ಸೀತಾಪುರ, ಉತ್ತರ ಪ್ರದೇಶ (ಪಿಟಿಐ): ನಾಯಿಗೆ ಕೋಲಿನಿಂದ ತೀವ್ರವಾಗಿ ಬಾರಿಸಿ, ಒಂದು ಕಾಲು ಮುರಿದ ಆರೋಪದ ಮೇಲೆ ಪೊಲೀಸರು ವ್ಯಕ್ತಿಯೊಬ್ಬನನ್ನು ಇಲ್ಲಿ ಬಂಧಿಸಿದ್ದಾರೆ.
ಸಂಸದೆ, ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಮೇನಕಾ ಗಾಂಧಿ ಅವರು, ‘ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿ, ನನ್ನ ಪರವಾಗಿ ಆತನ ಕೆನ್ನೆಗೆ ಬಾರಿಸಬೇಕು’ ಎಂದು ಪೊಲೀಸರಿಗೆ ಸೂಚಿಸಿದ್ದಾರೆ ಎನ್ನಲಾದ ಆಡಿಯೊ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದರ ಹಿಂದೆಯೇ ವ್ಯಕ್ತಿಯ ಬಂಧನವಾಗಿದೆ.
ಆದರೆ, ಆಡಿಯೊದ ವಿಶ್ವಾಸಾರ್ಹತೆ ಖಚಿತವಾಗಿಲ್ಲ. ಕೊತ್ವಾಲಿ ಠಾಣೆಯ ಅಧಿಕಾರಿ ಟಿ.ಪಿ.ಸಿಂಗ್ ಅವರು, ‘ಸ್ಥಳೀಯ ವ್ಯಕ್ತಿಯೊಬ್ಬರು ಭಾನುವಾರ ಠಾಣೆಗೆ ಬಂದಿದ್ದು, ಮೇನಕಾ ಗಾಂಧಿ ಮಾತನಾಡುತ್ತಾರೆ ಎಂದು ಮೊಬೈಲ್ ಫೋನ್ ನೀಡಿದ್ದ’ ಎಂದು ತಿಳಿಸಿದ್ದಾರೆ.
ಕರೆ ಮಾಡಿದವರು ‘ನಾಯಿಗೆ ಹೊಡೆದು ಕಾಲು ಮುರಿದಿರುವ ಗ್ವಾಲ್ ಮಂಡಿಯ ರಮೇಶ್ ವರ್ಮಾ ಅವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದ್ದರು. ಘಟನೆ ಜೂನ್ 18ರಂದು ನಡೆದಿದ್ದು, 20ರಂದು ಪ್ರಾಣಿಗಳ ಹಕ್ಕುಗಳ ಹೋರಾಟಗಾರ ಮೀರಜ್ ಅಹ್ಮದ್ ದೂರು ನೀಡಿದ್ದಾರೆ ಎಂದು ತಿಳಿಸಿದರು.
ದೂರು ದಾಖಲಾದ ಕೆಲಹೊತ್ತಿನ ನಂತರ ‘ಮೇನಕಾ ಗಾಂಧಿ ಮಾತನಾಡಿದರು’ ಎನ್ನಲಾದ ಕರೆ ಬಂದಿದೆ. ಸದ್ಯ, ಆರೋಪಿಯನ್ನು ಬಂಧಿಸಲಾಗಿದ್ದು, ನಾಯಿಗೆ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಕಲ್ಪಿಸಲಾಗಿದೆ.