ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: ಮೇ 30, 2023

Published 30 ಮೇ 2023, 13:23 IST
Last Updated 30 ಮೇ 2023, 13:23 IST
ಅಕ್ಷರ ಗಾತ್ರ
Introduction

ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ.4ರಷ್ಟು ಹೆಚ್ಚಳ, ಏಕನಾತ್ ಶಿಂದೆ ಬಣದ ಸಾಸಕರು ಶೀಘ್ರ ರಾಜೀನಾಮೆ ನೀಡುತ್ತಾರೆ ಎಮದ ಉದ್ಧವ್ ಠಾಕ್ರೆ ಹೇಳಿಕೆ. ಮಣಿಪುರ ಸಂಘರ್ಷದಲ್ಲಿ ಮೃತರ ಕುಟುಂಬಕ್ಕೆ ತಲಾ ₹10 ಲಕ್ಷ ಪರಿಹಾರ ಘೋಷಣೆ. ನೂತನ ಶಿಕ್ಷಣ ನೀತಿ ಜಾರಿ ಮಾಡುವುದಿಲ್ಲ ಎಂಬ ಸಚಿವ ಸತೀಶ ಜಾರಕಿಹೊಳಿ ಹೇಳಿಕೆ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

1

ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ.4ರಷ್ಟು ಹೆಚ್ಚಳ,

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: ಮೇ 30, 2023

ರಾಜ್ಯ ಸರ್ಕಾರಿ ನೌಕರರಿಗೆ ಇದೇ ವರ್ಷದ ಜನವರಿ 1ರಿಂದ ಪೂರ್ವಾನ್ವಯವಾಗುವಂತೆ ಶೇ 4ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ಆದೇಶದಿಂದಾಗಿ ನೌಕರ ವರ್ಗದ ತುಟ್ಟಿಭತ್ಯೆಯು ಮೂಲ ವೇತನದ ಶೇ 31ರಿಂದ ಶೇ 35ಕ್ಕೆ ಏರಿಕೆಯಾಗಲಿದೆ. ರಾಜ್ಯದ 5.20 ಲಕ್ಷ ಸರ್ಕಾರಿ ನೌಕರರು, ನಿಗಮ ಮಂಡಳಿ, ಅನುದಾನಿತ ಸಂಸ್ಥೆಗಳ ನೌಕರರು ಹಾಗೂ 4.50 ಲಕ್ಷ ನಿವೃತ್ತ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ.

2

ದೆಹಲಿಯ 16 ವರ್ಷದ ಬಾಲಕಿ ಹತ್ಯೆ: 15 ದಿನಗಳ ಹಿಂದೆಯೇ ಚಾಕು ಖರೀದಿಸಿದ್ದ ಸಾಹೀಲ್

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: ಮೇ 30, 2023

ದೆಹಲಿಯ ಶಹಬಾದ್ ಪ್ರದೇಶದ 16 ವರ್ಷದ ಬಾಲಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೊಂದೇ ಮಾಹಿತಿ ಹೊರಬೀಳುತ್ತಿದೆ. ಆರೋಪಿ ಸಾಹೀಲ್ 15 ದಿನಗಳ ಹಿಂದೆಯೇ ಕೃತ್ಯಕ್ಕಾಗಿ ಚಾಕು ಖರೀದಿಸಿದ್ದ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು, ಚಾಕುವಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.16 ವರ್ಷದ ಬಾಲಕಿ ಸಾಕ್ಷಿಯನ್ನು 20ಕ್ಕೂ ಅಧಿಕ ಬಾರಿ ಚಾಕುವಿನಿಂದ ಇರಿದಿದ್ದ ಸಾಹೀಲ್, ಸಿಮೆಂಟ್ ಇಟ್ಟಿಗೆಯಿಂದ ಹಲ್ಲೆ ಮಾಡಿದ್ದ. ಹೀಗಾಗಿ, ಸಾಕ್ಷಿ ಸ್ಥಳದಲ್ಲೇ ಸಾವಿಗೀಡಾಗಿದ್ದರು. ಆಕೆಯ ಮೃತದೇಹದಲ್ಲಿ 35 ಗಾಯಗಳಾಗಿದ್ದವು. ತಲೆ ಸಂಪೂರ್ಣ ಜಜ್ಜಿಹೋಗಿತ್ತು.

3

ಶಿಂದೆ ಬಣದ 22 ಶಾಸಕರು, 9 ಸಂಸದರು ಶೀಘ್ರ ರಾಜೀನಾಮೆ: ಉದ್ಧವ್ ಠಾಕ್ರೆ

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: ಮೇ 30, 2023

ಶಿವಸೇನಾದ ಏಕನಾಥ್ ಶಿಂದೆ ಬಣದ 22 ಶಾಸಕರು ಮತ್ತು 9 ಸಂಸದರು ರಾಜೀನಾಮೆ ನೀಡಲಿದ್ದಾರೆ ಎಂದು ಶಿವಸೇನಾ ಉದ್ಧವ್ ಬಾಳಾಠಾಕ್ರೆ ಬಣದ(ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ಹೇಳಿದ್ದಾರೆ.ಬಿಜೆಪಿಯ ಮಲತಾಯಿ ಧೋರಣೆಯಿಂದ ಉಸಿರುಗಟ್ಟಿದ ವಾತಾವರಣದಲ್ಲಿ ಬೇಸತ್ತಿರುವ ಅವರು, ಶಿಂದೆ ಬಣವನ್ನು ತೊರೆಯಲಿದ್ದಾರೆ ಎಂದು ಉದ್ಧವ್ ಹೇಳಿದ್ದಾರೆ.ಶಿವಸೇನಾ ಉದ್ಧವ್ ಬಾಳಾಠಾಕ್ರೆ ಬಣದ(ಯುಬಿಟಿ) ಮುಖವಾಣಿ ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ, ಬಿಜೆಪಿಯಿಂದ ಮಲತಾಯಿ ಧೋರಣೆ ಎದುರಿಸುತ್ತಿದ್ದೇವೆ ಎಂಬ ಶಿವಸೇನಾ ಸಂಸದ ಗಜಾನನ ಕೀರ್ತಿಕಾರ್ ಅವರ ಹೇಳಿಕೆಯನ್ನು ಠಾಕ್ರೆ ಉಲ್ಲೇಖಿಸಿದ್ದಾರೆ. 2019ರಲ್ಲಿ ಇದೇ ರೀತಿಯ ಮಲತಾಯಿ ಧೋರಣೆಯನ್ನು ಸಹಿಸಲಾಗದೆ ನಮ್ಮ ಭದ್ರತೆ ಮತ್ತು ಆತ್ಮಾಭಿಮಾನವನ್ನು ಉಳಿಸಿಕೊಳ್ಳಲು ಬಿಜೆಪಿ ಜೊತೆಗಿನ ಮೈತ್ರಿ ಕಡಿದುಕೊಂಡೆವು ಎಂದೂ ತಿಳಿಸಿದ್ದಾರೆ

4

ಪದಕಗಳನ್ನು ಗಂಗಾ ನದಿಗೆ ಎಸೆಯುತ್ತೇವೆ: ಪ್ರತಿಭಟನಾನಿರತ ಕುಸ್ತಿಪಟುಗಳ ಎಚ್ಚರಿಕೆ

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: ಮೇ 30, 2023

ಜಂತರ್‌ಮಂತರ್‌ನಿಂದ ತಮ್ಮನ್ನು ಹೊರಹಾಕಿದ ಪೊಲೀಸರ ವರ್ತನೆಯನ್ನು ಖಂಡಿಸಿರುವ ಕುಸ್ತಿಪಟುಗಳು ತಾವು ಕಷ್ಟ ಪಟ್ಟು ಸಂಪಾದಿಸಿರುವ ಪದಕಗಳನ್ನು ಗಂಗಾ ನದಿಗೆ ಎಸೆಯುತ್ತೇವೆ ಎಂದು ಹೇಳಿದ್ದಾರೆ. ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ಬಂಧನಕ್ಕೆ ಒತ್ತಾಯಿಸಿ ಹಲವು ಕುಸ್ತಿ ಪಟುಗಳು ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಇಂದು ಬೆಳಿಗ್ಗೆ ಅವರನ್ನು ಜಂತರ್‌ಮಂತರ್‌ನಿಂದ ಪೊಲೀಸರು ಹೊರಹಾಕಿದ್ದಾರೆ. ಆದರೂ ಛಲ ಬಿಡದ ಕುಸ್ತಿಪಟುಗಳು, ಇಂಡಿಯಾ ಗೇಟ್ ಬಳಿ ಸೇರಿದ್ದು, ಪ್ರಾಣ ಇರುವವರೆಗೂ ಹೋರಾಟ ನಡೆಸುವುದಾಗಿ ಹೇಳಿದ್ದಾರೆ.‘ಈ ಪದಕಗಳು ನಮ್ಮ ಜೀವ ಮತ್ತು ಆತ್ಮವಾಗಿವೆ. ಅವುಗಳನ್ನು ನಾವು ಗಂಗಾ ನದಿಗೆ ಎಸೆಯಲಿದ್ದೇವೆ. ಅದಾದ ಬಳಿಕ, ಬದುಕುವ ಪ್ರಶ್ನೆಯೇ ಇಲ್ಲ. ಸಾಯುವವರೆಗೂ ಇಂಡಿಯಾ ಗೇಟ್ ಬಳಿ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ’ ಎಂದು ಹಿಂದಿಯಲ್ಲಿ ಹೇಳಿಕೆ ಪೋಸ್ಟ್ ಮಾಡಿದ್ದಾರೆ. ಕುಸ್ತಿ ಪಟು ವಿನೇಶ್ ಫೊಗಟ್ ಸಹ ಇದೇ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ.

5

ರೈತರ ಆತ್ಮಹತ್ಯೆ ಪರಿಹಾರ ವಿಳಂಬ ಬೇಡ: ಸಚಿವೆ ಲಕ್ಷ್ಮೀ ಹೆಬ್ಬಾಳಕರ

Laxmi Hebbalkar
Laxmi Hebbalkar

ಬೆಳಗಾವಿ 'ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಗಳಿಗೆ ಪರಿಹಾರ ಬಿಡುಗಡೆಗೆ ಸಂಬಂಧಿಸಿದಂತೆ ಕೆಲವು ತಾಂತ್ರಿಕ ಕಾರಣಗಳು ಅಡ್ಡಿಯಾಗುತ್ತಿದ್ದು, ಇಂತಹ ಸಂದರ್ಭಗಳಲ್ಲಿ ತ್ವರಿತವಾಗಿ ಕ್ರಮವಾಗಬೇಕು' ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರು ಹಾಗೂ ಹಿರಿಯ ನಾಗತಿಕರ ಸಬಲೀಕರಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸೂಚಿಸಿದರು.

ಸಮೀಪದ ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, 'ಹನಿ ನೀರಾವರಿ ಯೋಜನೆಯ ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ಆಯಾ ಮತಕ್ಷೇತ್ರದ ಶಾಸಕರ ಗಮನಕ್ಕೆ ತಂದು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದರು.

6

ಕೋಲಾರ: ಪ್ರಿಯಕರನ ಜೊತೆ ಸೇರಿ ಪತಿ, ಗಾಯಕ ಜನ್ನಘಟ್ಟ ಕೃಷ್ಣಮೂರ್ತಿ ಕೊಲೆ

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: ಮೇ 30, 2023

ಪ್ರಿಯಕರನ ಜೊತೆಗೂಡಿ ಸೋಮವಾರ ರಾತ್ರಿ ಕೋಲಾರ ತಾಲ್ಲೂಕಿನ ಕನ್ನಘಟ್ಟ ಬಳಿ ಪತಿ ಹಾಗೂ ಜಾನಪದ ಗಾಯಕ ಜನ್ನಘಟ್ಟ ಕೃಷ್ಣಮೂರ್ತಿ ಅವರನ್ನು ಕೊಲೆ ಮಾಡಿರುವ ಆರೋಪ‌ ಸಂಬಂಧ ಪತ್ನಿ ಸೇರಿದಂತೆ ‌ಮೂವರನ್ನು ಪೊಲೀಸರು ಮಂಗಳವಾರ ವಶಕ್ಕೆ ‌ಪಡೆದಿದ್ದಾರೆ.ಜನ್ನಘಟ್ಟ ಕೃಷ್ಣಮೂರ್ತಿ ‌ಪತ್ನಿ ಸೌಮ್ಯಾ, ಆಕೆಯ ಪ್ರಿಯಕರ ಶ್ರೀನಿವಾಸಪುರದ ಶ್ರೀಧರ್, ಆತನ ಗೆಳೆಯ ‌ಶ್ರೀಧರ್ ಎಂಬ ಆರೋಪಿಗಳ‌ ಮೇಲೆ ಪ್ರಕರಣ ದಾಖಲಿಸಿರುವ ಕೋಲಾರ ಗ್ರಾಮಾಂತರ ಪೊಲೀಸರು ವಿಚಾರಣೆಗೆ ನಡೆಸುತ್ತಿದ್ದಾರೆ.ಕೊಲೆ ಮಾಡಿ ರೈಲ್ವೆ ಗೇಟ್ ಬಳಿ ದ್ವಿಚಕ್ರ ವಾಹನದಲ್ಲಿ ಬಿದ್ದು ಮೃತಪಟ್ಟಿರುವಂತೆ ಬಿಂಬಿಸಲು ಆರೋಪಿಗಳು ಪ್ರಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

7

ಮಣಿಪುರದಲ್ಲಿ ಜನಾಂಗೀಯ ಸಂಘರ್ಷ: ಮೃತರ ಕುಟುಂಬಕ್ಕೆ ತಲಾ ₹10 ಲಕ್ಷ ಪರಿಹಾರ ಘೋಷಣೆ

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: ಮೇ 30, 2023

ಮಣಿಪುರದಲ್ಲಿ ನಡೆದ ಜನಾಂಗೀಯ ಸಂಘರ್ಷದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರ ನೀಡುವುದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಧರಿಸಿವೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಸೋಮವಾರ ತಡರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಎನ್‌.ಬಿರೇನ್‌ ಸಿಂಗ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪರಿಹಾರದ ಮೊತ್ತವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಸಮಾನವಾಗಿ ಭರಿಸಲಿದೆ. ಜತೆಗೆ, ಗಲಭೆಯಲ್ಲಿ ಮೃತಪಟ್ಟ ಕುಟುಂಬದ ಸದಸ್ಯರೊಬ್ಬರಿಗೆ ಉದ್ಯೋಗ ನೀಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

8

ಪಠ್ಯ ಪರಿಷ್ಕರಣೆ ಹೆಸರಲ್ಲಿ ಬಿಜೆಪಿ ಸೃಷ್ಟಿಸಿದ ಗೊಂದಲ ಸರಿಪಡಿಸುತ್ತೇವೆ: ಕಾಂಗ್ರೆಸ್

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: ಮೇ 30, 2023

ಬೆಂಗಳೂರು: ಪಠ್ಯ ಪರಿಷ್ಕರಣೆ ಹೆಸರಲ್ಲಿ ಬಿಜೆಪಿ ಸರ್ಕಾರ ಸೃಷ್ಟಿಸಿದ ಗೊಂದಲಗಳನ್ನು ಸರಿಪಡಿಸಲಾಗುವುದು ಎಂದು ಕಾಂಗ್ರೆಸ್‌ ಹೇಳಿದೆ. ಪಠ್ಯ ಪರಿಷ್ಕರಣೆ ವಿಚಾರ ಪ್ರಸ್ತಾಪಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಮಕ್ಕಳಿಗೆ ಉತ್ತಮವಾದ ಶೈಕ್ಷಣಿಕ ಭವಿಷ್ಯ ರೂಪಿಸಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಹಿಂದಿನ ಪಠ್ಯಗಳನ್ನೇ ಮುಂದುವರಿಸುವ ಜನರ ಬೇಡಿಕೆಯನ್ನು ಸರ್ಕಾರ ಆದ್ಯತೆಯ ಮೇರೆಗೆ ಪರಿಗಣಿಸಲಿದೆ’ ಎಂದು ತಿಳಿಸಿದೆ. ‘ನಾಡು, ನುಡಿಗೆ, ಮಹನೀಯರಿಗೆ ಅವಮಾನಿಸಿದ ದೋಷಪೂರಿತ ಪಠ್ಯವನ್ನು ಮುಂದುವರೆಸುವುದಿಲ್ಲ’ ಎಂದು ಕಾಂಗ್ರೆಸ್ ಭರವಸೆ ನೀಡಿದೆ.

ನೂತನ ಶಿಕ್ಷಣ ನೀತಿ ಜಾರಿ ಮಾಡುವುದಿಲ್ಲ: ಸಚಿವ ಸತೀಶ ಜಾರಕಿಹೊಳಿ

9
Top 10 News | ಈ ದಿನದ ಪ್ರಮುಖ 10 ಸುದ್ದಿಗಳು: ಮೇ 30, 2023

ಬೆಳಗಾವಿ: ‘ಕೇಂದ್ರ ಸರ್ಕಾರ ರೂಪಿಸಿದ ನೂತನ ಶಿಕ್ಷಣ ನೀತಿಯನ್ನು‌ ನಾವು ಹಿಂದೆಯೂ ಒಪ್ಪಿರಲಿಲ್ಲ. ಈಗಲೂ ಒಪ್ಪುವುದಿಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ‘ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೇಸರೀಕರಣ ಆಗಬಾರದು. ಅದರ ಬಗ್ಗೆ ಶಿಕ್ಷಣ ತಜ್ಞರು, ಪರಿಣತರು ಕೂಡ ತಕರಾರು ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಇದೇ ಅಭಿಪ್ರಾಯ ಪಟ್ಟಿದ್ದಾರೆ. ತಜ್ಞರ ಹೊಸ ಸಮಿತಿ ರಚಿಸಿ, ಪರಾಮರ್ಶೆ ಮಾಡಲಾಗುವುದು. ಅಲ್ಲಿ ಬರುವ ಅಭಿಪ್ರಾಯದ ಮೇಲೆ ಹೆಜ್ಜೆ ಇಡಲಾಗುವುದು’ ಎಂದೂ ಅವರು ನಗರದಲ್ಲಿ ಮಂಗಳವಾರ ಮಾಧ್ಯದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

10

ದೊಡ್ಡವರ ಅರಣ್ಯ ಒತ್ತುವರಿ ತೆರವು: ಸಚಿವ ಈಶ್ವರ್ ಖಂಡ್ರೆ

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: ಮೇ 30, 2023

ತುಮಕೂರು: ‘ದೊಡ್ಡ ದೊಡ್ಡ ಜನರು, ಬಿಲ್ಡರ್ಸ್ ಅತಿಕ್ರಮಣ ಮಾಡಿಕೊಂಡಿರುವ ಅರಣ್ಯ ಪ್ರದೇಶವನ್ನು ತೆರವು ಮಾಡಲಾಗುವುದು’ ಎಂದು ಅರಣ್ಯ, ಜೈವಿಕ ಹಾಗೂ ಪರಿಸರ ಸಚಿವ ಈಶ್ವರ್ ಖಂಡ್ರೆ ಮಂಗಳವಾರ ತಿಳಿಸಿದರು. ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ದೊಡ್ಡವರು ತಮ್ಮ ಸ್ವಾರ್ಥಕ್ಕಾಗಿ ಅರಣ್ಯ ಒತ್ತುವರಿ ಮಾಡಿಕೊಂಡಿದ್ದಾರೆ. ಅದನ್ನು ತೆರವುಗೊಳಿಸಲಾಗುತ್ತದೆ’ ಎಂದರು.ಅರಣ್ಯ ಇಲಾಖೆಯ ಕೆಲವು ಅಧಿಕಾರಿಗಳ ತಪ್ಪಿನಿಂದಾಗಿ ಬಡ ಜನರು ಅರಣ್ಯ ಪ್ರದೇಶಗಳಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಕೆಲವು ಕಡೆಗಳಲ್ಲಿ ಸುಮಾರು 50 ವರ್ಷಗಳಿಂದ ವಾಸವಿದ್ದಾರೆ. ಅಂತಹ ಪ್ರದೇಶಗಳನ್ನು ಸರ್ವೇ ಮಾಡದ ಕಾರಣ ಅರಣ್ಯ ಪ್ರದೇಶ ಎಂದು ದಾಖಲೆಯಲ್ಲಿ ತೋರಿಸುತ್ತಿದೆ. ಇದರಿಂದ ಬಡವರಿಗೆ ಅನ್ಯಾಯವಾಗಿದೆ. ಇದನ್ನು ಸರಿಪಡಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ADVERTISEMENT
ADVERTISEMENT