಸುವುದಾಗಿ ಭರವಸೆ ನೀಡಿ ಅವರನ್ನೂ ತಮ್ಮ ಕಾರ್ಯಸೂಚಿಯ ಭಾಗವಾಗಿ ಮಾಡಿಕೊಳ್ಳುತ್ತಾರೆ. ಖಾಲಿಸ್ತಾನ ಪರ ಹೋರಾಟಗಾರರಿಂದ ಹಣಕಾಸಿನ ನೆರವು ಪಡೆದ ಯುವಕರು ಅವರಿಗೆ ಇಷ್ಟವಿದ್ದೋ ಅಥವಾ ಇಷ್ಟವಿಲ್ಲದೆಯೋ ಸಂಘಟನೆಗಳ ಭಾಗವಾಗುತ್ತಾರೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT