ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರಿಷ್ಠರ ತಾಳ್ಮೆ ಪರೀಕ್ಷೆಗೆ ಇಳಿದ ಪೈಲಟ್‌: ಶಿಸ್ತುಕ್ರಮಕ್ಕೆ ಕಾದಿದೆ ನಾಯಕತ್ವ

Published 12 ಮೇ 2023, 20:24 IST
Last Updated 12 ಮೇ 2023, 20:24 IST
ಅಕ್ಷರ ಗಾತ್ರ

ನವದೆಹಲಿ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ವಿರುದ್ಧ ಬಂಡಾಯವೆದ್ದಿರುವ ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌ ವಿರುದ್ಧ ಪಕ್ಷದ ನಾಯಕತ್ವವು ನಿರ್ಣಾಯಕ ಕ್ರಮ ತೆಗೆದುಕೊಳ್ಳುವ ಸಾಧ್ಯತೆಗಳು ಕಾಣಿಸುತ್ತಿವೆ.

ಪಕ್ಷದ ನಾಯಕತ್ವವು ಪೈಲಟ್‌ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಈ ಬಾರಿ ಕಠಿಣ ಕ್ರಮ ತೆಗೆದುಕೊಳ್ಳುವ ಸಲುವಾಗಿ ಕರ್ನಾಟಕದ ವಿಧಾನಸಭೆ ಚುನಾವಣೆಯ ಫಲಿತಾಂಶ ಬರುವುದನ್ನು ಕಾಯುತ್ತಿದೆ ಎಂದು ಮೂಲಗಳು ಹೇಳಿವೆ.   

‘ಪೈಲಟ್‌ ಅವರು ಏಪ್ರಿಲ್‌ನಲ್ಲಿ ನಾಯಕತ್ವದ ವಿರುದ್ಧ ಕಠಿಣ ಹೇಳಿಕೆ ನೀಡಿ, ದಿನದ ಮಟ್ಟಿಗೆ ಉಪವಾಸ ಸತ್ಯಾಗ್ರಹ ನಡೆಸಿದ್ದರೂ ಅವರ ಮೇಲೆ ಕ್ರಮ ತೆಗೆದುಕೊಂಡಿರಲಿಲ್ಲ. ಆದರೆ, ಈ ಬಾರಿ ಅಂತಹ ಮೃದುತ್ವ ತೋರಿಸುವ ಸಾಧ್ಯತೆ ಇಲ್ಲ’ ಎಂದು ಮೂಲಗಳು ತಿಳಿಸಿವೆ.

ಪಕ್ಷದ ಪ್ರಮುಖರ ಮನವಿಗೆ ಮಣಿಯದೇ ಪೈಲಟ್‌ ಅವರು ಗುರುವಾರ ಜನ ಸಂಘರ್ಷ ಪಾದಯಾತ್ರೆಗೆ ಚಾಲನೆ ನೀಡಿದ ಬೆನ್ನಲ್ಲೇ ಪಕ್ಷದ ಕೇಂದ್ರ ನಾಯಕರು, ರಾಜ್ಯದ ಉಸ್ತುವಾರಿ ಸುಖ್‌ಜಿಂದರ್‌ ಸಿಂಗ್‌ ರಾಂಧವಾ ಮತ್ತು ಪಕ್ಷದ ರಾಜಸ್ಥಾನ ರಾಜ್ಯ ಘಟಕ ಅಧ್ಯಕ್ಷ ಗೋವಿಂದ ಸಿಂಗ್‌ ದೊತಾಸ್ರಾ ಸೇರಿ ರಾಜ್ಯ ನಾಯಕರ ಸಭೆ ಕರೆದು, ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದೆ.  

ಸಚಿನ್ ಪೈಲಟ್ ಅವರು ನಡೆಸುತ್ತಿರುವ ಜನ ಸಂಘರ್ಷ ಪಾದಯಾತ್ರೆಯು ವೈಯಕ್ತಿಕವಾದುದು. ಪಕ್ಷ ಈ ಬಗ್ಗೆ ಗಮನ ಹರಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕದಿಂದ ಮರಳಿದ ನಂತರ ಈ ಎಲ್ಲ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ರಾಜಸ್ಥಾನದ ಕಾಂಗ್ರೆಸ್ ಉಸ್ತುವಾರಿ ಸುಖ್‌ಜಿಂದರ್ ಸಿಂಗ್ ರಾಂಧವಾ ಹೇಳಿದ್ದಾರೆ.

‘2020ರಲ್ಲಿ ಪೈಲಟ್‌ ಅವರು ತಮ್ಮ ಸರ್ಕಾರದ ವಿರುದ್ಧ ಬಂಡಾಯ ಸಾರಿದಾಗ ಸರ್ಕಾರ ರಕ್ಷಿಸಿದವರ ಬಗ್ಗೆ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಅವರು ಧೋಲ್‌ಪುರದಲ್ಲಿ ನೀಡಿದ ಹೇಳಿಕೆಗೆ ಈ ಪಾದಯಾತ್ರೆಯು ತಕ್ಷಣದ ಸ್ವಾಭಾವಿಕವಾದ ಪ್ರತಿಕ್ರಿಯೆ ಆಗಿರಲಾರದು ಎನ್ನುವ ಅಭಿಪ್ರಾಯ ಪಕ್ಷದಲ್ಲಿದೆ. ಕೇವಲ ಎರಡು ದಿನಗಳಲ್ಲಿ ಯಾರೊಬ್ಬರೂ ಐದು ದಿನಗಳ ಯಾತ್ರೆ ಯೋಜಿಸುವುದಿಲ್ಲ. ಪೈಲಟ್‌ ಅವರು ಪಕ್ಷದಿಂದ ಹೊರದಬ್ಬಲಿ ಎಂದು ಬಯಸುತ್ತಿದ್ದಾರೆ. ಆದರೆ, ಪಕ್ಷದ ನಾಯಕತ್ವವು ಪೈಲಟ್‌ ಅವರ ಚಟುವಟಿಕೆಗಳ ಮಾದರಿ ಗಮನಿಸಿ, ಅವರ ನಿರ್ಗಮನದ ಹಾದಿ ಅವರೇ ಕಂಡುಕೊಳ್ಳುವಂತೆ ಮಾಡುತ್ತಿದೆ’ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT