ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಯವರೇ, ಸಂಸತ್ ಭವನದ ಉದ್ಘಾಟನೆಗೆ ರಾಷ್ಟ್ರಪತಿ ಏಕೆ ಬರಬಾರದು ತಿಳಿಸಿ: ಕಮಲ್ ಹಾಸನ್

Published 27 ಮೇ 2023, 12:41 IST
Last Updated 27 ಮೇ 2023, 12:41 IST
ಅಕ್ಷರ ಗಾತ್ರ

ಚೆನ್ನೈ: ನೂತನ ಸಂಸತ್ ಭವನದ ಉದ್ಘಾಟನೆ ಸಮಾರಂಭಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಏಕೆ ಆಗಮಿಸಬಾರದು? ಎಂದು ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಿದ್ದಾರೆ.

ಪ್ರಧಾನಿ ಮೋದಿ ಅವರು ಮೇ 28ರಂದು (ಭಾನುವಾರ) ನೂತನ ಸಂಸತ್‌ ಭವನವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಇದನ್ನು ಟೀಕಿಸಿರುವ ವಿರೋಧ ಪಕ್ಷಗಳು, ಸಂಸತ್‌ ಭವನದ ಉದ್ಘಾಟನಾ ಸಮಾರಂಭಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಅಹ್ವಾನಿಸದಿರುವುದು ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಮಾಡುವ ಅವಮಾನ ಎಂದು ಆರೋಪಿಸಿವೆ.

ಕಾಂಗ್ರೆಸ್‌, ಆಮ್‌ ಆದ್ಮಿ ಪಕ್ಷ (ಎಎಪಿ), ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಹಾಗೂ ಸಮಾಜವಾದಿ ಪಕ್ಷ (ಎಸ್‌ಪಿ) ಸೇರಿದಂತೆ 19 ವಿರೋಧ ಪಕ್ಷಗಳು, ಸಂಸತ್‌ ಭವನದ ಉದ್ಘಾಟನಾ ಸಮಾರಂಭ ಬಹಿಷ್ಕರಿಸುವುದಾಗಿ ಘೋಷಿಸಿವೆ.

ಈ ಬಗ್ಗೆ ನಗರದಲ್ಲಿ ಮಾತನಾಡಿರುವ ಕಮಲ್‌, ಎಲ್ಲ ರಾಜಕೀಯ ಪಕ್ಷಗಳು ಭಿನ್ನಾಭಿಪ್ರಾಯಗಳನ್ನು ಬದಿಗಿಡಬೇಕು. ಉದ್ಘಾಟನಾ ಸಮಾರಂಭವನ್ನು ರಾಷ್ಟ್ರೀಯ ಐಕ್ಯತೆಯ ವಿಶೇಷ ಸಂದರ್ಭವನ್ನಾಗಿಸಬೇಕು ಎಂದು ಮನವಿ ಮಾಡಿದ್ದಾರೆ.

ಹೊಸ ಸಂಸತ್‌ ಭವನದಲ್ಲಿ ಎಲ್ಲ ಪಕ್ಷದ ಸದಸ್ಯರೂ ಇರಬೇಕಾಗುತ್ತದೆ ಎಂದಿರುವ ಕಮಲ್‌, ಅಸಮಾಧಾನಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ ಮತ್ತು ಹೊಸ ಸಂಸತ್ತಿನಲ್ಲಿಯೂ ಪ್ರಸ್ತಾಪಿಸಬಹುದು. ಹಾಗಾಗಿ, ಬಹಿಷ್ಕಾರ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸಲಹೆ ನೀಡಿದ್ದಾರೆ.

ಮಕ್ಕಳ್‌ ನೀಧಿ ಮಯಂ (ಎಂಎನ್‌ಎಂ) ಪಕ್ಷದ ಮುಖ್ಯಸ್ಥರೂ ಆಗಿರುವ ಕಮಲ್‌, 'ಜಗತ್ತಿನ ಕಣ್ಣು ನಮ್ಮ ಮೇಲಿದೆ. ಹಾಗಾಗಿ ನೂತನ ಸಂಸತ್ತಿನ ಉದ್ಘಾಟನಾ ಸಮಾರಂಭವನ್ನು ರಾಷ್ಟ್ರೀಯ ಐಕ್ಯತಾ ವಿಶೇಷ ಸಂದರ್ಭವಾಗಿಸಬೇಕಿದೆ. ನಮ್ಮ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮುಂದೂಡೋಣ' ಎಂದು ಕಿವಿಮಾತು ಹೇಳಿದ್ದಾರೆ.

ಕಮಲ್‌ ಅವರು ತಮಿಳುನಾಡು ವಿಧಾನಸಭೆಗೆ 2021ರಲ್ಲಿ ನಡೆದ ಚುನಾವಣೆಯಲ್ಲಿ, ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಎಂಎನ್‌ಎಂ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು.

ಸಂಸತ್‌ ಭವನದ ಉದ್ಘಾಟನೆಯು ಹೆಮ್ಮೆಯ ವಿಚಾರ ಎಂದಿರುವ ಕಮಲ್‌, 'ಈ ಐತಿಹಾಸಿಕ ಸಾಧನೆಗಾಗಿ ಭಾರತ ಸರ್ಕಾರವನ್ನು ಅಭಿನಂದಿಸುತ್ತೇನೆ. ಸಮಾರಂಭಕ್ಕೆ ಗೌರವಾನ್ವಿತ ರಾಷ್ಟ್ರಪತಿಯವರಿಗೆ ಆಹ್ವಾನ ನೀಡದಿರುವ ಬಗ್ಗೆ ಮತ್ತು ಉದ್ಘಾಟನಾ ಸಮಾರಂಭದ ಯೋಜನೆಯಲ್ಲಿ ವಿರೋಧ ಪಕ್ಷಗಳು ಪಾಲ್ಗೊಳ್ಳದಿರುವ ಬಗ್ಗೆ ಅಸಮಾಧಾನ ಉಳಿಸಿಕೊಂಡು ದೇಶದ ದೃಷ್ಟಿಯಿಂದ ನಾನು ಉದ್ಘಾಟನೆಯಲ್ಲಿ ಪಾಲ್ಗೊಳ್ಳುತ್ತೇನೆ'

'ಆದರೆ, ದೇಶದ ಹೆಮ್ಮೆಯ ಈ ಕ್ಷಣವು ರಾಜಕೀಯ ವಿಭಜನೆಗೆ ಸಾಕ್ಷಿಯಾಗಿದೆ. ಪ್ರಧಾನಮಂತ್ರಿಯವರಿಗೆ ಒಂದು ಸರಳ ಪ್ರಶ್ನೆ ಕೇಳುತ್ತೇನೆ. ನೂತನ ಸಂಸತ್ ಭವನದ ಉದ್ಘಾಟನೆ ಸಮಾರಂಭಕ್ಕೆ ಭಾರತದ ರಾಷ್ಟ್ರಪತಿ ಅವರು ಏಕೆ ಹಾಜರಾಗಬಾರದು? ದಯವಿಟ್ಟು ಇದನ್ನು ದೇಶದ ಜನರಿಗೆ ತಿಳಿಸಿ. ಇಂತಹ ಐತಿಹಾಸಿಕ ಕ್ಷಣದಲ್ಲಿ ದೇಶದ ಮುಖ್ಯಸ್ಥರು ಪಾಲ್ಗೊಳ್ಳಬಾರದು ಎಂಬುದಕ್ಕೆ ನನಗಂತೂ ಯಾವ ಕಾರಣವೂ ಕಾಣುತ್ತಿಲ್ಲ' ಎಂದು ಕೇಂದ್ರಕ್ಕೂ ಚಾಟಿ ಬೀಸಿದ್ದಾರೆ.

'ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸುವಂತೆ ಪ್ರಧಾನಿಗೆ ಸಲಹೆ ನೀಡುತ್ತೇನೆ. ಹೊಸ ಸಂಸತ್‌ ಭವನ ಸಾಮಾನ್ಯ ಕಟ್ಟಡವಲ್ಲ. ಅದು ಭಾರತದ ಪ್ರಜಾಪ್ರಭುತ್ವದ ನೆಲೆಯಾಗಿ ಅನಾದಿಕಾಲದವರೆಗೂ ಇರುತ್ತದೆ. ಪ್ರಧಾನಿಯವರು ಈ (ರಾಷ್ಟ್ರಪತಿಯವರಿಗೆ ಆಹ್ವಾನ ನೀಡದಿರುವ) ಪ್ರಮಾದವನ್ನು ಸರಿಪಡಿಸಬೇಕು. ಇದಲ್ಲವಾದರೆ, ಇದು ಘೋರ ದೋಷವಾಗಿ ಇತಿಹಾಸದಲ್ಲಿ ದಾಖಲಾಗುತ್ತದೆ. ಒಂದು ವೇಳೆ ಇದನ್ನು ಸರಿಪಡಿಸಿದರೆ, ರಾಜಕೀಯ ನಾಯಕತ್ವದ ಮೈಲುಗಲ್ಲಾಗುತ್ತದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಂಸತ್ತಿನಲ್ಲಿ ಅಂಗೀಕಾರಗೊಳ್ಳುವ ಮಸೂದೆಗಳಿಗೆ ರಾಷ್ಟ್ರಪತಿಯವರು ಸಮ್ಮತಿಸಿದರೆ ಮಾತ್ರ ದೇಶದ ಕಾನೂನುಗಳಾಗುತ್ತವೆ. ಸಂಸತ್‌ ಕಲಾಪವನ್ನು ಕರೆಯುವ ಹಾಗೂ ಮುಂದೂಡುವ ಅಧಿಕಾರವನ್ನು ಹೊಂದಿರುವ ಅವರು, ಸಂಸತ್ತಿನ ಅವಿಭಾಜ್ಯ ಅಂಗವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT