ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಘು ವಾಹನಗಳಿಗೆ ವಿನಾಯಿತಿ ನೀಡದಿದ್ದರೆ ಟೋಲ್‌ ಬೂತ್‌ ಸುಡುತ್ತೇವೆ: ರಾಜ್‌ ಠಾಕ್ರೆ

Published 10 ಅಕ್ಟೋಬರ್ 2023, 0:30 IST
Last Updated 10 ಅಕ್ಟೋಬರ್ 2023, 0:30 IST
ಅಕ್ಷರ ಗಾತ್ರ

ಮುಂಬೈ: ‘ಮಹಾರಾಷ್ಟ್ರದಲ್ಲಿ ಲಘು ವಾಹನಗಳಿಗೆ ಟೋಲ್‌ ಶುಲ್ಕದಿಂದ ವಿನಾಯಿತಿ ನೀಡುವುದನ್ನು ಖಚಿತಪಡಿಸದಿದ್ದರೆ ನಮ್ಮ ಪಕ್ಷದ ಕಾರ್ಯಕರ್ತರು ಟೋಲ್‌ ಬೂತ್‌ಗಳಿಗೆ ಬೆಂಕಿ ಹಚ್ಚುತ್ತಾರೆ’ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್‌) ಅಧ್ಯಕ್ಷ ರಾಜ್‌ ಠಾಕ್ರೆ ಮಹಾರಾಷ್ಟ್ರ ಸರ್ಕಾರಕ್ಕೆ ಸೋಮವಾರ ಎಚ್ಚರಿಕೆ ನೀಡಿದ್ದಾರೆ.

2024ರ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗೂ ಮುನ್ನ ಟೋಲ್ ಶುಲ್ಕ ಪಾವತಿ ಕುರಿತ ಜನರ ಸಮಸ್ಯೆಯನ್ನು ಎಂಎನ್‌ಎಸ್‌ ಮುನ್ನೆಲೆಗೆ ತಂದಿದೆ.

ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ರಾಜ್ಯದ ರಾಜಕಾರಣಿಗಳಿಗೆ ಟೋಲ್‌ಬೂತ್‌ಗಳು ಜೀವನೋಪಾಯದ ಮಾರ್ಗವಾಗಿದೆ’ ಎಂದು ಆರೋಪಿಸಿದ ಅವರು, ‘ಇದು ದೊಡ್ಡ ಹಗರಣವಾಗಿದೆ’ ಎಂದು ದೂರಿದರು.

‘ಈ ಸಂಬಂಧ ಮಾತುಕತೆ ನಡೆಸಲು ನಾನು ಮುಖ್ಯಮಂತ್ರಿ ಅವರ ಭೇಟಿಗೆ ಸಮಯ ಕೇಳಿದ್ದೇನೆ. ಸಭೆಯಲ್ಲಿ ಏನಾಗುತ್ತದೆ ಎಂಬುದನ್ನು ನೋಡೋಣ. ಇಲ್ಲದಿದ್ದರೆ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಹೇಳಿಕೆ ಆಧರಿಸಿ ಎಂಎನ್‌ಎಸ್‌ ಕಾರ್ಯಕರ್ತರು ಎಲ್ಲ ಟೋಲ್‌ ಬೂತ್‌ಗಳ ಬಳಿ ಜಮಾಯಿಸುತ್ತಾರೆ. ಅಲ್ಲಿ ನಾಲ್ಕು ಚಕ್ರ, ತ್ರಿ ಚಕ್ರ ಮತ್ತು ದ್ವಿ ಚಕ್ರ ವಾಹನಗಳಿಗೆ ಶುಲ್ಕ ವಿಧಿಸದಂತೆ ನೋಡಿಕೊಳ್ಳುತ್ತಾರೆ. ನಮ್ಮ ಈ ಕಾರ್ಯವನ್ನು ತಡೆಯಲು ಮುಂದಾದರೆ, ಟೋಲ್‌ಗೆ ಬೆಂಕಿ ಹಚ್ಚುತ್ತೇವೆ’ ಎಂದು ರಾಜ್‌ ಎಚ್ಚರಿಸಿದರು.

‘ರಾಜ್ಯದಲ್ಲಿ ಇತ್ತೀಚಿನ ಕೆಲ ವರ್ಷಗಳಲ್ಲಿ ಎಲ್ಲ ರಾಜಕೀಯ ಪಕ್ಷಗಳು ಆಡಳಿತ ನಡೆಸಿವೆ. ಆದರೆ, ಯಾರೊಬ್ಬರೂ ಮಹಾರಾಷ್ಟ್ರವನ್ನು ಟೋಲ್‌ ಮುಕ್ತಗೊಳಿಸುವ ಭರವಸೆಯನ್ನು ಈಡೇರಿಸಿಲ್ಲ’ ಎಂದರು.

‘ರಾಜ್ಯದಲ್ಲಿ ಶಿವಸೇನಾ ಮತ್ತು ಬಿಜೆಪಿ ಮೈತ್ರಿಕೂಟವು ಹಿಂದೆ ಟೋಲ್‌ ಮುಕ್ತ ರಾಜ್ಯದ ಭರವಸೆ ನೀಡಿತ್ತು. ಆದರೆ 2014–19ರ ಅವಧಿಯಲ್ಲಿ ಘಡಣವೀಸ್‌ ನೇತೃತ್ವದ  ಮೈತ್ರಿಕೂಟ ಅಧಿಕಾರದಲ್ಲಿದ್ದಾಗ ಅದು ಈಡೇರಲಿಲ್ಲ. ಬಳಿಕ ಉದ್ಧವ್‌ ಠಾಕ್ರೆ ನೇತೃತ್ವದ ಮಹಾ ವಿಕಾಸ ಅಘಾಡಿ ಅಧಿಕಾರದಲ್ಲಿತ್ತು. ಆಗಲೂ ಈ ವಿಚಾರದಲ್ಲಿ ಏನೂ ಆಗಲಿಲ್ಲ‘ ಎಂಬ ಅಂಶಗಳನ್ನು ರಾಜ್‌ ಠಾಕ್ರೆ ಉಲ್ಲೇಖಿಸಿದ್ದಾರೆ.

‘ಉದ್ಧವ್‌ ಠಾಕ್ರೆ, ದೇವೇಂದ್ರ ಫಡಣವೀಸ್‌, ಅಜಿತ್‌ ಪವಾರ್‌ ಎಲ್ಲರೂ ಟೋಲ್‌ ಮುಕ್ತ ಮಹಾರಾಷ್ಟ್ರದ ಬಗ್ಗೆ ಭರವಸೆ ನೀಡಿದ್ದಾರೆ. ಆದರೆ, ಈಗಲೂ ಟೋಲ್‌ ಶುಲ್ಕ ಪಡೆಯುವುದು ನಿಂತಿಲ್ಲ. ರಸ್ತೆ ಎಷ್ಟೇ ಕೆಟ್ಟದಾಗಿದ್ದರೂ ಈ ರಾಜಕೀಯ ಪಕ್ಷಗಳು ಟೋಲ್‌ಗಳನ್ನು ಮುಚ್ಚಲು ಬಿಡುವುದಿಲ್ಲ. ಈ ವಿಷಯ ಕುರಿತು ಜನರು ಎಚ್ಚೆದ್ದುಕೊಳ್ಳುವುದು ಯಾವಾಗ?’ ಎಂದು ಅವರು ಪ್ರಸ್ನಿಸಿದ್ದಾರೆ.

‘ಟೋಲ್‌ ಸಂಗ್ರಹಿಸುವ ಕುರಿತು ಒಮ್ಮೆ ಗುತ್ತಿಗೆ ಪಡೆದ ಕಂಪನಿಗಳೇ ಪದೇ ಪದೇ ಏಕೆ ಗುತ್ತಿಗೆ ಪಡೆಯುತ್ತಿವೆ’ ಎಂದು ಅವರು ಪ್ರಶ್ನಿಸಿದ್ದಾರೆ.

ಟೋಲ್‌ ಕುರಿತು ರಾಜ್‌ ಠಾಕ್ರೆ ಅವರು ಆಕ್ರೋಶ ಹೊರಹಾಕಿದ ಬೆನ್ನಲ್ಲೇ, ಎಂಎನ್‌ಎಸ್‌ ಕಾರ್ಯಕರ್ತರು ರಾಜ್ಯದ ಕೆಲ ಟೋಲ್‌ ಬೂತ್‌ಗಳ ಬಳಿ ಪ್ರತಿಭಟನೆ ನಡೆಸಿದರು.

ಅಕ್ಟೋಬರ್‌ 1ರಿಂದ ಜಾರಿಗೆ ಬಂದಿರುವ ಟೋಲ್‌ ಹೆಚ್ಚಳವನ್ನು ವಿರೋಧಿಸಿ ನಾಲ್ಕು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪಕ್ಷದ ನಾಯಕ ಅವಿನಾಶ್‌ ಜಾಧವ್‌ ಅವರನ್ನು ರಾಜ್ ಠಾಕ್ರೆ ಭಾನುವಾರ ಭೇಟಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT