ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಲ್ಕ್ಯಾರಾ ಸುರಂಗ: ಕಾರ್ಮಿಕರ ಒತ್ತಡ ನಿವಾರಣೆಗೆ ಲೂಡೊ, ಚೆಸ್‌ ಬೋರ್ಡ್‌

ಸುರಂಗದೊಳಗೆ ನಿತ್ಯ ವ್ಯಾಯಾಮ, ಯೋಗ ಮಾಡುತ್ತಿರುವ ಶ್ರಮಜೀವಿಗಳು
Published 24 ನವೆಂಬರ್ 2023, 14:10 IST
Last Updated 24 ನವೆಂಬರ್ 2023, 14:10 IST
ಅಕ್ಷರ ಗಾತ್ರ

ಉತ್ತರಕಾಶಿ/ಡೆಹ್ರಾಡೂನ್: ಸಿಲ್ಕ್ಯಾರಾ ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ವಿಳಂಬವಾದ ಕಾರಣ ಅವರ ಒತ್ತಡ ನಿವಾರಣೆಗೆ ಲೂಡೊ, ಚೆಸ್‌ ಬೋರ್ಡ್‌, ಮತ್ತು ಇಸ್ಪೀಟ್ ಎಲೆ ಕಳುಹಿಸಲು ರಕ್ಷಣಾ ಸಿಬ್ಬಂದಿ ಯೋಜಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೊರೆಯುವ ಯಂತ್ರವನ್ನು ಇರಿಸಿರುವ ಜಾಗದಲ್ಲಿ ಗುರುವಾರ ರಾತ್ರಿ ಬಿರುಕು ಉಂಟಾದ ಕಾರಣದಿಂದಾಗಿ ಇಡೀ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಕಾರ್ಯಾಚರಣೆ ಆರಂಭವಾದಾಗಿನಿಂದ ಕೊರೆಯುವ ಯಂತ್ರ ನಿಲ್ಲಿಸಿರುವುದು ಇದು ಮೂರನೇ ಬಾರಿ. 

ರಕ್ಷಣಾ ಕಾರ್ಯಾಚರಣೆ 13ನೇ ದಿನ ಪ್ರವೇಶಿಸಿದ್ದು, ಕಾರ್ಮಿಕರು ಹೊರ ಜಗತ್ತಿನ ಬೆಳಕು ನೋಡಲು ಇನ್ನೂ ಕೆಲವು ತಾಸು ಬೇಕಾಗಬಹುದು. 

ಘಟನಾ ಸ್ಥಳದಲ್ಲಿರುವ ಮನೋವೈದ್ಯ ಡಾ.ರೋಹಿತ್‌ ಗೊಂಡ್ವಾಲ್, ‘ನಾವು  ಲೂಡೊ, ಚೆಸ್ ಬೋರ್ಡ್‌ ಮತ್ತು ಇಸ್ಪೀಟ್ ಎಲೆಗಳನ್ನು ಒದಗಿಸಲು ಯೋಜಿಸುತ್ತಿದ್ದೇವೆ. ಕಾರ್ಯಾಚರಣೆ ವಿಳಂಬವಾಗುತ್ತಿದೆ. ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ. ಎಲ್ಲಾ ಕಾರ್ಮಿಕರು ಆರೋಗ್ಯವಾಗಿದ್ದಾರೆ. ಆದರೆ, ಅವರು ಆರೋಗ್ಯವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರಬೇಕು‘ ಎಂದು ಹೇಳಿದರು. 

‘ಒತ್ತಡ ನಿವಾರಿಸಲು ಅವರು ಕಳ್ಳ–ಪೊಲೀಸ್‌ ಆಟ, ಯೋಗ ಹಾಗೂ ನಿತ್ಯ ವ್ಯಾಯಾಮ ಮಾಡುವುದಾಗಿ ನಮಗೆ ತಿಳಿಸಿದ್ದಾರೆ‘ ಎಂದರು. 

ಕಾರ್ಮಿಕರ ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಿದ ಮತ್ತೊಬ್ಬ ತಜ್ಞ ವೈದ್ಯ, ‘ಅವರಲ್ಲಿ ನೈತಿಕ ಸ್ಥೈರ್ಯವು ಹೆಚ್ಚಾಗಿದೆ. ವೈದ್ಯರ ತಂಡವು ನಿತ್ಯ ಕಾರ್ಮಿಕರೊಂದಿಗೆ ಮಾತನಾಡುತ್ತಿದ್ದು, ಅವರ ಆರೋಗ್ಯ ಮತ್ತು ಮಾನಸಿಕ ಪರಿಸ್ಥಿತಿಗಳ ಬಗ್ಗೆ ವಿಚಾರಿಸುತ್ತಿದೆ’ ಎಂದರು. 

ಕೊರೆಯುವ ಯಂತ್ರಕ್ಕೆ ಬುಧವಾರ ರಾತ್ರಿ ಕಬ್ಬಿಣದ ಮೆಶ್‌ ಅಡ್ಡಿಯಾಗಿ ಕಾರ್ಯಾಚರಣೆ ಆರು ತಾಸು ಸ್ಥಗಿತಗೊಂಡಿತು. ಅದನ್ನು ತೆರವು
ಗೊಳಿಸಿದ ಬಳಿಕ ಗುರುವಾರ ಬೆಳಿಗ್ಗೆ ಮತ್ತೆ ಕೆಲಸ ಆರಂಭಗೊಂಡಿತು. ಆದರೆ, ರಾತ್ರಿ ಮತ್ತೆ ಸಮಸ್ಯೆ ಉಂಟಾಗಿ ಕಾರ್ಯಾಚರಣೆ ಸ್ಥಗಿತಗೊಂಡಿತು. 

ರಕ್ಷಣಾ ಸಿಬ್ಬಂದಿ 48 ಮೀಟರ್‌ವರೆಗೂ ಸುರಂಗ ಕೊರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ 12–14 ಮೀಟರ್‌ ನಷ್ಟು ಕೊರೆದರೆ ಕಾರ್ಮಿಕರನ್ನು ತಲುಪಬಹುದು. ನಂತರ ಅವರನ್ನು ಹೊರಗೆ ತರಲು ಅನುಕೂಲವಾಗುತ್ತದೆ.  

ಉತ್ತರಕಾಶಿ ಮತ್ತು ಡೆಹ್ರಾಡೂನ್‌ನಿಂದ ಬಂದಿರುವ ವೈದ್ಯರು, ಮನೋವೈದ್ಯರ ತಂಡ ಘಟನಾ ಸ್ಥಳದಲ್ಲಿ ಬೀಡುಬಿಟ್ಟಿದೆ. ರಕ್ಷಣಾ ಸಿಬ್ಬಂದಿ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಕಾರ್ಮಿಕರೊಂದಿಗೆ ಅರ್ಧ ತಾಸು ಮಾತನಾಡುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಎನ್‌ಡಿಆರ್‌ಎಫ್ ತಾಲೀಮು: ಸುರಂಗದೊಳಗಿರುವ ಕಾರ್ಮಿಕರನ್ನು ವೀಲ್ ಸ್ಟ್ರೆಚರ್‌ ಮೇಲೆ ಮಲಗಿಸಿ ಹೊರತರುವ ಬಗ್ಗೆ ಎನ್‌ಡಿಆರ್‌ಎಫ್ ಶುಕ್ರವಾರ ತಾಲೀಮು ನಡೆಸಿತು.

ಸುರಂಗದ ಕೊನೆಯಲ್ಲಿ ಹಗ್ಗಕ್ಕೆ ಕಟ್ಟಿದ ವೀಲ್ ‌ಸ್ಟ್ರೆಚರ್ ಅನ್ನು ತಳ್ಳುತ್ತಾ ಪೈಪ್‌ ಮೂಲಕ ಎನ್‌ಡಿಆರ್‌ಎಫ್ ಸಿಬ್ಬಂದಿಯೊಬ್ಬರು ಸ್ವಲ್ಪ ದೂರ ಸಾಗಿದರು. ವೀಲ್ ಸ್ಟ್ರೆಚರ್‌ ಮೇಲೆ ಅವರು ಕೆಳಮುಖವಾಗಿ ಮಲಗಿದರು. ನಂತರ ಸ್ಟ್ರೆಚರ್ ಅನ್ನು‌ ಹಗ್ಗದಿಂದ ಹಿಂದಕ್ಕೆ ಎಳೆಯಲಾಯಿತು. ಸುರಂಗದ ಅವೇಶಷಗಳ ಅಡಿ  800 ಮಿಲಿ ಮೀಟರ್‌ ವ್ಯಾಸದ ಉಕ್ಕಿನ ಪೈಪ್‌ಗಳನ್ನು ಅಳವಡಿಸಲಾಗಿದ್ದು, ಈ ಪೈಪ್‌ ಮೂಲಕ ಕಾರ್ಮಿಕರು ಹೊರ ಬರುತ್ತಾರೆ.  

‘ಪೈಪ್‌ಗಳ ಒಳಗೆ ಸಾಕಷ್ಟು ಸ್ಥಳವಿತ್ತು. ಕಾರ್ಯಾಚರಣೆ ಸಮಯದಲ್ಲಿ ಉಸಿರಾಡಲು ಯಾವುದೇ ತೊಂದರೆ ಇರಲಿಲ್ಲ’ ಎಂದು ಎನ್‌ಡಿಆರ್‌ಎಫ್‌ ಸಿಬ್ಬಂದಿ ತಿಳಿಸಿದರು.

ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಗುರುವಾರದಿಂದ ಮಟ್ಲಿಯಲ್ಲಿ ಮೊಕ್ಕಾಂ ಹೂಡಿದ್ದು, ರಕ್ಷಣಾ ಕಾರ್ಯಾಚರಣೆ ಗಮನಿಸುತ್ತಿದ್ದಾರೆ. ಅವರ ದೈನಂದಿನ ಕರ್ತವ್ಯಗಳನ್ನು ನಿರ್ವಹಿಸಲು ಸಹಾಯ ಮಾಡಲು ಮುಖ್ಯಮಂತ್ರಿ ಕಚೇರಿಯ ತಾತ್ಕಾಲಿಕ ಶಿಬಿರವನ್ನು ಅಲ್ಲಿ ಸ್ಥಾಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT