ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Monsoon: ಏಕಕಾಲಕ್ಕೆ ಕೇರಳ, ಈಶಾನ್ಯಕ್ಕೆ ಲಗ್ಗೆ

ಅಪರೂಪದ ವಿದ್ಯಮಾನಕ್ಕೆ ಕಾರಣವಾದ ರೀಮಲ್‌ ಚಂಡಮಾರುತ
Published 30 ಮೇ 2024, 23:45 IST
Last Updated 30 ಮೇ 2024, 23:45 IST
ಅಕ್ಷರ ಗಾತ್ರ

ನವದೆಹಲಿ: ನೈರುತ್ಯ ಮುಂಗಾರು ಕೇರಳ ಮತ್ತು ಈಶಾನ್ಯ ಭಾರತವನ್ನು ಏಕಕಾಲಕ್ಕೆ ಗುರುವಾರ ಪ್ರವೇಶಿಸಿದೆ. ಪರಸ್ಪರ ದೂರದಲ್ಲಿರುವ ಎರಡು ಪ್ರದೇಶಗಳು ಒಂದೇ ದಿನ ಮುಂಗಾರು ಮಳೆಯ ಮೊದಲ ಸಿಂಚನ ಸಂಭ್ರಮಿಸಿದ ಅಪರೂಪದ ವಿದ್ಯಮಾನಕ್ಕೆ ದೇಶ ಸಾಕ್ಷಿಯಾದಂತಾಗಿದೆ.

ವಾಡಿಕೆಯಂತೆ ಜೂನ್‌ 1ರಂದು ಕೇರಳ ಪ್ರವೇಶಿಸುವ ಮುಂಗಾರು, ಈಶಾನ್ಯ ಭಾರತವನ್ನು ಜೂನ್‌ 5ರಂದು ತಲುಪುತ್ತದೆ. ಆದರೆ, ಈ ಬಾರಿ ರೀಮಲ್‌ ಚಂಡಮಾರುತದ ಪರಿಣಾಮ ಮುಂಗಾರು ಮಾರುತವು ವಾಡಿಕೆಗಿಂತ ಎರಡು ದಿನ ಮುಂಚಿತವಾಗಿ ಕೇರಳ ಕರಾವಳಿ ತಲುಪಿದ್ದರೆ, ಈಶಾನ್ಯ ಭಾರತದಲ್ಲಿ ಆರು ದಿನ ಮುಂಚಿತವಾಗಿ ಸುರಿದಿದೆ. 

‘ನೈರುತ್ಯ ಮುಂಗಾರು 30ರಂದು ಕೇರಳ ಮತ್ತು ಮಾಹೆ ಪ್ರವೇಶಿಸಿದ್ದು, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯದ ಬಹುತೇಕ ಭಾಗದತ್ತ ಸಾಗಿದೆ’ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಟಣೆ ತಿಳಿಸಿದೆ.

‘ವಾಸ್ತವದಲ್ಲಿ, ಕೇರಳ ಮತ್ತು ಈಶಾನ್ಯ ಭಾರತಕ್ಕೆ ಬೇರೆ ಬೇರೆ ದಿನಗಳಂದು ಮುಂಗಾರು ಮಾರುತ ಪ್ರವೇಶಿಸುತ್ತದೆ. ಎರಡು ಪ್ರತ್ಯೇಕ ಹವಾಮಾನ ಪ್ರಕ್ರಿಯೆಗಳು ಇದಕ್ಕೆ ಕಾರಣ. ಆದರೆ, ಈ ಬಾರಿ ಬಂಗಾಳ ಕೊಲ್ಲಿಯಲ್ಲಿ ಕಂಡುಬಂದ ಚಂಡಮಾರುತವು ವಾತಾವರಣದಲ್ಲಿ ಬದಲಾವಣೆಗೆ ಕಾರಣವಾಗಿದ್ದು, ಇದರಿಂದ ಕೇರಳದ ಜೊತೆಗೆ ಈಶಾನ್ಯ ಭಾರತದಲ್ಲಿಯೂ ಮಳೆ ಬಿದ್ದಿದೆ’ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ವಾಡಿಕೆಗಿಂತ ಮೊದಲೇ ಮುಂಗಾರು ಪ್ರವೇಶವಾಗಿದೆಯಾದರೂ, ಈ ಭಾಗದಲ್ಲಿ ಬೀಳಬಹುದಾದ ಮಳೆ ಪ್ರಮಾಣಕ್ಕೂ ಈ ವಿದ್ಯಮಾನಕ್ಕೂ ಯಾವುದೇ ನಂಟು ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

2017ರಲ್ಲಿ ಈ ರೀತಿ ಏಕಕಾಲಕ್ಕೆ ಮುಂಗಾರು ಪ್ರವೇಶವಾಗಿತ್ತು. ಅದಕ್ಕೂ ಹಿಂದೆ, 1991, 1995 ಹಾಗೂ 1997ರಲ್ಲಿಯೂ ಇಂತಹ ಪ್ರಾಕೃತಿಕ ವಿದ್ಯಮಾನ ಕಂಡುಬಂದಿತ್ತು ಎಂದೂ ಹೇಳಿದ್ದಾರೆ.

‘ಮುಂದಿನ ವಾರ ಕರ್ನಾಟಕದತ್ತ’: ‘ಸದ್ಯದ ಹವಾಮಾನ ಮಾದರಿಗಳ ಪ್ರಕಾರ, ಮುಂದಿನ ವಾರ ಕರ್ನಾಟಕ ಮತ್ತು ಮಹಾರಾಷ್ಟ್ರದತ್ತ ಮುಂಗಾರು ಸಾಗಲಿದೆ. ನಂತರ, 10–15 ದಿನ ಮಳೆ ಬೀಳುವುದಿಲ್ಲ. ಈ ಕಾರಣದಿಂದ, ಮುಂಗಾರು ಮಳೆ ದೇಶದ ಉತ್ತರ ಭಾಗವನ್ನು ತಲುಪುವುದು ವಿಳಂಬವಾಗುವುದು’ ಎಂದು ಹವಾಮಾನ ವಿಜ್ಞಾನಿಯೂ ಆಗಿರುವ ಭೂವಿಜ್ಞಾನಗಳ ಸಚಿವಾಲಯದ ಮಾಜಿ ಕಾರ್ಯದರ್ಶಿ ಎಂ.ರಾಜೀವನ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಜೂನ್‌ ಅವಧಿಯಲ್ಲಿ ಮುಂಗಾರು ದುರ್ಬಲವಾಗಿಯೇ ಇರಲಿದೆ. ಜುಲೈ–ಸೆಪ್ಟೆಂಬರ್‌ ವೇಳೆ ಲಾ ನಿನಾ ಪರಿಣಾಮದಿಂದ ಮತ್ತೆ ಜೋರಾಗಲಿದೆ’ ಎಂದೂ ಅವರು ಹೇಳಿದ್ದಾರೆ.

ಈ ಮೊದಲು, ದೇಶದಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಅಂದರೆ, ಜೂನ್‌ನಿಂದ ಸೆಪ್ಟೆಂಬರ್‌ ಅವಧಿಯಲ್ಲಿ ಬೀಳುವ ಮಳೆ ಸರಾಸರಿ ಶೇ 106ರಷ್ಟು ಆಗಲಿದೆ ಎಂದು ಐಎಂಡಿ ಹೇಳಿತ್ತು. ಈಶಾನ್ಯ ಭಾರತದಲ್ಲಿ ವಾಡಿಕೆಗಿಂತ ಕಡಿಮೆ ಮಳೆ, ದೇಶದ ದಕ್ಷಿಣ ಹಾಗೂ ಕೇಂದ್ರ ಭಾಗದಲ್ಲಿ ವಾಡಿಕೆಗಿಂತ ಹೆಚ್ಚು ಹಾಗೂ ಪಶ್ಚಿಮ ಭಾಗದಲ್ಲಿ ಸಾಮಾನ್ಯ ಮಳೆ ಬೀಳಲಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT