ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಬರೇಲಿ: ಕಾಂಗ್ರೆಸ್‌ಗೆ ಅಗ್ನಿಪರೀಕ್ಷೆ

ಉತ್ತರ ಪ್ರದೇಶ ಚುನಾವಣೆ l ಹಳೆಯ ತಲೆಮಾರಿನ ನಿಷ್ಠೆ ಅಚಲ l ಹೊಸ ತಲೆಮಾರಿನ ಯೋಚನೆ ಭಿನ್ನ
Last Updated 20 ಫೆಬ್ರುವರಿ 2022, 20:45 IST
ಅಕ್ಷರ ಗಾತ್ರ

ರಾಯಬರೇಲಿ: ಕಾಂಗ್ರೆಸ್‌ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿರುವ ರಾಯಬರೇಲಿ ಕ್ಷೇತ್ರದ 70 ವರ್ಷದ ಸಂತ ರಾಮ್‌ ಅವರದ್ದು ಕಾಂಗ್ರೆಸ್‌ ಪಕ್ಷಕ್ಕೆ ಅಚಲ ನಿಷ್ಠೆ. 40 ವರ್ಷಗಳಿಂದ ಕಾಂಗ್ರೆಸ್‌ ಬೆಂಬಲಿಗರಾಗಿರುವ ಅವರು ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಗೇ ಮತ ಹಾಕುವುದಾಗಿ ಹೇಳುತ್ತಾರೆ. ಆದರೆ, ಹೊಸ ತಲೆಮಾರು ಹೀಗೆ ಯೋಚಿಸುತ್ತಿಲ್ಲ. ಸಂತ ರಾಮ್‌ ಅವರ ಕುಟುಂಬದಲ್ಲಿಯೂ ಯುವ ಜನರು ಕಾಂಗ್ರೆಸ್‌ ಜತೆಗೆ ಇಲ್ಲ.

‘ನಾನು ಯಾವಾಗಲೂ ಕಾಂಗ್ರೆಸ್‌ಗೆ ಮತ ಹಾಕಿದವನು... ಅಭ್ಯರ್ಥಿ ಯಾರು ಎಂಬುದು ನನಗೆ ಮುಖ್ಯವೇ ಅಲ್ಲ... ಗಾಂಧಿ ಕುಟುಂಬದವರು ಈ ಪ್ರದೇಶದ ಅಭಿವೃದ್ಧಿಗಾಗಿ ಬಹಳ ಕೆಲಸ ಮಾಡಿದ್ದಾರೆ. ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ’ ಎಂದು ಸಂತ ರಾಮ್‌ ಹೇಳುತ್ತಾರೆ.

ಹಿರಿಯರಲ್ಲಿ ಹಲವರು ಈ ಅಭಿಪ್ರಾಯಕ್ಕೆ ಸಹಮತ ಸೂಚಿಸುತ್ತಾರೆ. ಆದರೆ, ಯುವ ತಲೆಮಾರು ಜಾತಿ ಮತ್ತು ಕೋಮು ನೆಲೆಯಲ್ಲಿ ವಿಭಜನೆ ಆಗಿದೆ. ತಮ್ಮ ಆದ್ಯತೆ ಏನು ಎಂಬುದನ್ನು ಹೇಳಲು ಯುವ ತಲೆಮಾರಿಗೆ ಹಿಂಜರಿಕೆ ಏನೂ ಇಲ್ಲ.

2019ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷವು ಗೆದ್ದ ಏಕೈಕ ಕ್ಷೇತ್ರ ರಾಯಬರೇಲಿ. ಭದ್ರಕೋಟೆ ಎನಿಸಿಕೊಂಡಿದ್ದ ಅಮೇಠಿಯನ್ನು ಉಳಿಸಿಕೊಳ್ಳಲು ಕಾಂಗ್ರೆಸ್‌ಗೆ ಸಾಧ್ಯವಾಗಿರಲಿಲ್ಲ. ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಅವರು ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಇಲ್ಲಿ ಸೋತಿದ್ದರು.

ಹಳೆಯ ತಲೆಮಾರಿನ ಕಾಂಗ್ರೆಸ್‌ ನಿಷ್ಠೆಯ ಪರೀಕ್ಷೆ ಈ ಬಾರಿಯ ಚುನಾವಣೆಯಲ್ಲಿ ಆಗಲಿದೆ. ಹಳೆಯ ನಿಷ್ಠಾವಂತರು ಮತ್ತು ಪಕ್ಷ ತೊರೆದು ಹೋಗಿ ಪ್ರತಿಸ್ಪರ್ಧಿ ಪಕ್ಷಗಳ ಅಭ್ಯರ್ಥಿಗಳಾಗಿರುವವರ ನಡುವೆ ಈ ಬಾರಿಯ ಹೋರಾಟ ನಡೆಯಲಿದೆ. ಈ ಹೋರಾಟದಲ್ಲಿ ಯಾರ ಕೈ ಮೇಲಾಗುವುದೋ ಅದರ ಮೇಲೆ ಕಾಂಗ್ರೆಸ್‌ ತನ್ನ ನೆಲೆಯನ್ನು ಮತ್ತೆ ಪಡೆದುಕೊಳ್ಳುವುದು ಅವಲಂಬಿತವಾಗಿದೆ.

2017ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಇಲ್ಲಿನ ಎರಡು ಕ್ಷೇತ್ರಗಳಲ್ಲಿ ಗೆದ್ದಿತ್ತು. ರಾಯಬರೇಲಿ ಸದರ್‌ ಕ್ಷೇತ್ರದಿಂದ ಅದಿತಿ ಸಿಂಗ್‌ ಮತ್ತು ಹರಚಂದನಪುರ ಕ್ಷೇತ್ರದಿಂದ ರಾಕೇಶ್‌ ಪ್ರತಾಪ್‌ ಗೆದ್ದಿದ್ದರು. ಬಳಿಕ, ಈ ಇಬ್ಬರೂ ನಿಷ್ಠೆ ಬದಲಿಸಿ ಬಿಜೆಪಿ ಸೇರಿದರು. ಅವರು ಈ ಹಿಂದೆ ಪ್ರತಿನಿಧಿಸಿದ್ದ ಅವೇ ಕ್ಷೇತ್ರಗಳಿಂದ ಬಿಜೆಪಿ ಟಿಕೆಟ್‌ನಲ್ಲಿ ಕಣಕ್ಕೆ ಇಳಿದಿದ್ದಾರೆ.

ತಳಮಟ್ಟದ ವಾಸ್ತವದ ಜತೆಗಿನ ಸಂಪರ್ಕವನ್ನೇ ಕಾಂಗ್ರೆಸ್‌ ಕಳೆದುಕೊಂಡಿದೆ. ಹಳೆಯ ತಲೆಮಾರಿನವರ ಮತಗಳನ್ನು ಕಾಂಗ್ರೆಸ್‌ ಪಕ್ಷವು ಅವಲಂಬಿಸಿದೆ ಎಂಬುದು ರಾಯಬರೇಲಿ ಜಿಲ್ಲೆಯ ಹಲವರ ಅಭಿಪ್ರಾಯವಾಗಿದೆ. ಸೋನಿಯಾ ಗಾಂಧಿ ಅವರು ಕಳೆದ ಮೂರು ವರ್ಷಗಳಲ್ಲಿ ತಮ್ಮ ಕ್ಷೇತ್ರಕ್ಕೆ ಭೇಟಿಯನ್ನೇ ಕೊಟ್ಟಿಲ್ಲ. ಅನಾರೋಗ್ಯ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಸೋನಿಯಾ ಅವರ ಅನುಪಸ್ಥಿತಿಯಲ್ಲಿ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕ್ಷೇತ್ರದ ಹೊಣೆ ವಹಿಸಿಕೊಂಡಿದ್ದಾರೆ.

ಅದಿತಿ ಸಿಂಗ್‌ ಅವರು ಪ್ರಿಯಾಂಕಾ ಅವರಿಗೆ ಬಹಳ ಆಪ್ತರಾಗಿದ್ದಾರೆ ಎಂದು ಹಿಂದೆ ಹೇಳಲಾಗುತ್ತಿತ್ತು. ಆದರೆ, ಈಗ ಅದಿತಿ ಅವರು ಕಾಂಗ್ರೆಸ್‌ನ ತೀಕ್ಷ್ಣ ಟೀಕಾಕಾರರಲ್ಲಿ ಒಬ್ಬರಾಗಿದ್ದಾರೆ. ಪಕ್ಷ ತೊರೆದ ಬಳಿಕ ಅವರು ಕಾಂಗ್ರೆಸ್‌ ವಿರುದ್ಧ ಹರಿಹಾಯುತ್ತಲೇ ಇದ್ದಾರೆ. ಅದಿತಿ ಅವರ ತಂದೆ ಅಖಿಲೇಶ್‌ ಸಿಂಗ್‌ ಅವರು ರಾಯಬರೇಲಿ ಸದರ್‌ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಹಲವು ಬಾರಿ ಗೆದ್ದಿದ್ದರು. ‘ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷವು ಖಾತೆ ತೆರೆಯವುದೇ ಸಾಧ್ಯವಾಗುವುದಿಲ್ಲ’ ಎಂದು ಅದಿತಿ ಹೇಳುತ್ತಾರೆ.

ಪಂಜಾಬ್‌ನ ಕಾಂಗ್ರೆಸ್‌ ಶಾಸಕ ಅಂಗದ್‌ ಸಿಂಗ್‌ ಅವರು ಅದಿತಿ ಅವರ ಗಂಡ. ‘ಪ್ರಿಯಾಂಕಾ ಅವರ ಸೂಚನೆಯಂತೆ ಅಂಗದ್‌ ಅವರಿಗೆ ಈ ಬಾರಿ ಟಿಕೆಟ್‌ ನಿರಾಕರಿಸಲಾಗಿದೆ. ಪ್ರಿಯಾಂಕಾ ಅವರು ನನ್ನ ಮೇಲೆ ಸೇಡು ತೀರಿಸಿಕೊಂಡಿದ್ದಾರೆ’ ಎಂದು ಅದಿತಿ ಹೇಳಿದ್ದಾರೆ.

ಪ್ರಿಯಾಂಕಾ ಅವರು ರಾಯಬರೇಲಿಯಲ್ಲಿ ಶನಿವಾರ ಪ್ರಚಾರ ಮಾಡಿದ್ದಾರೆ. ಸಾಮಾನ್ಯ ಜನರ ಬೆಂಬಲ ಇರುವುದರಿಂದ ಪಕ್ಷವು ಈ ಬಾರಿ ಉತ್ತಮ ಸಾಧನೆ ಮಾಡಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ‘ಅಭಿವೃದ್ಧಿಯ ವಿಚಾರದಲ್ಲಿ ಜನರಿಗೆ ತೋರಿಸಲು ನಮ್ಮ ಪ್ರತಿಸ್ಪರ್ಧಿಗಳ ಬಳಿ ಏನೂ ಇಲ್ಲ. ಹಾಗಾಗಿಯೇ ಅವರು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ’ ಎಂದು ಪ್ರಿಯಾಂಕಾ ಹೇಳಿದ್ದಾರೆ.

ರಾಯಬರೇಲಿಯಲ್ಲಿ ನಾಲ್ಕನೇ ಹಂತದಲ್ಲಿ ಬುಧವಾರ ಮತದಾನ ನಡೆಯಲಿದೆ. ಪಕ್ಷಾಂತರಿಗಳು ಮತ್ತು ಹೊಸಮುಖಗಳ ಮೂಲಕ ಪಕ್ಷದ ನೆಲೆಯನ್ನು ಗಟ್ಟಿ ಮಾಡಲು ಪ್ರಿಯಾಂಕಾ ಅವರಿಗೆ ಸಾಧ್ಯ ಆಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಹೊಸ ಮುಖಗಳಿಗೆ ಟಿಕೆಟ್‌

ಹಲವರು ಪಕ್ಷಾಂತರ ಮಾಡಿದ್ದಾರೆ ಮತ್ತು ಹಲವು ಹಿರಿಯ ಮುಖಂಡರು ಸ್ಪರ್ಧಿಸಲು ನಿರಾಕರಿಸಿದ್ದಾರೆ. ಹೀಗಾಗಿ, ಹೊಸ ಅಭ್ಯರ್ಥಿಗಳನ್ನು ಶೋಧಿಸುವ ಅನಿವಾರ್ಯವೂ ಕಾಂಗ್ರೆಸ್‌ಗೆ ಎದುರಾಗಿತ್ತು. ಹೊಸ ಮುಖಗಳನ್ನು ಕಣಕ್ಕೆ ಇಳಿಸಲಾಗಿದೆ. ಪಕ್ಷಕ್ಕೆ ಕೆಲವೇ ದಿನಗಳ ಹಿಂದೆ ಸೇರಿದವರಿಗೂ ಟಿಕೆಟ್‌ ನೀಡಲಾಗಿದೆ. ಹರಚಂದನಪುರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ವಿಕ್ರಮ್‌ ಸಿಂಗ್ ಅವರು ಕೆಲವು ದಿನಗಳ ಹಿಂದಿನವರೆಗೆ ಸಮಾಜವಾದಿ (ಎಸ್‌ಪಿ) ಪಕ್ಷದಲ್ಲಿ ಇದ್ದರು. ಸರೇನಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಸುಧಾ ದ್ವಿವೇದಿ ಅವರು ಬಿಜೆಪಿಯಲ್ಲಿ ಇದ್ದವರು. ಮೂಲ ಪಕ್ಷದಲ್ಲಿ ಟಿಕೆಟ್‌ ಸಿಕ್ಕಿಲ್ಲ ಎಂಬ ಕಾರಣಕ್ಕೆ ಇವರು ಕಾಂಗ್ರೆಸ್‌ ಸೇರಿದ್ದಾರೆ.

ಪ್ರತಿಸ್ಪರ್ಧಿಗಳು ಸಕ್ರಿಯ

‘ಕಾಂಗ್ರೆಸ್‌ ಪಕ್ಷವು 2014ರ ಬಳಿಕ ಕಾರ್ಯಕರ್ತರು ಮತ್ತು ಮುಖಂಡರನ್ನು ಕಳೆದುಕೊಳ್ಳುತ್ತಲೇ ಬಂದಿದೆ. ಬಿಜೆಪಿ ಮುಖಂಡರು ಇಲ್ಲಿ ಬಹಳ ಸಕ್ರಿಯವಾಗಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಕಾಂಗ್ರೆಸ್‌ನ ಹಲವಾರು ಮುಖಂಡರು ಪಕ್ಷ ತ್ಯಜಿಸಿ ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ’ ಎಂದು ಸ್ಥಳೀಯ ನಿವಾಸಿ ಮನೀಶ್‌ ತ್ರಿಪಾಠಿ ಹೇಳುತ್ತಾರೆ.

ಎಸ್‌ಪಿ ಮತ್ತು ಬಿಎಸ್‌ಪಿ ಕೂಡ ರಾಯಬರೇಲಿಯಲ್ಲಿ ಸ್ಥಳೀಯ ಮುಖಂಡರನ್ನು ಬೆಳೆಸಿವೆ. ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದು ಇತ್ತೀಚೆಗೆ ಎಸ್‌ಪಿ ಸೇರಿರುವ ಸ್ವಾಮಿ ಪ್ರಸಾದ್‌ ಮೌರ್ಯ ಅವರ ಮಗ ರಾಯಬರೇಲಿ ಕ್ಷೇತ್ರದಿಂದ ಎಸ್‌ಪಿ ಟಿಕೆಟ್‌ನಲ್ಲಿ ಒಂದು ಬಾರಿ ಸ್ಪರ್ಧಿಸಿದ್ದರು. ಒಂದು ಬಾರಿ ಬಿಜೆಪಿ ಟಕೆಟ್‌ನಲ್ಲಿಯೂ ಸ್ಪರ್ಧಿಸಿದ್ದರು. ಎರಡೂ ಬಾರಿ ಅವರು ಎಸ್‌ಪಿ ಅಭ್ಯರ್ಥಿ ಮನೋಜ್‌ ಪಾಂಡೆ ಎದುರು ಸೋತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT