ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಚನ್‌ಜುಂಗಾ ರೈಲು ಅಪಘಾತ | ದುರಾಡಳಿತದ ನೇರ ಪರಿಣಾಮ: ಖರ್ಗೆ, ರಾಹುಲ್ ಕಿಡಿ

Published 17 ಜೂನ್ 2024, 12:20 IST
Last Updated 17 ಜೂನ್ 2024, 12:20 IST
ಅಕ್ಷರ ಗಾತ್ರ

ನವದೆಹಲಿ: ಪಶ್ಚಿಮ ಬಂಗಾಳದ ರೈಲು ಅಪಘಾತದಲ್ಲಿ ಮೃತಪಟ್ಟವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ. ಇದೇ ವೇಳೆ ಅವರು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಖರ್ಗೆ, 'ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಈ ಸುದ್ದಿ ನನಗೆ ಅತೀವ ದುಃಖ ತಂದಿದೆ. ಅಪಘಾತದ ದೃಶ್ಯಗಳು ಮನಕಲಕುವಂತಿವೆ. ಸಂತ್ರಸ್ತರ ಕುಟುಂಬಗಳೊಂದಿಗೆ ನಾವಿದ್ದೇವೆ. ಮೃತರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇವೆ. ಸಂತ್ರಸ್ತರಿಗೆ ಕೂಡಲೇ ಪರಿಹಾರ ನೀಡಬೇಕು' ಎಂದು ಒತ್ತಾಯಿಸಿದ್ದಾರೆ.

ಕಳೆದ 10 ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ರೈಲ್ವೆ ಸಚಿವಾಲಯವನ್ನು ಸಂಪೂರ್ಣವಾಗಿ ಅವ್ಯವಸ್ಥೆಗೆ ತಳ್ಳಿದೆ. ಮೋದಿ ನೇತೃತ್ವದ ಸರ್ಕಾರವು ರೈಲ್ವೆ ಸಚಿವಾಲಯವನ್ನು ಸ್ವಪ್ರಚಾರದ ವೇದಿಕೆಯನ್ನಾಗಿ ಹೇಗೆ ವ್ಯವಸ್ಥಿತವಾಗಿ ಪರಿವರ್ತಿಸಿದೆ ಎಂಬುದನ್ನು ಒತ್ತಿಹೇಳುವುದು ಜವಾಬ್ದಾರಿಯುತ ಪ್ರತಿಪಕ್ಷವಾಗಿ ನಮ್ಮ ಕರ್ತವ್ಯ ಎಂದು ಖರ್ಗೆ ಹೇಳಿದ್ದಾರೆ.

ಸೋಮವಾರ ನಡೆದ ದುರಂತವು ಈ ಕಟು ವಾಸ್ತವಕ್ಕೆ ಇನ್ನೊಂದು ನಿದರ್ಶನ. ಅನ್ಯತಾ ಭಾವಿಸುವ ಅಗತ್ಯವಿಲ್ಲ. ನಾವು ಪ್ರಶ್ನಿಸುವುದನ್ನು ಮುಂದುವರಿಸುತ್ತೇವೆ. ಭಾರತೀಯ ರೈಲ್ವೆಯನ್ನು ಮರೆತು ಕ್ರಿಮಿನಲ್ ಅಪರಾಧ ಎಸಗಿರುವ ಮೋದಿ ನೇತೃತ್ವದ ಸರ್ಕಾರವನ್ನು ಹೊಣೆಗಾರ ಆಗಿಸುವ ಕೆಲಸವನ್ನು ನಾವು ಮಾಡುತ್ತೇವೆ’ ಎಂದಿದ್ದಾರೆ.

'ಪಶ್ಚಿಮ ಬಂಗಾಳದಲ್ಲಿ ಕಾಂಚನಜುಂಗಾ ಎಕ್ಸ್‌ಪ್ರೆಸ್ ಅಪಘಾತದಲ್ಲಿ ಅನೇಕರು ಮೃತಪಟ್ಟ ಸುದ್ದಿ ಅತ್ಯಂತ ದುಃಖಕರವಾಗಿದೆ. ಎಲ್ಲಾ ದುಃಖಿತ ಕುಟುಂಬಗಳಿಗೆ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ' ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಸಂತ್ರಸ್ತರಿಗೆ ಸರ್ಕಾರ ತಕ್ಷಣ ಸಂಪೂರ್ಣ ಪರಿಹಾರ ಬಿಡುಗಡೆ ಮಾಡಬೇಕು. ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕೆ ಅಗತ್ಯವಿರುವ ನೆರವು ನೀಡುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ದುರಾಡಳಿತ, ನಿರ್ಲಕ್ಷ್ಯದ ನೇರ ಪರಿಣಾಮ:

'ಕಳೆದ 10 ವರ್ಷಗಳಲ್ಲಿ ರೈಲ್ವೆ ಅಪಘಾತಗಳ ಹೆಚ್ಚಳವು ಮೋದಿ ಸರ್ಕಾರದ ದುರಾಡಳಿತ ಮತ್ತು ನಿರ್ಲಕ್ಷ್ಯದ ನೇರ ಪರಿಣಾಮವಾಗಿದೆ. ಇದರಿಂದಾಗಿ ಪ್ರಯಾಣಿಕರ ಜೀವ ಮತ್ತು ಆಸ್ತಿ ನಷ್ಟವಾಗುತ್ತಿದೆ. ಇಂದಿನ ಅಪಘಾತ ಇದಕ್ಕೆ ಮತ್ತೊಂದು ಉತ್ತಮ ಉದಾಹರಣೆಯಾಗಿದೆ. ಜವಾಬ್ದಾರಿಯುತ ಪ್ರತಿಪಕ್ಷವಾಗಿ ನಾವು ಈ ಭಯಾನಕ ನಿರ್ಲಕ್ಷ್ಯವನ್ನು ಖಂಡಿಸುತ್ತೇವೆ. ಈ ಅಪಘಾತಗಳಿಗೆ ಮೋದಿ ಸರ್ಕಾರ ನೇರ ಹೊಣೆ' ಎಂದು ರಾಹುಲ್‌ ಗಾಂಧಿ ದೂರಿದ್ದಾರೆ.

ಪಶ್ಚಿಮ ಬಂಗಾಳದ ರಂಗಪಾಣಿ ನಿಲ್ದಾಣದ ಬಳಿ ಸೀಲ್ದಾಹ್‌ಗೆ ತೆರಳುತ್ತಿದ್ದ ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 15 ಜನ ಮೃತಪಟ್ಟು, 60 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT