ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ಮೊದಲ ಅಥವಾ ಕುಟುಂಬವೋ? ಯುದ್ಧಸ್ಮಾರಕ ಉದ್ಘಾಟನೆಯಲ್ಲಿ ಪ್ರಧಾನಿ ಮೋದಿ ಪ್ರಶ್ನೆ

Last Updated 25 ಫೆಬ್ರುವರಿ 2019, 14:29 IST
ಅಕ್ಷರ ಗಾತ್ರ

ನವದೆಹಲಿ:ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ 25,942 ಯೋಧರ ನೆನಪಿನಲ್ಲಿ ನಿರ್ಮಿಸಿರುವ ಭಾರತದ ಮೊದಲ ರಾಷ್ಟ್ರೀಯ ಯುದ್ಧಸ್ಮಾರಕ ಉದ್ಘಾಟನೆಗೊಳಿಸಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ಗೆ ಮಾತಿನ ಚಾಟಿ ಬೀಸಿದರು.

ಸೋಮವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ‘ಕುಟುಂಬ ಮೊದಲ ಅಥವಾ ದೇಶ ಮೊದಲ’ ಎಂದು ಪ್ರಶ್ನಿಸಿದರು. ದೆಹಲಿ ಹೃದಯ ಭಾಗದಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕ ಸ್ಥಳದಲ್ಲಿ ನೆರೆದಿದ್ದ ನೂರಾರು ಯೋಧಕರು, ಭಾರತ್‌ ಮಾತಾ ಕಿ ಜೈಎಂಬ ಘೋಷಣೆ ಮೂಲಕ ಪ್ರತಿಕ್ರಿಯಿಸಿದರು.

‘ಈ ಹಿಂದೆ ಯೋಧರನ್ನು ಹೇಗೆ ನಡೆಸಿಕೊಂಡಿದ್ದಾರೆ ಎಂಬುದು ನನಗಿಂತಲೂ ನಿಮಗೇ ಚೆನ್ನಾಗಿ ತಿಳಿದಿದೆ... ಬೋಫೋರ್ಸ್‌ನಿಂದ ಹೆಲಿಕಾಪ್ಟರ್‌ ವರೆಗಿನ ಎಲ್ಲ ತನಿಖೆಗಳೂ ಒಂದೇ ಕುಟುಂಬದಲ್ಲಿಯೇ ಕೊನೆಯಾಗುತ್ತವೆ. ಇದು ಬಹಳಷ್ಟನ್ನು ಹೇಳುತ್ತದೆ’ ಎಂದ ಪ್ರಧಾನಿ, ರಫೇಲ್‌ ಯುದ್ಧ ವಿಮಾನಗಳು ಭಾರತಕ್ಕೆ ಬಾರದಂತೆ ತಡೆಯುವ ಪ್ರಯತ್ನವನ್ನು ಕಾಂಗ್ರೆಸ್‌ ಮಾಡುತ್ತಿದೆ ಎಂದರು.

'ಕೆಲವೇ ತಿಂಗಳಲ್ಲಿ ಭಾರತದ ಆಗಸದಲ್ಲಿ ದೇಶದ ಮೊದಲ ರಫೇಲ್‌ ಹಾರಾಡುತ್ತಿದ್ದಂತೆ ಅವರ ಎಲ್ಲ ಪಿತೂರಿಗಳೂ ಕೊನೆಗಳ್ಳಲಿವೆ' ಎಂದು ಹೇಳಿದರು.

ಹುತಾತ್ಮರಿಗೆ ಗೌರವ ಸಲ್ಲಿಸುವುದರಿಂದ ಬಹುಶಃ ಅವರಿಗೆ ಯಾವುದೇ ರಾಜಕೀಯ ಲಾಭವಾಗದಿರಬಹುದು ಎಂದು ಕಾಂಗ್ರೆಸಿಗರನ್ನು ಮೂದಲಿಸಿದ ಪ್ರಧಾನಿ ಮೋದಿ, ಶಸ್ತ್ರಸ್ತ್ರ ಪಡೆಗಳು ಬೇಡಿಕೆ ಇಟ್ಟಿದ್ದ 1,46,000 ಗುಂಡು ನಿರೋಧಕ ಜಾಕೆಟ್‌ಗಳನ್ನು ಪೂರೈಸುವಲ್ಲಿಯೂ ಅವರು ವಿಫಲರಾದರು. ಇಂಥ ಜಾಕೆಟ್‌ಗಳು ಇಲ್ಲದೆಯೇ ನಮ್ಮ ಯೋಧರು ಶತ್ರುಗಳೊಂದಿಗೆ ಎದುರುಗೊಳ್ಳುತ್ತಿದ್ದಾರೆ. 2009–2014ರ ವರೆಗೂ...ಅವರ ಬೇಡಿಕೆಗಳು ಈಡೇರಲಿಲ್ಲ. ಕಳೆದ ಐದು ವರ್ಷಗಳಲ್ಲಿ ನಾವು 2,30,000ಕ್ಕೂ ಅಧಿಕ ಗುಂಡು ನಿರೋಧಕ ಜಾಕೆಟ್‌ಗಳನ್ನು ಖರೀದಿಸಿದ್ದೇವೆ ಎಂದರು.

ಪ್ರಧಾನಿಗೂ ಮುನ್ನ ಮಾತನಾಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, ’ಇಂದು ನಮಗೆ ಅಗತ್ಯವಿರುವುದು ಪ್ರಧಾನಿ ಮೇಲೆ ನಿಮ್ಮ ನಂಬಿಕೆ. ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ನಮ್ಮ ಮೊದಲ ಆದ್ಯತೆಯಾಗಿದೆ’ ಎಂದು ಹೇಳಿದರು.

ಯುದ್ಧ ಸ್ಮಾರಕ:ಇಂಡಿಯಾ ಗೇಟ್ ಸಮೀಪ 40 ಎಕರೆ ವಿಸ್ತೀರ್ಣದಲ್ಲಿ ಸ್ಮಾರಕ ತಲೆ ಎತ್ತಿದೆ. ನಾಲ್ಕು ಕೇಂದ್ರೀಕೃತ ವಲಯಗಳನ್ನು ನಿರ್ಮಿಸಲಾಗಿದ್ದು, ಪುರಾತನ ಚಕ್ರವ್ಯೂಹ ಯುದ್ಧತಂತ್ರಗಾರಿಕೆಯನ್ನು ಇದು ಸಂಕೇತಿಸುತ್ತದೆ. 15 ಅಡಿ ಎತ್ತರದ ಸ್ತಂಭದ ಮೇಲೆ ಇರಿಸಿರುವ ಜ್ಯೋತಿಯನ್ನು ಬೆಳಗುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸ್ಮಾರಕ ಲೋಕಾರ್ಪಣೆ ಮಾಡಿದರು.

ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಅಥವಾ ವಿದೇಶಿ ಗಣ್ಯರು ಆಗಮಿಸಿದಾಗ ಈ ಸ್ಮಾರಕದ ಮೇಲೆ ಹೂಗುಚ್ಛ ಇರಿಸಲಾಗುತ್ತದೆ.ಅಮರಜವಾನ್ ಜ್ಯೋತಿ ಸ್ಮಾರಕವೂ ಇಲ್ಲಿಗೆ ಸ್ಥಳಾಂತರವಾಗಲಿದೆ. ಪಾಕಿಸ್ತಾನದ ಜೊತೆಗಿನ ಯುದ್ಧ (1947–48 ಮತ್ತು 1965), ಚೀನಾ (1962), ಕಾರ್ಗಿಲ್ ಯುದ್ಧ (1999), ಆಪರೇಷನ್ ಪರಾಕ್ರಮದಲ್ಲಿ (2002–04) ಹುತಾತ್ಮರಾದ ಯೋಧರ ಹೆಸರುಗಳನ್ನು ನೂತನ ಸ್ಮಾರಕದ ಇಟ್ಟಿಗೆಗಳಲ್ಲಿ ಕೆತ್ತಲಾಗಿದೆ.

ಪರಮವೀರ ಚಕ್ರ ಪಡೆದ 21 ಯೋಧರಿಗೆ ವಿಶೇಷ ಗೌರವ ನೀಡಲಾಗಿದೆ. ಕಳೆದ 7 ದಶಕಗಳಲ್ಲಿ ಭಾರತ ನಡೆಸಿದ ಯುದ್ಧಗಳ ಮಾಹಿತಿಯುಳ್ಳ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಗಿದೆ. ಮೊದಲ ಮಹಾಯುದ್ಧ ಹಾಗೂ ಆಂಗ್ಲೊ–ಆಫ್ಗನ್ ಯುದ್ಧದಲ್ಲಿ ಮಡಿದ ಭಾರತದ 83 ಸಾವಿರ ಸೈನಿಕರ ನೆನಪಿನಲ್ಲಿ 1931ರಲ್ಲಿ ಇಂಡಿಯಾ ಗೇಟ್ ನಿರ್ಮಾಣವಾಗಿತ್ತು. ಈ ಸ್ಮಾರಕದಲ್ಲಿ ಸುಮಾರು 13 ಸಾವಿರ ಯೋಧರ ಹೆಸರುಗಳಿವೆ.

₹176 ಕೋಟಿ ವೆಚ್ಚದಲ್ಲಿ ಈ ಸ್ಮಾರಕ ನಿರ್ಮಾಣ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT