ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಜ್ರಿವಾಲ್ ಅವರನ್ನು ಉಗ್ರರಂತೆ ಪರಿಗಣಿಸಲಾಗುತ್ತಿದೆ: ಭಗವಂತ್‌ ಮಾನ್‌ ಆರೋಪ

Published 23 ಏಪ್ರಿಲ್ 2024, 12:30 IST
Last Updated 23 ಏಪ್ರಿಲ್ 2024, 12:30 IST
ಅಕ್ಷರ ಗಾತ್ರ

ನವದೆಹಲಿ: ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರು ಸೋಮವಾರ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ತಿಹಾರ್‌ ಜೈಲಿನಲ್ಲಿ ಭೇಟಿ ಮಾಡಿ ಫೋನಿನ ಮೂಲಕ ಮಾತುಕತೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾನ್‌ ಅವರು, ಕೇಜ್ರಿವಾಲ್ ಅವರನ್ನು ಉಗ್ರರಂತೆ ಪರಿಗಣಿಸಲಾಗುತ್ತಿದೆ ಎಂದು ಆರೋಪಿಸಿದರು.

‘ಕೇಜ್ರಿವಾಲ್ ಅವರೊಂದಿಗೆ ಅರ್ಧ ಗಂಟೆ ಮಾತನಾಡಿದೆವು. ಆದರೆ, ನಮ್ಮ ನಡುವೆ ಗಾಜಿನ ಗೋಡೆ ಅಡ್ಡ ಇತ್ತು. ಹೀಗಾಗಿ ಪೋನ್‌ ಕರೆ ಮೂಲಕ ಮಾತನಾಡಿದೆವು. ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ ಪರವಾಗಿ ದೇಶದ ವಿವಿಧೆಡೆ ಪ್ರಚಾರ ಮಾಡುವಂತೆ ಅವರು ಸೂಚಿಸಿದರು’ ಎಂದು ಹೇಳಿದರು.

‘ಕುಖ್ಯಾತ ಅಪರಾಧಿಗಳಿಗೆ ದೊರಕುವ ಸೌಲಭ್ಯಗಳೂ ಕೇಜ್ರಿವಾಲ್‌ ಅವರಿಗೆ ಸಿಗದಿರುವುದು ವಿಷಾದ. ಅವರು ಮಾಡಿರುವ ಅಪರಾಧವಾದರೂ ಏನು? ಶಾಲೆ, ಆಸ್ಪತ್ರೆ, ಮೊಹಲ್ಲಾ
ಕ್ಲಿನಿಕ್‌ಗಳನ್ನು ಕಟ್ಟಿದ್ದು ಮತ್ತು ಜನರಿಗೆ ಉಚಿತ ವಿದ್ಯುತ್‌ ನೀಡಿರುವುದೇ?’ ಎಂದು ಪ್ರಶ್ನಿಸಿದರು.

‘ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ ಅವರು ಜೈಲಿನಲ್ಲಿದ್ದಾಗ ಸೋನಿಯಾ ಗಾಂಧಿ ಅವರು ಭೇಟಿಯಾಗುತ್ತಿದ್ದರು. ಆದರೆ ಇಂದು ನಮ್ಮ ಮಧ್ಯೆ ಗಾಜಿನ ಗೋಡೆ ಇತ್ತು. ಮೋದಿ ಅವರಿಗೆ ಏನು ಬೇಕಿದೆ? ಇದಕ್ಕೆ ಅವರು ಬೆಲೆ ತೆತ್ತೇ ತೆರುತ್ತಾರೆ. ಪಾರದರ್ಶಕ ರಾಜಕಾರಣ ಆರಂಭಿಸಿದ ಕೇಜ್ರಿವಾಲ್‌ ಅವರನ್ನು ಈ ರೀತಿ ನಡೆಸಿಕೊಳ್ಳಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂದೀಪ್ ಪಾಠಕ್, ‘ಕೇಜ್ರಿವಾಲ್‌ ಅವರನ್ನು ಕಂಡು ಮಾನ್ ಕಣ್ಣೀರು ಹಾಕಿದರು’ ಎಂದು ಹೇಳಿದರು.

‘ಆರೋಗ್ಯ ಹೇಗಿದೆ ಎಂದು ಕೇಜ್ರಿವಾಲ್‌ ಅವರನ್ನು ಕೇಳಿದೆವು. ಅದಕ್ಕೆ ಅವರು, ‘ಹೋರಾಡಲು ನಾನು ಸಿದ್ಧ. ನನ್ನ ಬಗ್ಗೆ ಚಿಂತೆ ಬೇಡ. ಜನರು ಏನು ಹೇಳುತ್ತಿದ್ದಾರೆ? ವಿದ್ಯುತ್‌ ಸಬ್ಸಿಡಿ ಮುಂದುವರಿದಿದೆಯೇ, ವಿದ್ಯುತ್‌ ಕಡಿತ ಆಗುತ್ತಿದೆಯೇ, ಸರ್ಕಾರಿ ಆಸ್ಪತ್ರೆ ಗಳಲ್ಲಿ ಉಚಿತ ಔಷಧ ಲಭ್ಯವಾಗುತ್ತಿದೆಯೇ?’ ಎಂದು ಕೇಳಿದರು. ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ ನಂತರ ಸಮಾಧಾನಗೊಂಡರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT