ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಶ್ಚಿಮ ಬಂಗಾಳದಲ್ಲಿ ರೈಲು ಅಪಘಾತ: 9 ಮಂದಿ ಸಾವು

ಸುರಕ್ಷತಾ ಆಯುಕ್ತರಿಂದ ತನಿಖೆ * ಪರಿಹಾರ ಘೋಷಣೆ * ಸಿಗ್ನಲ್ ಲೋಪ?
Published 17 ಜೂನ್ 2024, 5:58 IST
Last Updated 17 ಜೂನ್ 2024, 5:58 IST
ಅಕ್ಷರ ಗಾತ್ರ

ನ್ಯೂ ಜಲಪಾಇಗುಡಿ /ಕೋಲ್ಕತ್ತ/ ನವದೆಹಲಿ: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ ರೈಲಿಗೆ ಸರಕು ಸಾಗಣೆ ರೈಲು ಹಿಂದಿನಿಂದ ಡಿಕ್ಕಿಹೊಡೆದು, ಎಕ್ಸ್‌ಪ್ರೆಸ್‌ ರೈಲಿನ ಹಿಂದಿನ ನಾಲ್ಕು ಬೋಗಿಗಳು ಹಳಿತಪ್ಪಿದ ಪರಿಣಾಮವಾಗಿ ಒಂಬತ್ತು ಜನ ಮೃತಪಟ್ಟಿದ್ದಾರೆ, 41 ಮಂದಿಗೆ ಗಾಯಗಳಾಗಿವೆ.

ಸೋಮವಾರ ಬೆಳಿಗ್ಗೆ ಈ ದುರ್ಘಟನೆ ಸಂಭವಿಸಿದೆ. ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ರೈಲು ಅಗರ್ತಲಾದಿಂದ ಸಿಯಾಲದಹ ಕಡೆಗೆ ಸಾಗುತ್ತಿತ್ತು. 

ಸರಕು ಸಾಗಣೆ ರೈಲಿನ ಪೈಲಟ್ ಹಾಗೂ ಸಹಪೈಲಟ್, ಪ್ರಯಾಣಿಕ ರೈಲಿನ ಗಾರ್ಡ್‌ ಕೂಡ ಮೃತಪಟ್ಟಿದ್ದಾರೆ ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಗಾಯಗೊಂಡವರನ್ನು ಉತ್ತರ ಬಂಗಾಳದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸರಕು ಸಾಗಣೆ ರೈಲಿನ ಎಂಜಿನ್‌ ಡಿಕ್ಕಿ ಹೊಡೆದ ಪರಿಣಾಮವಾಗಿ ಪ್ರಯಾಣಿಕ ರೈಲಿನ ಹಿಂದಿನ ನಾಲ್ಕು ಬೋಗಿಗಳು ಹಳಿತಪ್ಪಿದವು. ಪ್ರಯಾಣಿಕ ರೈಲು ಉತ್ತರ ಬಂಗಾಳದ ನ್ಯೂ ಜಲಪಾಇಗುಡಿ ನಿಲ್ದಾಣದಿಂದ 30 ಕಿ.ಮೀ. ದೂರದಲ್ಲಿ, ರಂಗಾಪಾಣಿ ನಿಲ್ದಾಣದ ಸನಿಹದಲ್ಲಿ ಇತ್ತು. 

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ದ್ವಿಚಕ್ರ ವಾಹನವೊಂದರ ಹಿಂಬದಿಯಲ್ಲಿ ಕುಳಿತು ಅಪಘಾತ ನಡೆದ ಸ್ಥಳ ತಲುಪಿದರು. ಅಪಘಾತ ನಡೆದ ಸ್ಥಳಕ್ಕೆ ತಲುಪಲು ಅಗಲವಾದ ರಸ್ತೆ ಇಲ್ಲದಿದ್ದ ಕಾರಣ, ಅವರಿಗೆ ಅಲ್ಲಿಗೆ ದೊಡ್ಡ ವಾಹನದಲ್ಲಿ ತೆರಳಲು ಆಗಲಿಲ್ಲ.

ದುರ್ಘಟನೆಗೆ ಕಾರಣ ಏನು ಎಂಬ ಬಗ್ಗೆ ರೈಲ್ವೆ ಸುರಕ್ಷತಾ ಆಯುಕ್ತರು ತನಿಖೆ ಆರಂಭಿಸಿದ್ದಾರೆ ಎಂದು ವೈಷ್ಣವ್ ತಿಳಿಸಿದ್ದಾರೆ. ಈ ಅಪಘಾತ ಸಂಭವಿಸಲು ಕಾರಣವಾದ ಸಂದರ್ಭ ಮತ್ತೊಮ್ಮೆ ಎದುರಾಗದಂತೆ ನೋಡಿಕೊಳ್ಳಲು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ದೇಶದ ಈಶಾನ್ಯ ಭಾಗವನ್ನು ಇತರ ಪ್ರದೇಶಗಳೊಂದಿಗೆ ಬೆಸೆಯುವ ರೈಲು ಮಾರ್ಗದಲ್ಲಿ ಸಂಚಾರವು ಸಹಜ ಸ್ಥಿತಿಗೆ ಬರುವಂತೆ ಮಾಡುವುದು ಮೊದಲ ಆದ್ಯತೆಯ ಕೆಲಸ ಎಂದು ಸಚಿವರು ಹೇಳಿದ್ದಾರೆ.

ರೈಲ್ವೆ ಅಧಿಕಾರಿಗಳು ನೀಡಿದ ಪ್ರಾಥಮಿಕ ಮಾಹಿತಿ ಅನ್ವಯ, ನಿಂತಿದ್ದ ಪ್ರಯಾಣಿಕ ರೈಲಿಗೆ ಸರಕು ಸಾಗಣೆ ರೈಲು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆಯು ವಿಫಲಗೊಂಡಿದ್ದ ಕಾರಣಕ್ಕೆ ಸರಕು ಸಾಗಣೆ ರೈಲಿಗೆ ಎಲ್ಲ ರೆಡ್‌ ಸಿಗ್ನಲ್‌ಗಳನ್ನು ದಾಟಿ ಹೋಗಲು ಅವಕಾಶ ನೀಡಲಾಗಿತ್ತು ಎಂಬುದು ರೈಲ್ವೆಯ ಆಂತರಿಕ ದಾಖಲೆಗಳಿಂದ ಗೊತ್ತಾಗಿದೆ.

ಎಲ್ಲ ರೆಡ್‌ ಸಿಗ್ನಲ್‌ಗಳನ್ನು ದಾಟಲು ಸರಕು ಸಾಗಣೆ ರೈಲಿನ ಚಾಲಕನಿಗೆ ರಾಣಿಪತ್ರ ನಿಲ್ದಾಣದ ಸ್ಟೇಷನ್‌ ಮಾಸ್ಟರ್‌ ಅನುಮತಿ ನೀಡಿದ್ದರು ಎಂದು ಮೂಲಗಳು ಹೇಳಿವೆ. ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ ರೈಲು ರಂಗಾಪಾಣಿ ನಿಲ್ದಾಣದಿಂದ ಬೆಳಿಗ್ಗೆ 8.27ಕ್ಕೆ ಹೊರಟು, ರಂಗಾಪಾಣಿ ಹಾಗೂ ಛತ್ತರ್‌ ಹಾಟ್‌ ನಡುವೆ ನಿಂತಿತ್ತು. ಅದು ಅಲ್ಲಿ ನಿಂತಿದ್ದಕ್ಕೆ ಕಾರಣ ಗೊತ್ತಾಗಿಲ್ಲ ಎಂದು ಮೂಲವೊಂದು ಹೇಳಿದೆ.

ಅಪಘಾತ ನಡೆದ ಸ್ಥಳದಲ್ಲಿ ಥಂಡಿ ಗಾಳಿ ಬೀಸುತ್ತಿರುವುದು ಪರಿಹಾರ ಕಾರ್ಯಗಳಿಗೆ ಅಡ್ಡಿ ಉಂಟುಮಾಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈಗಿನ ದುರಂತವು ಒಡಿಶಾದಲ್ಲಿ ಒಂದು ವರ್ಷದ ಹಿಂದೆ ನಡೆದ ಕೋರಮಂಡಲ್ ಎಕ್ಸ್‌ಪ್ರೆಸ್‌ ದುರಂತದ ನೆನಪು ಮರುಕಳಿಸುವಂತೆ ಮಾಡಿದೆ. ಕೋರಮಂಡಲ್ ಎಕ್ಸ್‌ಪ್ರೆಸ್‌ ದುರಂತದಲ್ಲಿ ಅಂದಾಜು 300 ಮಂದಿ ಪ್ರಾಣ ಕಳೆದುಕೊಂಡಿದ್ದರು, ಒಂದು ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಅಪಘಾತ ನಡೆದ ನಂತರದಲ್ಲಿ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ ರೈಲು, ಹಾನಿ ಆಗಿರದ ಬೋಗಿಗಳಲ್ಲಿನ ಪ್ರಯಾಣಿಕರನ್ನು ಹೊತ್ತು ಕೋಲ್ಕತ್ತ ಕಡೆ ತೆರಳಿತು. ಅಪಘಾತದ ಕಾರಣದಿಂದಾಗಿ ಹಲವು ರೈಲುಗಳ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಗುವಾಹಟಿ–ಬೆಂಗಳೂರು ಎಕ್ಸ್‌ಪ್ರೆಸ್ ಸೇರಿದಂತೆ ಕೆಲವು ರೈಲುಗಳ ಮಾರ್ಗಬದಲಿಸಲಾಯಿತು.

ಕಾಂಚನ್‌ಜುಂಗಾ ರೈಲಿನ ಬೋಗಿಯೊಂದರಲ್ಲಿ ಇದ್ದ ಪ್ರಯಾಣಿಕರೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡರು. ತಮ್ಮ ಬೋಗಿಯನ್ನು ಇದ್ದಕ್ಕಿದ್ದಂತೆ ನೂಕಿದಂತಾಯಿತು, ನಂತರ ಕರ್ಕಶ ಧ್ವನಿಯೊಂದಿಗೆ ಬೋಗಿಯು ನಿಂತಿತು ಎಂದು ಅವರು ತಿಳಿಸಿದ್ದಾರೆ.

‘ಅಪ್ಪ–ಅಮ್ಮ ಇಲ್ಲದಂತಾದ ರೈಲ್ವೆ’

ರೈಲ್ವೆಯು ಅಪ್ಪ–ಅಮ್ಮ ಇಲ್ಲದಂತಹ ಸ್ಥಿತಿ ತಲುಪಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂರಿದ್ದಾರೆ. ಮಮತಾ ಅವರು ಈ ಹಿಂದೆ ರೈಲ್ವೆ ಸಚಿವರಾಗಿಯೂ ಕೆಲಸ ಮಾಡಿದ್ದಾರೆ.

ರೈಲ್ವೆ ಇಲಾಖೆಯು ಸೇವಾ ಶುಲ್ಕವನ್ನು ಹೆಚ್ಚಿಸಲು ಮಾತ್ರ ಆಸಕ್ತಿ ತೋರುತ್ತಿದೆ, ಪ್ರಯಾಣಿಕರಿಗೆ ನೀಡುವ ಸೌಲಭ್ಯಗಳನ್ನು ಸುಧಾರಿಸಲು ಆಸಕ್ತಿ ತೋರುತ್ತಿಲ್ಲ ಎಂದು ಹೇಳಿದ್ದಾರೆ.

‘ರೈಲ್ವೆ ಸಚಿವಾಲಯ ಇದೆಯಾದರೂ, ಹಳೆಯ ವೈಭವ ಕಾಣುತ್ತಿಲ್ಲ. ಅಂದ ಹೆಚ್ಚಿಸುವ ಕೆಲಸ ಮಾತ್ರ ಮಾಡಲಾಗುತ್ತಿದೆ. ಆದರೆ ಅವರಿಗೆ ಪ್ರಯಾಣಿಕರಿಗೆ ಒದಗಿಸಬೇಕಿರುವ ಸೌಲಭ್ಯಗಳ ಬಗ್ಗೆ ಕಾಳಜಿ ಇಲ್ಲ’ ಎಂದು ಮಮತಾ ಆರೋಪಿಸಿದರು.

ಪಶ್ಚಿಮ ಬಂಗಾಳದಲ್ಲಿ ನಡೆದ ರೈಲು ಅಪಘಾತವು ಖೇದಕರ. ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪಗಳು. ರೈಲ್ವೆ ಅಧಿಕಾರಿಗಳ ಜೊತೆ ಮಾತನಾಡಿ, ಪರಿಸ್ಥಿತಿಯ ಮಾಹಿತಿ ಪಡೆದಿದ್ದೇನೆ.
–ನರೇಂದ್ರ ಮೋದಿ, ಪ್ರಧಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT