ತಿರುವನಂತಪುರ: ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಹೋರಾಡಲು ರಷ್ಯಾ ಸೇನೆ ನೇಮಕ ಮಾಡಿಕೊಂಡಿದ್ದ ಕೇರಳದ ನಾಲ್ವರು ಯುವಕರಲ್ಲಿ ಇಬ್ಬರು ಆದಷ್ಟು ಬೇಗ ಸ್ವದೇಶಕ್ಕೆ ಮರಳಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ವಿ. ಮುರುಳೀಧರನ್ ಅವರು ಮಂಗಳವಾರ ತಿಳಿಸಿದ್ದಾರೆ.
ರಷ್ಯಾದಿಂದ ಅವರು ವಾಪಸ್ಸಾಗಲು ಅಲ್ಲಿಯ ಭಾರತೀಯ ರಾಯಭಾರ ಕಚೇರಿಯು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸುತ್ತಿದೆ. ಸದ್ಯದಲ್ಲೇ ಅವರು ವಾಪಸ್ಸಾಗಲಿದ್ದಾರೆ ಎಂದು ಹೇಳಿದರು.
ಇನ್ನಿಬ್ಬರನ್ನೂ ಕರೆತರಲು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ರಷ್ಯಾ ಸರ್ಕಾರದ ಜೊತೆ ಮಾತುಕತೆ ನಡೆಸುತ್ತಿದೆ. ‘ನಿಮ್ಮನ್ನು ಸ್ವದೇಶಕ್ಕೆ ಮರಳಿ ಕರೆತರಲು ದೃಢವಾದ ಕ್ರಮಗಳನ್ನು ಭಾರತ ತೆಗೆದುಕೊಳ್ಳುತ್ತಿದೆ’ ಎಂದು ಅವರಿಬ್ಬರಿಗೆ ಭರವಸೆ ನೀಡಲಾಗಿದೆ ಎಂದೂ ಹೇಳಿದ್ದಾರೆ.
ಖಾಸಗಿ ಏಜೆನ್ಸಿಯೊಂದು ₹2.5 ಲಕ್ಷ ಮೊತ್ತದ ಸಂಬಳ ಕೊಡಿಸುವುದಾಗಿ ಯುವಕರಿಗೆ ಸುಳ್ಳು ಆಮಿಷವೊಡ್ಡಿ, ಯುವಕರನ್ನು ರಷ್ಯಾ ಸೇನೆಗೆ ಸೇರಿಸಿದೆ ಎಂದು ಸಂತ್ರಸ್ತ ಯುವಕರ ಕುಟುಂಬ ಸದಸ್ಯರು ಈ ಹಿಂದೆ ತಿಳಿಸಿದ್ದರು.