ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೆಹಲಿ | ಹೆಣ್ಣುಮಕ್ಕಳ ಜನನದಿಂದ ಬೇಸರ: ಅವಳಿ ನವಜಾತ ಶಿಶುಗಳನ್ನು ಕೊಂದ ತಂದೆ

Published 23 ಜೂನ್ 2024, 14:27 IST
Last Updated 23 ಜೂನ್ 2024, 14:27 IST
ಅಕ್ಷರ ಗಾತ್ರ

ದೆಹಲಿ: ಅವಳಿ ಹೆಣ್ಣುಮಕ್ಕಳ ಜನನದಿಂದ ಬೇಸರಗೊಂಡ ತಂದೆ ಹಾಗೂ ಕುಟುಂಬ ಸದಸ್ಯರು ನವಜಾತ ಶಿಶುಗಳನ್ನು ಕೊಂದಿರುವ ಹೃದಯ ವಿದ್ರಾವಕ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ಜನ್ಮ ನೀಡಿದ ಬಳಿಕ ಎರಡೂ ಶಿಶುಗಳನ್ನು ತಾಯಿಯಿಂದ ಬೇರ್ಪಡಿಸಿದ ಬಳಿಕ ಪತಿ ಹಾಗೂ ಕುಟುಂಬ ಸದಸ್ಯರು ಈ ಕೃತ್ಯ ಎಸಗಿದ್ದಾರೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ಹೆರಿಗೆಯಾದ ಬಳಿಕ, ತಾಯಿ ಚೇತರಿಸಿಕೊಳ್ಳುವವರೆಗೆ ಮಕ್ಕಳನ್ನು ನೋಡಿಕೊಳ್ಳುವುದಾಗಿ ಹೇಳಿ ಕುಟುಂಬಸ್ಥರು ಶಿಶುಗಳನ್ನು ಕರೆದುಕೊಂಡು ಹೋಗಿದ್ದಾರೆ. ಚಿಕಿತ್ಸೆಯ ಬಳಿಕ ನವಜಾತ ಶಿಶುಗಳ ಕುರಿತು ಮಹಿಳೆ ವಿಚಾರಿಸಿದಾಗ, ಎರಡೂ ಶಿಶುಗಳು ಅನಾರೋಗ್ಯದಿಂದ ಮೃತಪಟ್ಟಿರುವುದಾಗಿ ಪತಿ ಮತ್ತು ಕುಟುಂಬ ಸದಸ್ಯರು ಹೇಳಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪತಿ ಹಾಗೂ ಆತನ ಕುಟುಂಬದವರ ವರ್ತನೆಯಿಂದ ಅನುಮಾನಗೊಂಡ ಮಹಿಳೆ ಮತ್ತು ಆಕೆಯ ಕುಟುಂಬದವರು ಪೊಲೀಸ್ ದೂರು ನೀಡಿದ್ದಾರೆ. ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಶಿಶುಗಳ ಶವಗಳನ್ನು ಹೊರತೆಗೆದು ಶವಪರೀಕ್ಷೆಗೆ ಒಳಪಡಿಸಿದ್ದಾರೆ. ವೈದ್ಯಕೀಯ ವರದಿ ಬಂದ ಬಳಿಕ ಆರೋಪಿಗಳ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

2022ರಲ್ಲಿ ಮದುವೆಯಾಗಿದ್ದು, ಪತಿಯ ಮನೆಯವರು ವರದಕ್ಷಿಣೆಗಾಗಿ ನಿತ್ಯ ಕಿರುಕುಳ ನೀಡುತ್ತಿದ್ದರು ಮತ್ತು ಗಂಡು ಮಗುವಿಗೆ ಜನ್ಮ ನೀಡುವಂತೆ ಒತ್ತಡ ಹೇರುತ್ತಿದ್ದರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT