ಮುಂಬೈ: ಮುಂಬೈನ ಮಲಾಡ್ ಪ್ರದೇಶದಲ್ಲಿ 26 ವರ್ಷದ ಮಹಿಳೆಯೊಬ್ಬರಿಗೆ ಎಸ್‌ಯುವಿ ಕಾರೊಂದು ಡಿಕ್ಕಿಯಾಗಿದ್ದು, ಮಹಿಳೆ ಮೃತಪಟ್ಟಿದ್ದಾರೆ.
ಶಹಾನಾ ಕಾಝಿ ಮೃತ ಮಹಿಳೆಯಾಗಿದ್ದು, ಕಾರು ಚಾಲಕನನ್ನು ವಾಣಿಜ್ಯ ನೌಕಾಪಡೆ ಅಧಿಕಾರಿ ಅನುಪ್ ಸಿನ್ಹಾ ಎಂದು ಗುರುತಿಸಲಾಗಿದೆ.
ಮಂಗಳವಾರ ರಾತ್ರಿ 10 ಗಂಟೆಯ ವೇಳೆಯಲ್ಲಿ ಮಹಿಳೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿರುವಾಗ ಕಾರು ಡಿಕ್ಕಿ ಹೊಡೆದಿದೆ. ಬಳಿಕ ಕಾರು ಚಾಲಕ ಅನುಪ್ ಅವರೇ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ಸದ್ಯ ಅನುಪ್ ಅವರನ್ನು ಬಂಧಿಸಲಾಗಿದೆ ಎಂದು ಮಲಾಡ್ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿ ಅನುಪ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರ ಕಾರನ್ನು ವಶಕ್ಕೆ ಪಡೆಯಲಾಗಿದೆ. ಅನುಪ್ ಅವರು ಅಂಧೇರಿಯಲ್ಲಿ ನೌಕಾಪಡೆ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ರಜೆಯ ನಿಮಿತ್ತ ಮುಂಬೈಗೆ ಬಂದಿದ್ದರು. ಅನುಪ್ ಕುಡಿದು ವಾಹನ ಚಲಾಯಿಸುತ್ತಿದ್ದರೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅವರ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.