ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈಲ ಪೂರೈಕೆಗೆ ತೊಡಕಾಗದು

ಸೌಲಭ್ಯ ಕಡಿತದ ಎಚ್ಚರಿಕೆ ಬೆನ್ನಲ್ಲೇ ಇರಾನ್‌ನಿಂದ ಭಾರತಕ್ಕೆ ಭರವಸೆ
Last Updated 11 ಜುಲೈ 2018, 18:54 IST
ಅಕ್ಷರ ಗಾತ್ರ

ನವದೆಹಲಿ/ ಹೈದರಾಬಾದ್:ಭಾರತಕ್ಕೆ ಕಚ್ಚಾತೈಲ ಪೂರೈಸುವದರಲ್ಲಿ ಯಾವುದೇ ತೊಡಕಾಗದಂತೆ ಎಚ್ಚರವಹಿಸುತ್ತೇವೆ ಎಂದು ಇರಾನ್ ಭರವಸೆ ನೀಡಿದೆ.

‘ಭಾರತವು ಈಗ ಎದುರಿಸುತ್ತಿರುವ ಜಾಗತಿಕ ಸವಾಲುಗಳ ಬಗ್ಗೆ ನಮಗೆ ಅರಿವಿದೆ’ ಎಂದು ಇರಾನ್ ಹೇಳಿದೆ.

‘ನಮ್ಮಿಂದ ಕಚ್ಚಾ ತೈಲ ಆಮದನ್ನು ನಿಲ್ಲಿಸಿದರೆ, ನಾವು ನೀಡುತ್ತಿರುವ ವಿಶೇಷ ಸೌಲಭ್ಯಗಳನ್ನು ಭಾರತವು ಕಳೆದುಕೊಳ್ಳಬೇಕಾಗುತ್ತದೆ’ ಎಂದು ಇರಾನ್‌ನ ರಾಜತಾಂತ್ರಿಕ ಅಧಿಕಾರಿಯೊಬ್ಬರು ಭಾರತಕ್ಕೆ ಮಂಗಳವಾರ ಎಚ್ಚರಿಕೆ ನೀಡಿದ್ದರು.

ಜೂನ್‌ನಲ್ಲಿ ಭಾರತವು ಇರಾನ್‌ನಿಂದ ವಾಡಿಕೆಗಿಂತ ಕಡಿಮೆ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಭಾರತಕ್ಕೆ ಇರಾನ್‌ನ ಉಪರಾಯಭಾರಿಯಾಗಿರುವಮಸ್ಸೌದ್ ರಿಜ್ವಾನಿಯನ್ ರಹಾಘಿ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಮಾತು ಹೇಳಿದ್ದರು.

‘ಇರಾನ್ ಮತ್ತು ಭಾರತದ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಎರಡೂ ದೇಶಗಳು ದೃಢ ನಿರ್ಧಾರ ಮಾಡಬೇಕು. ಏಕ ಸ್ವರೂಪದ ಬ್ಯಾಂಕಿಂಗ್ ವ್ಯವಸ್ಥೆ ರಚಿಸಬೇಕು. ಇದರಿಂದ ಇಬ್ಬರಿಗೂ ಅನುಕೂಲವಾಗುತ್ತದೆ’ ಎಂದು ಅವರು ಹೇಳಿದ್ದರು.

‘ಚಾಬಹಾರ್ ಬಂದರು ಅಭಿವೃದ್ಧಿಗೆ ಹಣ ಹೂಡುವುದಾಗಿ ಭಾರತ ಹೇಳಿತ್ತು. ಆದರೆ ಭರವಸೆ ನೀಡಿದಷ್ಟು ಹಣ ನೀಡಿಲ್ಲ. ಅಭಿವೃದ್ಧಿ ನಿಧಾನಗತಿಯಲ್ಲಿ ನಡೆಯುತ್ತಿದೆ. ಭಾರತಕ್ಕೆ ಇದು ಮುಖ್ಯವೇ ಆಗಿದ್ದರೆ, ತಕ್ಷಣವೇ ಬಂದರು ಅಭಿವೃದ್ಧಿ ಕಾರ್ಯಕ್ರಮವನ್ನು ಚುರುಕುಗೊಳಿಸಲಿ’ ಎಂದೂ ರಹಾಘಿಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಹೇಳಿಕೆಗೆ ಭಾರತವು ಅಧಿಕೃತ ವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ‘ಇದನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ’ ಎಂದು ಇರಾನ್‌ಗೆ ಭಾರತದ ರಾಯಭಾರಿಯಾಗಿದ್ದ ತಲ್ಮೀಜ್ ಅಹಮದ್ ಬುಧವಾರ ಹೇಳಿದ್ದಾರೆ. ಅವರು ಈಗ ಸೇವೆಯಿಂದ ನಿವೃತ್ತರಾಗಿದ್ದಾರೆ.

‘ಎರಡು ದೇಶಗಳ ಮಧ್ಯೆ ಯಾವುದೇ ಒಪ್ಪಂದವಾಗಿದ್ದರೆ, ಎರಡೂ ದೇಶಗಳ ಹಿತಾಸಕ್ತಿಯನ್ನು ಪರಿಗಣಿಸಲಾಗಿರುತ್ತದೆ. ಒಪ್ಪಂದ ರದ್ದಾದರೆ ಎರಡು ದೇಶಗಳಿಗೂ ನಷ್ಟವಾಗುತ್ತದೆ. ಹೀಗಾಗಿ ಭಾರತದ ವಿರುದ್ಧ ಇರಾನ್ ಅಂತಹ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ’ ಎಂದು ಅಹಮದ್ ವಿವರಿಸಿದ್ದಾರೆ.

ಅದರ ಬೆನ್ನಲ್ಲೇ ಇರಾನ್ ಈ ಭರವಸೆ ನೀಡಿದೆ.

ಇರಾನ್‌ನ ಅಣ್ವಸ್ತ್ರ ಕಾರ್ಯಕ್ರಮಗಳ ಕಾರಣ ಅದರ ಮೇಲೆ ಅಮೆರಿಕವು ನಿರ್ಬಂಧ ಹೇರಿದೆ. ನಿರ್ಬಂಧದ ಭಾಗವಾಗಿ ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವುದನ್ನು ನವೆಂಬರ್‌ನಿಂದ ನಿಲ್ಲಿಸಿ ಎಂದು ಅಮೆರಿಕವು ಭಾರತಕ್ಕೆ ಸೂಚನೆ ನೀಡಿತ್ತು. ಇರಾನ್‌ನಿಂದ ತೈಲ ಆಮದು ಪ್ರಮಾಣವನ್ನು ಭಾರತ ತಗ್ಗಿಸಿದೆ.

***

ಇರಾನ್‌ನ ಬದಲಿಗೆ ಸೌದಿ ಅರೇಬಿಯಾ, ಕುವೈತ್, ರಷ್ಯಾ ಮತ್ತು ಅಮೆರಿಕಗಳಿಂದ ಇಂಧನ ಖರೀದಿಸಿದರೆ, ಭಾರತಕ್ಕೆ ಅದು ಆರ್ಥಿಕವಾಗಿ ಹೊರೆಯಾಗಲಿದೆ
– ಮಸ್ಸೌದ್ ರಿಜ್ವಾನಿಯನ್ ರಹಾಘಿ ಭಾರತಕ್ಕೆ ಇರಾನ್‌ನ ಉಪರಾಯಭಾರಿ

***

ಇಂತಹ ಗಂಭೀರ ಮತ್ತು ಸೂಕ್ಷ್ಮ ವಿಚಾರದಲ್ಲಿ ಒಬ್ಬ ರಾಜತಾಂತ್ರಿಕ ಅಧಿಕಾರಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ.ಇದನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ
–ತಲ್ಮೀಜ್ ಅಹಮದ್, ಭಾರತದ ಮಾಜಿ ರಾಜತಾಂತ್ರಿಕ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT