ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣಿಗಳ ಐಫೋನ್ ಹ್ಯಾಕ್ ವಿಚಾರವಾಗಿ ಸರ್ಕಾರವು ಆ್ಯಪಲ್ ಸಹಾಯ ಕೇಳಿಲ್ಲ: ಸಚಿವ

Published 29 ಡಿಸೆಂಬರ್ 2023, 3:01 IST
Last Updated 29 ಡಿಸೆಂಬರ್ 2023, 3:01 IST
ಅಕ್ಷರ ಗಾತ್ರ

ನವದೆಹಲಿ: ವಿರೋಧಪಕ್ಷಗಳ ಕೆಲವು ನಾಯಕರ ಐಫೋನ್‌ಗಳಿಗೆ ಬಂದ ಹ್ಯಾಕ್ ಎಚ್ಚರಿಕೆಗೆ ಸಂಬಂಧಿಸಿದಂತೆ ಉಂಟಾಗಬಹುದಾದ ರಾಜಕೀಯ ಪರಿಣಾಮಗಳನ್ನು 'ಮೆತ್ತಗಾಗಿಸಲು' ಸರ್ಕಾರ ಪ್ರಯತ್ನಿಸಿತ್ತು ಎಂದು ಅಮೆರಿಕದ ಪತ್ರಿಕೆ ಮಾಡಿರುವ ವರದಿ 'ಸಂಪೂರ್ಣ ಕಟ್ಟುಕತೆ' ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಖಾತೆ ರಾಜ್ಯ ಸಚಿವ ರಾಜೀವ್‌ ಅವರು, ವರದಿಯು 'ಅರ್ಧ ಸತ್ಯ' ಮತ್ತು 'ಸಂಪೂರ್ಣ ಕಟ್ಟುಕತೆ' ಎಂದು ಹೇಳಿದ್ದಾರೆ. ಹಾಗೆಯೇ, ಬಳಕೆದಾರರಿಗೆ ಅಕ್ಟೋಬರ್‌ 31ರಂದು ಬಂದ ಹ್ಯಾಕ್‌ ಎಚ್ಚರಿಕೆ ಸಂದೇಶಗಳಿಗೆ ಪ್ರಕ್ರಿಯಿಸುವುದು ಆ್ಯಪಲ್‌ಗೆ ಬಿಟ್ಟದ್ದು ಎಂದು ಟ್ವೀಟ್‌ ಮಾಡಿದ್ದಾರೆ.

ಮುಂದುವರಿದು, 'ಆ್ಯಪಲ್‌ ಕಂಪನಿಯು ಸಚಿವಾಲಯದ ತುರ್ತು ಪ್ರತಿಕ್ರಿಯೆ ತಂಡದ ವಿಚಾರಣೆಯಲ್ಲಿ ಭಾಗಿಯಾಗಿದೆ. ತನಿಖೆ ಮುಂದುವರಿದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಇಲಾಖೆ ಮತ್ತು ನನ್ನ ಅಭಿಪ್ರಾಯ ಸ್ಥಿರ ಹಾಗೂ ಸ್ಪಷ್ಟವಾಗಿದೆ. ತಮ್ಮ ಸಾಧನಗಳು ದುರ್ಬಲವಾಗಿವೆಯೇ ಹಾಗೂ ಇಂತಹ ಎಚ್ಚರಿಕೆಗಳು ಏಕೆ ಬಂದವು ಎಂಬುದನ್ನು ವಿವರಿಸುವುದು ಆ್ಯಪಲ್‌ಗೆ ಬಿಟ್ಟ ವಿಚಾರ' ಎಂದೂ ತಿಳಿಸಿದ್ದಾರೆ.

ವಿರೋಧ ಪಕ್ಷಗಳ ಕೆಲವು ನಾಯಕರ ಐಫೋನ್‌ಗಳಿಗೆ ಅಕ್ಟೋಬರ್‌ನಲ್ಲಿ ಹ್ಯಾಕ್‌ ಎಚ್ಚರಿಕೆ ಸಂದೇಶ ಬಂದಿದ್ದವು. ಸರ್ಕಾರಿ ಪ್ರಾಯೋಜಿತ ಹ್ಯಾಕರ್‌ಗಳು ತಮ್ಮ ಮೊಬೈಲ್‌ಗಳನ್ನು ಹ್ಯಾಕ್‌ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ವಿಪಕ್ಷ ನಾಯಕರು ಆರೋಪಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಎದುರಾಗಬಹುದಾದ ರಾಜಕೀಯ ಪರಿಣಾಣಗಳನ್ನು ಮೃದುಗೊಳಿಸಲು ಪ್ರಯತ್ನಿಸಿದ್ದ ಭಾರತದ ಅಧಿಕಾರಿಗಳು, ಆ್ಯಪಲ್‌ ಕಂಪನಿಯ ನೆರವು ಕೋರಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ 'ವಾಷಿಂಗ್ಟನ್‌ ಪೋಸ್ಟ್‌' ವರದಿ ಮಾಡಿತ್ತು. ಇದಕ್ಕೆ ರಾಜೀವ್‌ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT