ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಚೀನಾ ಪೇ ಚರ್ಚಾ’ ಯಾವಾಗ: ಮೋದಿಗೆ ಖರ್ಗೆ ಪ್ರಶ್ನೆ

Last Updated 17 ಡಿಸೆಂಬರ್ 2022, 14:06 IST
ಅಕ್ಷರ ಗಾತ್ರ

ನವದೆಹಲಿ: ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಭಾರತ– ಚೀನಾ ನಡುವಿನ ಸಂಘರ್ಷ ಕುರಿತು ಸಂಸತ್ತಿನಲ್ಲಿ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಅವಕಾಶ ನೀಡುತ್ತಿಲ್ಲ ಎಂದು ಶನಿವಾರ ಆರೋಪಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈ ವಿಷಯದಲ್ಲಿ ದೇಶವು ‘ಯಾವಾಗ ಚೀನಾ ಪೇ ಚರ್ಚೆ ನಡೆಸಲಿದೆ’ ಎಂದು ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

‘ಡೋಕ್ಲಾಮ್‌ನಲ್ಲಿ ಸಿಲಿಗುರಿ ಕಾರಿಡಾರ್‌’ನ ಸಮೀಪದ ಜಂಫೇರಿ ಪರ್ವತದವರೆಗೆ ಚೀನಾದ ಸೇನಾ ಪಡೆಗಳು ತಮ್ಮ ನೆಲೆ ನಿರ್ಮಿಸುತ್ತಿರುವುದು ದೇಶದ ಭದ್ರತೆಯ ದೃಷ್ಟಿಯಿಂದ ಕಳವಳಕಾರಿಯಾದ ಸಂಗತಿ. ಈ ವಿಚಾರದಲ್ಲಿ ಪ್ರಧಾನಿ ಅವರು ಯಾವಾಗ ಚರ್ಚೆ ನಡೆಸುತ್ತಾರೆ’ ಎಂದು ಖರ್ಗೆ ಟ್ವೀಟ್‌ನಲ್ಲಿ ಕೇಳಿದ್ದಾರೆ.

‘ಕಾಂಗ್ರೆಸ್ ಕೇಳಿರುವ ಏಳು ಪ್ರಶ್ನೆಗಳಿಗೆ ತಮ್ಮ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಉತ್ತರಿಸುವುದು ಪ್ರಧಾನಿ ಅವರ ರಾಜಕೀಯ ಕರ್ತವ್ಯ ಮತ್ತು ನೈತಿಕ ಜವಾಬ್ದಾರಿಯಾಗಿದೆ’ ಎಂದು ಕಾಂಗ್ರೆಸ್‌ನ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಗಡಿ ವಿಚಾರವಾಗಿ ಭಾರತವು ಚೀನಾದಿಂದ ಎದುರಿಸುತ್ತಿರುವ ಸವಾಲುಗಳ ಕುರಿತು ಸಂಸತ್ತಿನಲ್ಲಿ ಚರ್ಚಿಸಬಾರದು ಎಂದು ಪ್ರಧಾನಿ ಅವರು ಏಕೆ ನಿರ್ಬಂಧ ವಿಧಿಸಿದ್ದಾರೆ ಎಂಬುದನ್ನು ರಾಷ್ಟ್ರವು ತಿಳಿಯಲು ಬಯಸುತ್ತಿದೆ’ ಎಂದೂ ಅವರು ಹೇಳಿದ್ದಾರೆ.

‘ನೀವು ಚೀನಾದ ಉನ್ನತ ನಾಯಕರನ್ನು ಸುಮಾರು 18 ಬಾರಿ ಭೇಟಿ ಮಾಡಿದ್ದೀರಿ. ಅಷ್ಟೇ ಅಲ್ಲ, ಇತ್ತೀಚೆಗಷ್ಟೇ ಬಾಲಿಯಲ್ಲಿ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರನ್ನು ಭೇಟಿ ಮಾಡಿ, ಹಸ್ತಲಾಘವ ಕೂಡಾ ಮಾಡಿದ್ದೀರಿ. ಚೀನಾವು ತವಾಂಗ್‌ ಅನ್ನು ಅತಿಕ್ರಮಿಸಲು ಯತ್ನಿಸುವ ಮೂಲಕ ಗಡಿಯಲ್ಲಿ ಬೆದರಿಕೆ ಒಡ್ಡುವ ತಂತ್ರ ರೂಪಿಸುತ್ತಿದೆ. ಈ ವಿಚಾರದಲ್ಲಿ ನೀವು ಏಕೆ ರಾಷ್ಟ್ರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ’ ಎಂದೂ ಅವರು ಪ್ರಶ್ನಿಸಿದ್ದಾರೆ.

‘2020ರ ಜೂನ್ 20ರಂದು ಪೂರ್ವ ಲಡಾಖ್‌ನ ಭಾರತದ ಭೂಪ್ರದೇಶದ ಮೇಲೆ ಚೀನಾವು ಯಾವ ಆಕ್ರಮಣವನ್ನೂ ನಡೆಸಿಲ್ಲ ಎಂದು ಪ್ರಧಾನಿ ಅವರು ಏಕೆ ಹೇಳಿದರು?ಪಿ.ಎಂ ಕೇರ್ಸ್ ಫಂಡ್‌ಗೆ ಕೊಡುಗೆ ನೀಡಲು ಚೀನಾದ ಕಂಪನಿಗಳಿಗೆ ಏಕೆ ಅವಕಾಶ ನೀಡಿದ್ದೀರಿ? ಕಳೆದ ಎರಡು ವರ್ಷಗಳಲ್ಲಿ ಚೀನಾದಿಂದ ದಾಖಲೆ ಮಟ್ಟದಲ್ಲಿ ಆಮದು ಮಾಡಿಕೊಳ್ಳಲು ಏಕೆ ಅನುಮತಿ ನೀಡಿದ್ದೀರಿ’ ಎಂದೂ ಅವರು ಪ್ರಶ್ನಿಸಿದ್ದಾರೆ.

‘ಚೀನಾವು ಯುದ್ಧಕ್ಕೆ ತಯಾರಿ ನಡೆಸುತ್ತಿರುವಾಗ ಕೇಂದ್ರ ಸರ್ಕಾರವು ನಿದ್ರಿಸುತ್ತಿದೆ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಬಿಜೆಪಿಯು ತೀವ್ರ ಖಂಡನೆ ವ್ಯಕ್ತಪಡಿಸಿ, ಪ್ರತಿಕ್ರಿಯೆಗಳನ್ನು ನೀಡಿತ್ತು. ಇದರ ಬೆನ್ನಲ್ಲೇ ಕಾಂಗ್ರೆಸ್ ಪ್ರಧಾನಿ ಅವರನ್ನು ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳನ್ನು ಕೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT