ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಸೇನಾ ಬಣಗಳ ಶಾಸಕರ ಅನರ್ಹತೆ ಆದೇಶ ಇಂದು

Published 9 ಜನವರಿ 2024, 14:10 IST
Last Updated 9 ಜನವರಿ 2024, 14:10 IST
ಅಕ್ಷರ ಗಾತ್ರ

ಮುಂಬೈ: ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ಬಣಗಳು ಪರಸ್ಪರರ ವಿರುದ್ಧ ಸಲ್ಲಿಸಿರುವ ಶಾಸಕರ ಅನರ್ಹತೆ ಕುರಿತ ಅರ್ಜಿಗಳಿಗೆ ಸಂಬಂಧಿಸಿದ ಆದೇಶವನ್ನು ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಬುಧವಾರ ಪ್ರಕಟಿಸುವ ನಿರೀಕ್ಷೆ ಇದೆ.

ನಾರ್ವೇಕರ್ ಅವರಿಗೆ ಆದೇಶ ಪ್ರಕಟಿಸುವುದಕ್ಕೆ ಸುಪ್ರೀಂ ಕೋರ್ಟ್‌ ಜನವರಿ 10ರ ಗಡುವು ನೀಡಿದೆ. ಆದೇಶವು ತಮಗೆ ವಿರುದ್ಧವಾಗಿ ಬಂದರೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲು ಎರಡೂ ಬಣಗಳು ಸಜ್ಜಾಗಿವೆ. ನಾರ್ವೇಕರ್ ಅವರು 34 ಅರ್ಜಿಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದಾರೆ. ಎರಡೂ ಬಣಗಳು ಒಟ್ಟು 2.5 ಲಕ್ಷ ಪುಟಗಳಷ್ಟು ದಾಖಲೆಗಳನ್ನು ಸಲ್ಲಿಸಿವೆ.

ಆದೇಶ ನೀಡುವ ಮೊದಲು ನಾರ್ವೇಕರ್ ಅವರು ಮುಖ್ಯಮಂತ್ರಿ ಶಿಂದೆ ಅವರನ್ನು ಭೇಟಿ ಮಾಡಿದ್ದು ಎಷ್ಟು ಸರಿ ಎಂದು ಉದ್ಧವ್ ಠಾಕ್ರೆ ಪ್ರಶ್ನಿಸಿದ್ದಾರೆ. ‘ನಾವು ಯಾವ ನ್ಯಾಯ ನಿರೀಕ್ಷಿಸಬಹುದು. ಸ್ಪೀಕರ್ ಅವರು ಮುಖ್ಯಮಂತ್ರಿ ಜೊತೆ ಎರಡು ಭಾರಿ ಸಭೆ ನಡೆಸಿದ್ದಾರೆ. ನಾನೂ ಮುಖ್ಯಮಂತ್ರಿ ಆಗಿದ್ದೆ. ಭೇಟಿಯಾಗಬೇಕು ಎಂದಿದ್ದರೆ, ಸ್ಪೀಕರ್‌ ಬಳಿ ಮುಖ್ಯಮಂತ್ರಿ ಹೋಗಬೇಕೇ ವಿನಾ ಮುಖ್ಯಮಂತ್ರಿ ಇದ್ದಲ್ಲಿ ಸ್ಪೀಕರ್ ಹೋಗಬಾರದು. ಆದರೆ ಇಲ್ಲಿ ಸ್ಪೀಕರ್ ಅವರೇ ಮುಖ್ಯಮಂತ್ರಿ ಇದ್ದಲ್ಲಿಗೆ ತೆರಳಿ ಸಭೆ ನಡೆಸುತ್ತಾರೆ’ ಎಂದು ಠಾಕ್ರೆ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.

ನಾರ್ವೇಕರ್ ಅವರು ಶಿಂದೆ ಅವರನ್ನು ಭೇಟಿ ಮಾಡುವುದು ‘ನ್ಯಾಯಾಧೀಶರೊಬ್ಬರು ಕ್ರಿಮಿನಲ್ ಅಪರಾಧ ಎಸಗಿದವನನ್ನು ಭೇಟಿಯಾಗುವುದಕ್ಕೆ ಸಮ’ ಎಂದು ಠಾಕ್ರೆ ಹೇಳಿದರು.

‘ಸ್ಪೀಕರ್ ಅವರು ನ್ಯಾಯಮಂಡಳಿ ಮುಖ್ಯಸ್ಥ ಇದ್ದಂತೆ... ನ್ಯಾಯಾಧೀಶನ ಸ್ಥಾನದಲ್ಲಿ ಇರುವವರು ಆದೇಶಕ್ಕೆ ಮೊದಲು ಅರ್ಜಿದಾರರೊಬ್ಬರನ್ನು ಭೇಟಿ ಮಾಡುವುದು ಎಷ್ಟು ಸರಿ... ಸಂವಿಧಾನದ ಹತ್ತನೆಯ ಪರಿಚ್ಛೇದದ ಅಡಿಯಲ್ಲಿ ನ್ಯಾಯನಿರ್ಣಯದ ಕೆಲಸ ಮಾಡುವ ಸ್ಪೀಕರ್ ನಿಷ್ಪಕ್ಷಪಾತದಿಂದ, ನ್ಯಾಯಸಮ್ಮತವಾಗಿ ನಡೆದುಕೊಳ್ಳಬೇಕು ಎಂದು’ ಎಂದು ಶಿವಸೇನಾ (ಯುಬಿಟಿ) ಶಾಸಕ ಅನಿಲ್ ಪರಬ್ ಹೇಳಿದರು.

ಶಿಂದೆ ಮತ್ತು ಇತರ ಶಾಸಕರ ಬಂಡಾಯದ ನಂತರ ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ ಮೈತ್ರಿಕೂಟ ಸರ್ಕಾರವು ಉರುಳಿತ್ತು. ನಂತರ ಬಿಜೆಪಿ ಬೆಂಬಲದೊಂದಿಗೆ ಶಿಂದೆ ನೇತೃತ್ವದಲ್ಲಿ ಸರ್ಕಾರ ರಚನೆ ಆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT