ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಂಗದಿಂದ ಭರವಸೆ ಬೆಳಕು: ಕಾರ್ಮಿಕರು ಸುರಕ್ಷಿತ; ಕ್ಯಾಮೆರಾದಲ್ಲಿ ದೃಶ್ಯ ಸೆರೆ

Published 22 ನವೆಂಬರ್ 2023, 0:30 IST
Last Updated 22 ನವೆಂಬರ್ 2023, 0:30 IST
ಅಕ್ಷರ ಗಾತ್ರ

ಉತ್ತರಕಾಶಿ (ಉತ್ತರಾಖಂಡ): ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿಕೊಂಡಿರುವ 41 ಮಂದಿ ಕಾರ್ಮಿಕರ ದೃಶ್ಯಗಳನ್ನು ಎಂಡೊಸ್ಕೋಪಿಕ್ ಕ್ಯಾಮೆರಾ ಸೆರೆ ಹಿಡಿದಿದೆ. ಈ ಕಾರ್ಮಿಕರು ಸುರಂಗದಲ್ಲಿ ಸಿಲುಕಿದ ನಂತರದಲ್ಲಿ ದೊರೆತಿರುವ ಮೊದಲ ದೃಶ್ಯಾವಳಿ ಇದು.

ಕಾರ್ಮಿಕರ ಸುರಕ್ಷತೆಯ ಬಗ್ಗೆ ಆತಂಕಗೊಂಡಿರುವ ಅವರ ಹತ್ತಿರದ ಸಂಬಂಧಿಗಳಲ್ಲಿ ಇದು ಆಶಾಭಾವನೆ
ಯನ್ನು ಮೂಡಿಸಿದೆ. ಕಾರ್ಮಿಕರ ರಕ್ಷಣೆಗೆ ಹಲವು ಆಯಾಮಗಳಿಂದ ನಡೆಯುತ್ತಿರುವ ಕಾರ್ಯಗಳು 10ನೆಯ ದಿನ ಪ್ರವೇಶಿಸಿವೆ. ಸುರಂಗದ ಒಳಕ್ಕೆ ಸೋಮವಾರ ತೂರಿಸಿರುವ ಆರು ಇಂಚು ವ್ಯಾಸದ ಪೈಪ್ ಮೂಲಕ ಈ ಕ್ಯಾಮೆರಾ ಕಳುಹಿಸಲಾಗಿತ್ತು.

ಹಳದಿ ಮತ್ತು ಬಿಳಿ ಬಣ್ಣದ ಹೆಲ್ಮೆಟ್ ಧರಿಸಿರುವ ಕಾರ್ಮಿಕರು, ಪೈಪ್ ಮೂಲಕ ಕಳುಹಿಸಿದ ಆಹಾರ ಸ್ವೀಕರಿಸುತ್ತಿರುವುದನ್ನು ಹಾಗೂ ಪರಸ್ಪರ ಮಾತಿನಲ್ಲಿ ತೊಡಗಿರುವುದನ್ನು ಕ್ಯಾಮೆರಾ ಸೆರೆ
ಹಿಡಿದಿದೆ. ಕಾರ್ಮಿಕರ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸಂಸ್ಥೆಗಳು ಈ ದೃಶ್ಯಾವಳಿಯನ್ನು ಬಿಡುಗಡೆ ಮಾಡಿವೆ.

ಕಾರ್ಮಿಕರ ಜೊತೆ ಮಾತುಕತೆ ನಡೆಸಲು ಈ ಮೊದಲು ನಾಲ್ಕು ಇಂಚು ವ್ಯಾಸದ ಪೈಪ್ ಬಳಸಲಾಗಿತ್ತು. ಈಗ ಅಳವಡಿಸಿರುವ ಆರು ಇಂಚು ವ್ಯಾಸದ ಪೈಪ್, ರಕ್ಷಣಾ ಕಾರ್ಯದಲ್ಲಿ ತೊಡಗಿರುವವರಿಗೂ ಹೆಚ್ಚಿನ ಸ್ಥೈರ್ಯ ತಂದುಕೊಟ್ಟಿದೆ. ಈಗ ಕಾರ್ಮಿಕರ ಜೊತೆ ಸಂವಹನ ಹೆಚ್ಚು ಚೆನ್ನಾಗಿ ಆಗುತ್ತಿದೆ, ಅವರಿಗೆ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಕಳುಹಿಸಲು ಸಾಧ್ಯವಾಗುತ್ತಿದೆ.

ಸುನಿತಾ ಎನ್ನುವವರ ಸಂಬಂಧಿ ಸುರಂಗದಲ್ಲಿ ಸಿಲುಕಿಕೊಂಡಿದ್ದಾರೆ. ‘ನಾನು ಇಂದು ಬೆಳಿಗ್ಗೆ ಅವರ ಜೊತೆ ಮಾತನಾಡಿದೆ’ ಎಂದು ಸುನಿತಾ ತಿಳಿಸಿದ್ದಾರೆ. ದೊಡ್ಡ ಗಾತ್ರದ ಪೈಪ್ ಮೂಲಕ ಅವರಿಗೆ ಕಿತ್ತಳೆ ಹಣ್ಣು ಕೊಡಲಾಗಿದೆ.

ದಾಲಿಯಾ, ಖಿಚಡಿ, ಹೆಚ್ಚಿದ ಸೇಬು ಹಣ್ಣು, ಬಾಳೆಹಣ್ಣನ್ನು ಕಾರ್ಮಿಕರಿಗೆ ಈಗ ಕಳುಹಿಸಬಹುದು. ಅಲ್ಲದೆ, ಮೊಬೈಲ್ ಫೋನ್ ಹಾಗೂ ಚಾರ್ಜರ್‌ಗಳನ್ನು ಕೂಡ ಅವರಿಗೆ ಕಳುಹಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಹೊಸದಾಗಿ ತೂರಿಸಲಾಗಿರುವ ಆರು ಇಂಚು ವ್ಯಾಸದ ಪೈಪ್‌, ಕಾರ್ಮಿಕರ ಜೊತೆ ಸಂವಹನ ನಡೆಸುವುದನ್ನು ಸುಲಭವಾಗಿಸಿದೆ. ಹೊಸ ಪೈಪ್‌ ಮೂಲಕ ತಮಗೆ ಕಾರ್ಮಿಕರ ಮಾತುಗಳು ಸ್ಪಷ್ಟವಾಗಿ ಕೇಳಿಸುತ್ತಿವೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. 

‘ಹೊಸದಾಗಿ ಅಳವಡಿಸಲಾಗಿರುವ ಪೈಪ್‌ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಕಳುಹಿಸಲು ಸಾಧ್ಯವಾಗುತ್ತಿದೆ. ಇದು ಒಳ್ಳೆಯದು. ಆದರೆ, ಪರಿಸ್ಥಿತಿ ಮೊದಲಿನಂತೆಯೇ ಇದೆ. ಕಾರ್ಮಿಕರನ್ನು ರಕ್ಷಿಸುವ ಸವಾಲು ಹಾಗೆಯೇ ಉಳಿದಿದೆ’ ಎಂದು ಜೈಮಲ್ ಸಿಂಗ್ ನೇಗಿ ಎಂಬವರು ಹೇಳಿದರು. ಅವರ ಸಹೋದರ ಗಬ್ಬರ್ ಸಿಂಗ್ ಅವರು ಸುರಂಗದಲ್ಲಿ ಸಿಲುಕಿದ್ದಾರೆ.

ಮಂಜಿತ್ ಎನ್ನುವವರ ತಂದೆ ಚೌಧರಿ ಅವರು ತಮಗೆ ಮಗನ ಜೊತೆ ಮಾತನಾಡಲು ಅವಕಾಶ ಸಿಗುತ್ತಿಲ್ಲ ಎಂದು ದೂರಿದ್ದಾರೆ. ‘ನನಗೆ ಒಂದು ಬಾರಿ ಮಾತ್ರ ಮಂಜಿತ್ ಜೊತೆ ಮಾತನಾಡಲು ಸಾಧ್ಯವಾಗಿದೆ. ಈಗ ನನಗೆ ಒಳಗೆ ಹೋಗಿ ಅವನ ಜೊತೆ ಮಾತನಾಡಲು ಅವಕಾಶ ನೀಡುತ್ತಿಲ್ಲ’ ಎಂದು ಚೌಧರಿ ದೂರಿದ್ದಾರೆ.

ಪ್ರಧಾನಿ ಮಾತುಕತೆ:

ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಜೊತೆ ಮಂಗಳವಾರ ಮಾತುಕತೆ ನಡೆಸಿದ್ದಾರೆ, ಕಾರ್ಮಿಕರ ರಕ್ಷಣಾ ಕಾರ್ಯದಲ್ಲಿನ ಪ್ರಗತಿ ಬಗ್ಗೆ ವಿಚಾರಿಸಿದ್ದಾರೆ. ಪ್ರಧಾನಿ ಮೋದಿ ಅವರು ಸೋಮವಾರ ಕೂಡ ಧಾಮಿ ಅವರ ಜೊತೆ ಮಾತುಕತೆ ನಡೆಸಿದ್ದರು.

‘ಎಲ್ಲ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರುವುದು ನಮ್ಮ ಆದ್ಯತೆಯ ಕೆಲಸ ಎಂದು ಪ್ರಧಾನಿಯವರು ಹೇಳಿದ್ದಾರೆ’ ಎಂದು ಧಾಮಿ ಅವರು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.

ಅಡ್ಡವಾಗಿ ಸುರಂಗ ಕೊರೆಯುವುದಕ್ಕೆ ಆದ್ಯತೆ

ನವದೆಹಲಿ (ಪಿಟಿಐ): ಸುರಂಗದಲ್ಲಿ ಸಿಲುಕಿರುವ ಎಲ್ಲ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ತರಲು ಅಡ್ಡವಾಗಿ ಸುರಂಗ ಕೊರೆಯುವುದಕ್ಕೆ ಆದ್ಯತೆ ನೀಡಲಾಗಿದೆ, ಲಂಬವಾಗಿ ಸುರಂಗ ಕೊರೆಯುವುದು ಎರಡನೆಯ ಆಯ್ಕೆಯಾಗಿರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಕ್ಷಣಾ ಕಾರ್ಯಗಳ ಬಗ್ಗೆ ಸುದ್ದಿಗಾರರಿಗೆ ವಿವರ ನೀಡಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್‌ಡಿಎಂಎ) ಸದಸ್ಯ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತ್ತಾ ಹಸ್ನೈನ್ ಅವರು, ಕಾರ್ಮಿಕರ ರಕ್ಷಣೆಗೆ ಐದು ಕಡೆಗಳಿಂದ ಏಕಕಾಲಕ್ಕೆ ಪ್ರಯತ್ನಗಳು ನಡೆದಿವೆ ಎಂದು ತಿಳಿಸಿದರು.

ನೆಲದ ಅಡಿಯಲ್ಲಿನ ಕಲ್ಲುಗಳು ಲಂಬವಾಗಿ ಸುರಂಗ ಕೊರೆಯುವುದಕ್ಕೆ ಅಡ್ಡಿಯಾಗಿವೆ. ಹೀಗಾಗಿ ಅಡ್ಡವಾಗಿ ಸುರಂಗ ಕೊರೆಯುವ ಕೆಲಸಕ್ಕೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು. ‘ಲಂಬವಾಗಿ ಸುರಂಗ ಕೊರೆಯುವುದು ಈಗಿನ ‍ಪರಿಸ್ಥಿತಿಯಲ್ಲಿ ಎರಡನೆಯ ಅತ್ಯುತ್ತಮ ಆಯ್ಕೆ’ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಕಾರ್ಯದರ್ಶಿ ಅನುರಾಗ್ ಜೈನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT